Advertisement

ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ

12:40 PM Jul 31, 2019 | Naveen |

ಬೀದರ: ಅಗತ್ಯವಿರುವಲ್ಲಿ ಮತ್ತು ಬೇಡಿಕೆ ಇರುವ ಕಡೆಗಳಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಮತ್ತು ವ್ಯಾಪಕ ಪ್ರಮಾಣದಲ್ಲಿ ಸಸಿ ನೆಡಲು ಒತ್ತು ಕೊಡಬೇಕು ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಗೀತಾ ಪಂಡಿತರಾವ್‌ ಚಿದ್ರಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ನಗರದ ತಾಲೂಕು ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಬೀದರ ತಾಲೂಕು ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಆಯಾ ಇಲಾಖೆಯ ಜವಾಬ್ದಾರಿ ಏನು ಎಂಬುದನ್ನು ಅರಿತು ಆಯಾ ಇಲಾಖೆಗಳ ಅಧಿಕಾರಿಗಳು ಕೆಲಸ ಮಾಡಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಹಳ್ಳಿಗಳಲ್ಲಿ ಮತ್ತು ವಸತಿ ನಿಲಯಗಳಿಗೆ ಕೂಡಲೇ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜನವಾಡದಲ್ಲಿರುವ ವಸತಿ ನಿಲಯವೊಂದಕ್ಕೆ ಒಂದೂವರೆ ವರುಷದಿಂದ ಕುಡಿಯುವ ನೀರಿಗೆ ತೊಂದರೆ ಎದುರಾಗಿದೆ. ಪಕ್ಕದ ತೋಟದಿಂದ ನೀರು ಪಡೆದುಕೊಳ್ಳುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ನಮ್ಮಲ್ಲಿರುವ ವಸತಿ ನಿಲಯವೊಂದಕ್ಕೆ ನೀರಿಲ್ಲದಂತಾಗಿದೆ ಎಂದು ಕಪಲಾಪುರ ಪಿಡಿಒ ತಿಳಿಸಿದರು.

ಹಲವಾರು ವಸತಿ ನಿಲಯಗಳಿಗೆ ಈಗಾಗಲೇ ನಾನು ಭೇಟಿ ನೀಡಿದ್ದು, ಅಲ್ಲಿ ಅಡುಗೆ ವ್ಯವಸ್ಥೆ ಸರಿಯಾಗಿಲ್ಲ. ಕುಡಿಯುವ ನೀರಿನ ತೊಂದರೆ ಕಾಣುತ್ತಿದೆ. ಇದು ತಪ್ಪಬೇಕು. ನಾನು ನಿಮ್ಮ ಕಥೆ ಕೇಳಲು ಬಂದು ಕುಳಿತಿಲ್ಲ. ಬಹಳ ಅಸ್ತವ್ಯಸ್ತ ಇರುವ ಹಾಸ್ಟೆಲ್ಗಳಲ್ಲಿ ಕೂಡಲೇ ಸುಧಾರಣೆಯಾಗಬೇಕು. ಹೆಚ್ಚು ಸಂಖ್ಯೆಯಲ್ಲಿರುವ ಬಡಮಕ್ಕಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅಧ್ಯಕ್ಷರು ಅಧಿಕಾರಿಗೆ ಸೂಚಿಸಿದರು.

ಈಗಾಗಲೇ ಶಾಲೆಗಳಲ್ಲಿ ಸೈಕಲ್ ವಿತರಣೆಗೆ ಒತ್ತು ಕೊಡಲಾಗಿದೆ. ಜೊತೆಗೆ ಪಠ್ಯಪುಸ್ತಕ ವಿತರಣೆಯನ್ನು ಕೂಡ ಸಮರ್ಪಕವಾಗಿ ಮಾಡಲಾಗುತ್ತಿದೆ. ಕಳೆದ ವರ್ಷ ಎಸ್‌ಎಸ್‌ಎಲ್ಸಿಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಬೀದರ ಕ್ಷೇತ್ರ ಶಿಕ್ಷಣಾಧಿಕಾರಿ ಸಭೆಗೆ ತಿಳಿಸಿದರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿರಿ ಎಂದು ಅಧ್ಯಕ್ಷರು ಬಿಇಒ ಅವರಿಗೆ ಸಲಹೆ ನೀಡಿದರು.

Advertisement

ಜಿಲ್ಲೆಯಲ್ಲಿ ಈಗ ಹಸಿ ಶುಂಠಿ ಬೆಳೆಯನ್ನು ಹೆಚ್ಚು ಸಂಖ್ಯೆಯ ರೈತರು ಬೆಳೆಯುತ್ತಿದ್ದಾರೆ. ಕಬ್ಬು ಬೆಳೆ ಪ್ರಮಾಣ ಕಡಿಮೆಯಾಗಿದೆ. ಚೆಂಡು ಹೂವಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ. ನೀರು ಇದ್ದರೆ ಎಲ್ಲಾ ವೇಳೆಯಲ್ಲೂ ಫಲಕೊಡುವ ಕಾರಣ ಬೀದರ ತಾಲೂಕಿನಲ್ಲಿ ಕೆಲವು ರೈತರು ಹೊಸದಾಗಿ ಪೇರಲ ಮತ್ತು ಸೀತಾಫಲ ಬೆಳೆಯುತ್ತಿದ್ದಾರೆ ಎಂದು ತಾಲೂಕು ತೋಟಗಾರಿಕಾ ಇಲಾಖೆಯ ಅಧಿಕಾರಿ ಹೇಳಿದರು.

ಬೀದರ ತಾಲೂಕು ಪಂಚಾಯತ್‌ ಉಪಾಧ್ಯಕ್ಷ ರಾಜಕುಮಾರ ಪಾಟೀಲ ಮಾತನಾಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಗಾಗ ವಸತಿ ನಿಲಯಗಳು ಮತ್ತು ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ಒತ್ತು ಕೊಡಬೇಕು ಎಂದು ತಿಳಿಸಿದರು.

ಈ ವೇಳೆ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ತುಕ್ಕಮ್ಮ ರಂಗಣ್ಣ, ಬೀದರ ತಾಪಂ ಕಾರ್ಯನಿರ್ವಹಣಾಧಿಕಾರಿ ಧನರಾಜ ಬೋರಾಳೆ, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗದ ಶರತಕುಮಾರ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಪಂ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next