ಬೀದರ: ಪರಿಸರ ಅಂದರೆ ನಮ್ಮ ತಾಯಿ, ನಮ್ಮ ಉಸಿರು ಇದ್ದಂತೆ. ಪರಿಸರ ಇರುವವರೆಗೆ ನಾವು ಇರುತ್ತೇವೆ. ಇದನ್ನು ಅರಿತು ನಮ್ಮ ಮನೆಯ ಮುಂದೆ ಕನಿಷ್ಟ ಐದು ಸಸಿಗಳನ್ನು ನೆಡಬೇಕು ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.
ನಗರದ 100 ಹಾಸಿಗೆಯ ತಾಯಿ ಮತ್ತು ಮಗುವಿನ ಆಸ್ಪತ್ರೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ವತಿವತಿಯಿಂದ ಏರ್ಪಡಿಸಿದ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನೀರು ಅತ್ಯಂತ ಅಮೂಲ್ಯವಾದುದಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಈಗಾಗಲೇ ಸಾಕಷ್ಟು ತೊಂದರೆ ಎದುರಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸೋಣ. ನೀರನ್ನು ಅತ್ಯಂತ ಮಿತವ್ಯಯವಾಗಿ ಬಳಸೋಣ. ಸ್ವಚ್ಛತೆಗೆ ಗಮನ ಹರಿಸೋಣ. ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಒತ್ತು ಕೊಡೋಣ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಲಕ್ಷಣರಾವ್ ಬುಳ್ಳಾ ಮಾತನಾಡಿ, ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 30 ಲಕ್ಷ ಗಿಡಗಳನ್ನು ನೆಡಲು ಗುರಿ ಹೊಂದಲಾಗಿದೆ. ಈ ದಿಶೆಯಲ್ಲಿ ನಮ್ಮ ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 500 ಗಿಡಗಳನ್ನು ನೆಡಲು ಕ್ರಮ ವಹಿಸಬೇಕಿದೆ. ಈ ಕಾರ್ಯಕ್ರಮವು ಜಿಲ್ಲಾ ಪಂಚಾಯತ್‌ನಿಂದ ಅರ್ಥಪೂರ್ಣವಾಗಿ ನಡೆಯಬೇಕು. ಎಲ್ಲರೂ ಸೇರಿ ಒಗ್ಗೂಡಿ ಈ ಕೆಲಸ ಮಾಡೋಣ ಎಂದು ಹೇಳಿದರು.
ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದ ಹೆಚ್ಚುವರಿ ಜಿಲ್ಲಾ ನೋಡಲ್ ಅಧಿಕಾರಿ ಗೌತಮ ಅರಳಿ ಪ್ರಾಸ್ತಾವಿಕ ಮಾತನಾಡಿ, ಕಳೆದ ನಾಲ್ಕು ವರ್ಷದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇವೆ. ಜಿಲ್ಲೆಯ ಜನರಲ್ಲಿ ಸ್ವಚ್ಛತೆಯ ಬಗ್ಗೆ ಇನ್ನೂ ಹೆಚ್ಚಿನ ಅರಿವು ಮೂಡಬೇಕಿದೆ. ಸ್ವಚ್ಛ ಮೇವ ಜಯತೆ ಕಾರ್ಯಕ್ರಮವು ಜಿಲ್ಲೆಯಲ್ಲಿ ನಿರಂತರ ಒಂದು ತಿಂಗಳ ಕಾಲ ನಡೆಯಲಿದೆ ಎಂದು ಹೇಳಿದರು.
ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಹೆಚ್ಚುವರಿ ಉಪ ಕಾರ್ಯದರ್ಶಿ ಕಿಶೋರಕುಮಾರ ದುಬೆ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಗಾಮನಗಟ್ಟಿ, ವಲಯ ಅರಣ್ಯ ಅಧಿಕಾರಿ ಶಿವರಾಜ ಮೇಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ರಾಚಪ್ಪ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿ ಡಾ|ಎಂ.ಎ.ಜಬ್ಟಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ, ಆಯುಷ್ ಇಲಾಖೆಯ ಅಧಿಕಾರಿ ಶಾರದಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ನ ಸಿಬ್ಬಂದಿ ಇದ್ದರು. ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದ ಜಿಲ್ಲಾ ಸಮಾಲೋಚಕರಾದ ಮಂಜುಳಾ ಕಣಜಿ ನಿರೂಪಿಸಿದರು.