ಬೀದರ: ಸೇನಾ ವಂದನ ಹೊಸ ಪರಿಕಲ್ಪನೆ ಮೂಲಕ ಶಾಲಾ ಮಕ್ಕಳಲ್ಲಿ ಪರಮವೀರ ಚಕ್ರ ಪಡೆದಿರುವ ಎಲ್ಲ ವೀರ ಸೈನಿಕರ ಸಂಪೂರ್ಣ ಮಾಹಿತಿ ನೀಡುವ ಕಾರ್ಯ ನೋಡಿ ಸಂತಸ ತಂದಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ನಗರದ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ನಡೆದ ಸೇನಾ ವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೈನಿಕರ ಜೀವನ ಮತ್ತು ಅವರ ಸಾಹಸದ ಬಗ್ಗೆ ಮಕ್ಕಳಿಗೆ ತಿಳಿಸುವ ಕಾರ್ಯ ಎಲ್ಲ ಕಡೆಗಳಲ್ಲಿ ನಡೆಯಬೇಕು. ಸೈನಿಕರ ದೇಶಪ್ರೇಮ ಅನುಕರಿಸಿ ಇಂದಿನ ಪ್ರತಿಯೊಬ್ಬ ವಿದ್ಯಾರ್ಥಿಗಳು ಕೂಡ ದೇಶ ಭಕ್ತರಾಗಿ ಸೇವೆಗೆ ಮುಂದಾಗಬೇಕು. ದೇಶದ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಂಎಲ್ಸಿ ರಘುನಾಥರಾವ ಮಲ್ಕಾಪೂರೆ ಮಾತನಾಡಿ, ಭಾರತ ದೇಶದ ಸೇನಾನಿಗಳಿಗೆ ಕೊಡುವ ಪರಮವೀರ ಚಕ್ರ ಪ್ರಶಸ್ತಿಗೆ ಪಾತ್ರರಾದ 21 ಜನ ಸೈನಿಕರ ಬಗ್ಗೆ ಶಾಲೆ ಮಕ್ಕಳಿಗೆ ತಿಳಿಸಿರುವುದು ಹರ್ಷ ತಂದಿದೆ. ದೇಶಭಕ್ತಿಗಾಗಿ ಪ್ರೇರಣಾ ಭಾವದ ಕಾರ್ಯಕ್ರಮ ಇದಾಗಿದೆ. ದೇಶದ ಬಗ್ಗೆ ಪ್ರತಿಯೊಬ್ಬರು ಗೌರವ ನೀಡಬೇಕು. ದೇಶದ ಗಡಿಯಲ್ಲಿ ಇರುವ ಸೈನಿಕರು ಪ್ರಜೆಗಳ ಹಿತ ಕಾಪಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಂಸ್ಥೆ ಅಧ್ಯಕ್ಷ ಪ್ರೊ| ಎಸ್. ಬಿ. ಬಿರಾದಾರ ಮಾತನಾಡಿ, ನಮ್ಮ ದೇಶದ ಗಡಿ ಕಾಯುವ ವೀರರ ನಿಜ ಸ್ಥಿತಿಯನ್ನು ಎಲ್ಲರಿಗು ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜತೆಗೆ ಎಲ್ಲರಲ್ಲಿ ದೇಶಭಕ್ತಿ ಮೂಡುವಂತೆ ಮಾಡುವುದೇ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಹೇಳಿದರು.
ಭಾರತೀಯ ಸೈನಿಕರ ರಕ್ತಾರ್ಪಣೆ ಪ್ರತೀಕವಾಗಿ ಪರಮವೀರ ಚಕ್ರದಿಂದ ಭೂಷಿತರಾದ 21 ಸೈನಿಕರ ಭಾವಚಿತ್ರಗಳಿಗೆ ಇದೇ ಸಂದರ್ಭದಲ್ಲಿ ಗೌರವ ಸಲ್ಲಿಸಲಾಯಿತು. ಸಂಸ್ಥೆ ಆಡಳಿತ ಮಂಡಳಿ ಸದಸ್ಯ ನಾರಾಯಣರಾವ ಮುಖೇಡಕರ ಸೇರಿದಂತೆ ಅನೇಕರು ಇದ್ದರು.