ಬೀದರ: ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ಕಾಗದ ಬಳಕೆ ಕಡಿಮೆ ಮಾಡಲು, ಕಡತಗಳನ್ನು ಬೇಗ ವಿಲೇವಾರಿ ಮಾಡುವ ಉದ್ದೇಶದಿಂದ ಸರ್ಕಾರ ಇ-ಆಫೀಸ್ ತಂತ್ರಾಂಶ ಜಾರಿ ಮಾಡುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹೇಳಿದರು.
ಜಿಲ್ಲಾ ರಂಗಮಂದಿರದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಬೆಂಗಳೂರು, ಆಡಳಿತ ತರಬೇತಿ ಸಂಸ್ಥೆ ಮೈಸೂರು, ಜಿಲ್ಲಾಡಳಿತ ಬೀದರ ಆಶ್ರಯದಲ್ಲಿ ಆಯೋಜಿಸಿದ್ದ ಬೀದರ ಜಿಲ್ಲೆಯ ಎ ವೃಂದದ ಅಧಿಕಾರಿಗಳಿಗೆ ವಾರ್ಷಿಕ ವಿದ್ಯುನ್ಮಾನ ಕಾರ್ಯನಿರ್ವಹಣಾ ವರದಿ ಹಾಗೂ ಈ ಕಚೇರಿಯ ಬಗ್ಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಧಿಕಾರಿಗಳು ತಮ್ಮ ತಮ್ಮ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಅಳವಡಿಕೊಳ್ಳಬೇಕು. ಇದು ಅತ್ಯಂತ ಗಂಭೀರ ವಿಷಯವೆಂದು ಪರಿಗಣಿಸಬೇಕು ಎಂದು ಸಲಹೆ ನೀಡಿದರು. ಇ-ಆಫೀಸ್ ನಿರ್ವಹಣೆ ಮಾಡಿದಲ್ಲಿ ಎಲ್ಲ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಕಡತಗಳ ಮೇಲೆ ದಿನಾಂಕ ಮತ್ತು ಸಮಯ ನಮೂದಾಗುತ್ತದೆ. ಯಾರ ಫೈಲ್ ಯಾರ ಬಳಿ ಇದೆ ಎಂದು ಹುಡುಕಲು ಮತ್ತು ಕಡತದ ಸ್ಥಿತಿ ನೋಡಲು ಬಹಳ ಸುಲಭವಾಗುತ್ತದೆ. ಇಲ್ಲಿ ವಿಳಂಬಕ್ಕೆ ಅವಕಾಶವೇ ಇರುವುದಿಲ್ಲ. ಇ-ಆಫೀಸ್‌ನಲ್ಲಿ ನೋಟ್ಸೀಟ್, ಕಡತ ಯಾವ ಹಂತದಲ್ಲಿದೆ ಎನ್ನುವ ಎಲ್ಲ ಮಾಹಿತಿಯನ್ನು ಮೇಲಾಧಿಕಾರಿಗಳು ಗಮನಿಸುತ್ತಾರೆ. ಇದರಿಂದ ನಾವು ಜಾಗೃತರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ತಪ್ಪುಗಳು ಮತ್ತೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಇ-ಕಚೇರಿ ಸಹಾಯವಾಗುತ್ತದೆ ಎಂದು ಹೇಳಿದರು.
ಆವಕ, ಜಾವಕ ವಹಿಗಳ ನಿರ್ವಹಣೆಯನ್ನು ಬಹುತೇಕ ಕಚೇರಿಗಳಲ್ಲಿ ಸರಿಯಾಗಿ ಮಾಡುವುದಿಲ್ಲ. ಬೇರೆ ಬೇರೆ ಕಚೇರಿಯಿಂದ ಬರುವ ಪ್ರಮುಖ ಪತ್ರಗಳು ಯಾರದೋ ಬಳಿಯಲ್ಲಿ ಉಳಿದುಬಿಡುವ ಇಲ್ಲವೇ ಅಧಿಕಾರಿಯವರಿಗೆ ಸಾಕಷ್ಟು ತಡವಾಗಿ ಸಿಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಎಲ್ಲಾ ತೊಂದರೆ ತಪ್ಪಬೇಕು ಎಂದರೆ ನಾವೆಲ್ಲರೂ ಇ-ಕಚೇರಿ ಮಾದರಿ ಅಳವಡಿಸಿಕೊಳ್ಳಲು ಸಿದ್ಧರಾಗಬೇಕು ಎಂದು ಹೇಳಿದರು.
ಎನ್‌ಐಸಿಯ ಶ್ರೀನಿವಾಸ, ವೀರೇಂದ್ರ ಬೊಮ್ಮ, ಸಂದೀಪ ಪಾಟೀಲ, ಸಂಜೀವ ದಾಳೆ, ಅಮರ ರಸೂರ, ಸಯ್ಯದ್ ಅಬೀದ್, ಶಶಿಕಾಂತ, ವಾಶಿಮ್ ಅವರು ತರಬೇತಿ ನೀಡಿದರು. ಈ ವೇಳೆ ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತ ಡಾ| ಶಂಕರ ವಣಕ್ಯಾಳ, ಜ್ಞಾನೇಂದ್ರಕುಮಾರ ಗಂಗವಾರ, ಡಿವೈಎಸ್‌ಪಿಗಳಾದ ವಿ.ಎನ್.ಪಾಟೀಲ, ಮಹೇಶ್ವರಪ್ಪ, ಪ್ರೊಬೇಷನರಿ ಡಿವೈಎಸ್‌ಪಿ ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.