Advertisement

ಮಿತ ಮಾತಿನಿಂದ ಸುಂದರ ಬದುಕು: ಸಂಗಮೇಶ್ವರ ಶ್ರೀ

04:21 PM May 13, 2019 | Naveen |

ಬೀದರ: ಪ್ರಚಲಿತ ಸಂದರ್ಭದಲ್ಲಿ ಮಾತುಗಳು ಚಲಾವಣೆಯಲ್ಲಿ ಇಲ್ಲದ ನಾಣ್ಯಗಳಾಗಿದ್ದು, ನಿತ್ಯದ ಬದುಕು ಸುಂದರವಾಗಬೇಕಾದರೆ ನಮ್ಮ ಮಾತುಗಳು ಬೇರೆಯವರಿಗೆ ಸುಖ-ಶಾಂತಿ ಮತ್ತು ಸಂತೋಷ ನೀಡುವಂತಿರಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪದ ಶ್ರೀ ಸಂಗಮೇಶ್ವರ ದೇವರು ನುಡಿದರು.

Advertisement

ನಗರದ ಪ್ರಸಾದ ನಿಲಯದಲ್ಲಿ ನಡೆದ 104ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ನೂರಾರು ಶರಣರು, ಸಂತರು ವಿಶ್ವದ ಮೂಲೆ ಮೂಲೆಯಿಂದ ಕಲ್ಯಾಣಕ್ಕೆ ಪಯಣ ಬಯಸಿ ಬಂದರು. ಶರಣರ ವಚನಗಳು ಅಂತರಂಗದ ಮಹಾ ಬೆಳಕಾಗಿದ್ದು, ಮಾನವ ಜನಾಂಗದ ಕಲ್ಯಾಣ ವಚನಗಳಲ್ಲಿ ಅಡಗಿದೆ. ನಮ್ಮ ನುಡಿಗಳು ಲಿಂಗದ ನುಡಿಗಳಾಗಬೇಕು. ಲೋಕದ ಅನುಭಾವದ ಜೊತೆಗೆ ಲಿಂಗದ ಅನುಭಾವವಾಗಬೇಕು. ಮಾತು ಮುತ್ತಿನಂತೆ, ಸ್ಪಟಿಕದಂತೆ, ಪ್ರಕಾಶಿಸುವಂತಿರಬೇಕು. ಈ ದಿಶೆಯಲ್ಲಿ ನಮ್ಮ ನುಡಿಗಳು ಜ್ಯೋತಿರ್ಲಿಂಗದಂತೆ ಹೊಳೆಯುತ್ತ ಇರಬೇಕು. ಆಗ ಮಾತ್ರ ಮಾನವ ಜೀವನ ಸ್ವರ್ಗವಾಗುತ್ತದೆ ಎಂದು ಪ್ರತಿಪಾದಿಸಿದರು.

ಔರಾದನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ಸೂರ್ಯಕಾಂತ ಚಿದ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವಾದಿ ಶರಣರ ವಚನಗಳಲ್ಲಿ ಬದುಕಿನ ಮೌಲ್ಯ ಅಡಗಿದೆ. ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಬಸವ ತತ್ವವನ್ನು ಆಚರಣೆಯಲ್ಲಿ ತರಬೇಕು. ಯುವಜನಾಂಗದವರು ಉತ್ತಮ ಸಂಸ್ಕೃತಿ, ಸಂಸ್ಕಾರ ಪಡೆದುಕೊಂಡು ಹಿರಿಯರ, ತಂದೆ-ತಾಯಿಯವರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯ, ಆಧಾತ್ಮಿಕ ಮೌಲ್ಯದಿಂದ ಮಾನವ ಜನ್ಮದ ಶ್ರೇಷ್ಠತೆಯನ್ನು ಸದುಪಯೋಗ ಪಡಿಸಿಕೊಂಡು ಸಮಾಜಕ್ಕೆ ಬೆಳಕಾಗಬೇಕು ಎಂದು ಸಲಹೆ ನೀಡಿದರು.

ಬೀದರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ರಾಜಕುಮಾರ ಅಲ್ಲೂರೆ ಮಾತನಾಡಿ, ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದಲ್ಲಿ 12ನೇ ಶತಮಾನದ ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವು ವಿಶ್ವ ಸಾಹಿತ್ಯದಲ್ಲಿ ಶ್ರೇಷ್ಠ ಸ್ಥಾನ ಪಡೆಯಬೇಕಾದರೆ ಪ್ರತಿಯೊಬ್ಬರು ವಚನಗಳ ಪಠಣ ಮಾಡಬೇಕು. ವಚನಗಳ ಸಾರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಉತ್ತಮ ಮಾತುಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಬಸವಣ್ಣನವರು ಸಮಾಜಕ್ಕೆ ನಡೆ-ನುಡಿ-ಉಣ್ಣಲಿಕ್ಕೆ ಮತ್ತು ಬದುಕು ಯಾವ ರೀತಿ ಮಾಡಬೇಕೆಂಬುವುದನ್ನು ಕಲಿಸಿದ ಆದರ್ಶ ಗುರುಗಳಾಗಿದ್ದರು. ಬಹುರೂಪಿ ಚೌಡಯ್ಯನವರು ತಮ್ಮ ವಚನದಲ್ಲಿ ಮಿತ ಭೋಜನ, ಮಿತ ಮಾತು ಮತ್ತು ಮಿತ ನಿದ್ರೆ ಇದ್ದರೆ ವ್ಯಕ್ತಿ ಶಾರೀರಕವಾಗಿ, ಮಾನಸಿಕವಾಗಿ ಆರೋಗ್ಯವಂತನಾಗಿರುತ್ತಾನೆ ಎಂದು ತಿಳಿಸಿದ್ದಾರೆ. ವ್ಯಕ್ತಿಯ ಮನಸ್ಸು ಅರಳಬೇಕಾದರೆ ಮಾತುಗಳು ಮಾಣಿಕ್ಯದಂತಿರಬೇಕು ಎಂದು ವಿವರಿಸಿದರು.

Advertisement

ಪ್ರೊ| ಎಸ್‌.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ದೇಶಾಂಶ ಹುಡಗಿ, ಪಂಚಾಕ್ಷರಿ ಪುಣ್ಯಶೆಟ್ಟಿ, ಚನ್ನಬಸಪ್ಪ ನೌಬಾದೆ, ಶಿವಲಿಂಗ ಯರಗಲ್, ಶಕುಂತಲಾ ಕಾಶೀನಾಥ, ಪ್ರೊ| ಉಮಾಕಾಂತ ಮೀಸೆ, ಶ್ರೀಕಾಂತ ಸ್ವಾಮಿ, ಗುರುನಾಥ ಬಿರಾದಾರ, ಮಲ್ಲಿಕಾರ್ಜುನ ಹುಡಗಿ, ಶಿವಕುಮಾರ ಭಾಲ್ಕೆ, ಸೂರ್ಯಕಾಂತ ಮಾಳಗೆ, ಲಕ್ಷ್ಮೀಬಾಯಿ ಮಾಳಗೆ, ಅಶೋಕ ಮಾನಕೇರಿ, ಶ್ರೀಕಾಂತ ಸ್ವಾಮಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next