Advertisement

ಅಕ್ರಮ ಲೇಔಟ್ ವಿರುದ್ಧ ಕಠಿಣ ಕ್ರಮ

10:21 AM Aug 18, 2019 | Naveen |

ಬೀದರ: ಜಿಲ್ಲೆಯಲ್ಲಿ ಅಕ್ರಮ ಲೇಔಟ್‌ಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಅಕ್ರಮ ಲೇಔಟ್‌ನಲ್ಲಿ ನಿವೇಶ ಪಡೆದವರ ಖಾತೆ ನಕಲು ಪ್ರತಿ ರದ್ದುಗೊಳ್ಳಲಿವೆ.

Advertisement

ಬೀದರ್‌ ತಾಲೂಕಿನಲ್ಲಿ 230 ಲೇಔಟ್‌ಗಳು ಅನಧಿಕೃತ ಲೇಔಟ್‌ಗಳು ಎಂದು ಗುರುತಿಸಲಾಗಿದೆ. ಅಸಮರ್ಪಕ ದಾಖಲೆ, ಭೂ ಪರಿವರ್ತನೆ (ಎನ್‌ಎ)ಆದೇಶ ಇಲ್ಲದೆ ನಿವೇಶನ ಹಂಚಿಕೆ ಮಾಡುತ್ತಿರುವುದ್ದು, ಜಿಲ್ಲಾಡಳಿತಕ್ಕೆ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಜಿಲ್ಲೆಯ ಐದು ತಾಲೂಕಿನಲ್ಲಿ ಈ ರಿಯಲ್ ಎಸ್ಟೇಟ್ ಧಂದೆ ಜೋರಾಗಿ ನಡೆಯುತ್ತಿದ್ದು, ಖಾಲಿ ಭೂಮಿಯಲ್ಲಿ ಕಲ್ಲುಗಳನ್ನು ಹೂಳಿ ನಿವೇಶನ ಎಂದು ಜನರಿಗೆ ನಂಬಿಸಿ ಮಾರಾಟ ಮಾಡುವ ಕೆಲಸ ನಡೆಯುತ್ತಿದೆ. ಜಿಲ್ಲೆಯ ಪೈಕಿ ಬೀದರ್‌ ತಾಲೂಕಿನ ಒಂದರಲ್ಲಿಯೇ 230 ಅಕ್ರಮ ಲೇಔಟ್‌ಗಳನ್ನು ಪತ್ತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಡಳಿತವೇ ಹೇಳುತ್ತಿದ್ದು, ಇತರೆ ತಾಲೂಕುಗಳಲ್ಲಿನ ಅನಧಿಕೃತ ಲೇಔಟ್‌ಗಳ ಕುರಿತು ಪರಿಶೀಲನೆ ನಡೆದರೆ ಸಾವಿರಾರೂ ಲೇಔಟ್‌ಗಳ ಬಣ್ಣ ಬಯಲಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅಲ್ಲದೆ, ಜಿಲ್ಲಾಡಳಿತ ಈಗಾಗಲೇ ಇತರೆ ತಾಲೂಕುಗಳಲ್ಲಿನ ತಹಶೀಲ್ದಾರ್‌ರಿಗೆ ಅಕ್ರಮ ಲೇಔಟ್‌ಗಳ ಕುರಿತು ಪರಿಶೀಲನೆ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಜಿಲ್ಲಾಡಳಿತ ಅಕ್ರಮ ಲೇಔಟ್ ನಿರ್ಮಿಸಿದ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿ ದಾಖಲೆ ಸಲ್ಲಿಸುವಂತೆ ಸೂಚಿಸಿದೆ, ಜಿಲ್ಲಾಡಳಿತದ ನೋಟೀಸ್‌ಗೆ ಯಾರು ಸೂಕ್ತ ದಾಖಲೆಗಳನ್ನು ನೀಡುವುದಿಲ್ಲವೋ ಅಂತಹ ಲೇಔಟ್‌ಗಳ ಭೂಮಿಯನ್ನು ಕರ್ನಾಟಕ ಸರ್ಕಾರ ಎಂದು ಪರಿವರ್ತಿಸಲು ಜಿಲ್ಲಾಡಳಿತ ಕಂದಾಯ ಅಧಿಕಾರಿಗಳಿಗೆ ಸೂಚಿಸಿದೆ.

ದಾಖಲೆ ನೋಡಿ ನಿವೇಶನ ಖರೀದಿಸಿ: ಜಿಲ್ಲೆಯ ಸಾರ್ವಜನಿಕರು ಯಾವುದೇ ನಿವೇಶನ ಖರೀದಿಸಬೇಕಾದರೆ ಮೊದಲು ಲೇಔಟ್‌ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು. ಅಧಿಕೃತ ಅಥವಾ ಅನಧಿಕೃತ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಸರ್ಕಾರದ ಪರವಾನಗಿ ಎಲ್ಲವೂ ಸೂಕ್ತವಾಗಿ ಇದ್ದರೆ ಮಾತ್ರ ನಿವೇಶನ ಖರೀದಿಗೆ ಮುಂದಾಗಬೇಕು.

Advertisement

ನೋಟರಿ ಮಾಡಿಸಿಕೊಂಡು ನಿವೇಶನ ಖರೀದಿಸುವುದು ಸೂಕ್ತವಲ್ಲ. ಕಡ್ಡಾಯವಾಗಿ ಆನ್‌ಲೈನ್‌ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಅಧಿಕಾರಿಗಳು. ಅಕ್ರಮ ಲೇಔಟ್‌ಗಳಲ್ಲಿ ನಿವೇಶನ ಪಡೆದು ಮನೆ ನಿರ್ಮಿಸಿಕೊಂಡ ಆ ಮಾಲೀಕರೆ ಜವಾಬ್ದಾರರಾಗುತ್ತಾರೆ. ಸರ್ಕಾರ ಆ ಭೂಮಿ ಸ್ವಾಧೀನ ಪಡೆಸಿಕೊಂಡಲ್ಲಿ ಅಲ್ಲಿನ ಎಲ್ಲಾ ಆಸ್ತಿ ಸರ್ಕಾರದ್ದಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರಕಾರಿ ಭೂಮಿಯಲ್ಲೂ ನಿವೇಶನ: ಜಿಲ್ಲೆಯ ವಿವಿಧೆಡೆ ಸರ್ಕಾರಿ ಭೂಮಿಯಲ್ಲಿ ಕೂಡ ಕಲ್ಲುಗಳನ್ನು ಹೂಳಿ ನಿವೇಶನ ಹಾಕಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ವಕೀಲರ ಮೂಲಕ ನೋಟರಿ ಮಾಡಿಸಿಕೊಂಡು ವ್ಯವಹಾರ ಮಾಡಲಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಅಲ್ಲದೆ ಸರ್ಕಾರದ ಸಿ ಫಾರಂ ಹೊಂದಿದ ಭೂಮಿಯಲ್ಲೂ ಕೂಡ ನಿವೇಶನ ಹಾಕಿ ಮಾರಾಟ ಮಾಡಲಾಗುತ್ತಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ.

ಅಧಿಕಾರಿಗಳು ಶಾಮೀಲು: ಜಿಲ್ಲೆಯ ವಿವಿಧೆಡೆ ಅಕ್ರಮ ಲೇಔಟ್‌ಗಳ ನಿರ್ಮಾಣಕ್ಕೆ ಕೆಲ ಅಧಿಕಾರಿಗಳು ಕೂಡ ಸಾಥ್‌ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಜಿಲ್ಲೆಯಲ್ಲಿ ಸಾವಿರಾರು ಲೇಔಟ್‌ಗಳು ನಿರ್ಮಾಣಗೊಳ್ಳುತ್ತಿರುವುದು ಅಧಿಕಾರಿಗಳ ಗಮನದಲ್ಲಿದ್ದರು ಕೂಡ ಯಾವುದೇ ಕಾನೂನು ಕ್ರಮಕ್ಕೆ ಯಾಕೆ ಮುಂದಾಗಿಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.ಬಹುತೇಕ ಲೇಔಟ್‌ಗಳ ಮಾಲೀಕರು ಸಾರ್ವಜನಿಕರಿಗೆ ಭೂಮಿ ಮಾರಾಟ ಮಾಡಿದ್ದಾರೆ. ಇದೀಗ ಜಿಲ್ಲಾಡಳಿತ ಲೇಔಟ್ ಆದೇಶ ರದ್ದು ಮಾಡುವುದರಿಂದ ನಿವೇಶನ ಪಡೆದ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾಗುತ್ತಿದೆ.

ಕಂದಾಯ ಇಲಾಖೆ, ಗ್ರಾಮ ಪಂಚಾಯತ್‌, ಪುರಸಭೆ, ನಗರ ಸಭೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಯಾಕೆ ಮೌನವಹಿಸಿದ್ದಾರೆ. ತಪ್ಪಿಸ್ಥರ ವಿರುದ್ಧ ಮೊದಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next