ಬೀದರ: ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು, ಡಿಫ್ತೀರಿಯಾ ಕಾಯಿಲೆಗಳ ನಿವಾರಣೆಗೆ ಆರೋಗ್ಯ ಇಲಾಖೆಯಿಂದ ಡಿ. 11ರಿಂದ 31ರ ವರೆಗೆ ಜಿಲ್ಲಾದ್ಯಂತ ಶಾಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ್ ಸೂಚಿಸಿದರು.
ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಶಾಲೆಗಳಲ್ಲಿ ಪೋಷಕರ ಸಭೆ ಕರೆದು ಲಸಿಕಾ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಮುಂಚಿತವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ತಡೆಯುಂಟು ಮಾಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ, ಅಂತಹ ಶಾಲೆಗಳ ಪಟ್ಟಿ ನೀಡಿದಲ್ಲಿ ಆ ಶಾಲೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಲಸಿಕೆ ಹಾಕಿಸುವಂತೆ ಮನವರಿಕೆ ಮಾಡಲಾಗುವುದು ಎಂದು ಸಿಇಒ ಪ್ರತಿಕ್ರಿಯಿಸಿದರು.
ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಗ್ರಾಮಗಳಲ್ಲಿ ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಲಸಿಕೆ ಹಾಕಿಸದೇ ಇದ್ದಲ್ಲಿ ಆಗಬಹುದಾದ ಪರಿಣಾಮಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಸೂಚಿಸಿದರು. ಎಸ್‌ಎಂಒ ಎ.ಎಸ್.ತಾಳಿಕೋಟೆ ಮಾತನಾಡಿ, ರಾಜ್ಯ ಸರ್ಕಾರವು ಎಲ್ಲ ಅರ್ಹ ಮಕ್ಕಳಿಗೆ ಡಿಪಿಟಿ-ಟಿಡಿ ಲಸಿಕೆಯನ್ನು ಶಾಲೆಗಳಲ್ಲಿ ಹಾಕಲು ಯೋಜಿಸಿದೆ. ಅದರಂತೆ ಬೀದರ ಒಳಗೊಂಡು 9 ಜಿಲ್ಲೆಗಳಲ್ಲಿ 1ರಿಂದ 10ನೇ ತರಗತಿಯ ಎಲ್ಲ ಮಕ್ಕಳಿಗೆ ಲಸಿಕೆ ನೀಡಲಾಗುತ್ತದೆ.
1ನೇ ತರಗತಿಯ ಮಕ್ಕಳಿಗೆ ಡಿಪಿಟಿ ಮತ್ತು 5ನೇ ಹಾಗೂ 10ನೇ ತರಗತಿಯ ಮಕ್ಕಳಿಗೆ ಟಿಡಿ ಲಸಿಕೆ ನೀಡಲಾಗುತ್ತದೆ. ಮಕ್ಕಳಿಗೆ ಈ ಲಸಿಕೆ ಹಾಕಿಸದೇ ಇದ್ದಲ್ಲಿ ಗಂಟಲು ಮಾರಿ (ಡಿಫ್ತೀರಿಯಾ), ಧನುರ್ವಾಯು (ಟೆಟನಸ್), ನಾಯಿಕೆಮ್ಮು (ಪರ್ಟುಸಿಸ್) ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. ಈ ಲಸಿಕೆಯು ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವ ಅರ್ಹತೆ ಪಡೆದಿದ್ದು, ಸುರಕ್ಷಿತವಾಗಿದೆ. ತರಬೇತಿ ಪಡೆದ ಆರೋಗ್ಯ ಇಲಾಖೆಯ ಕಾರ್ಯಕರ್ತರಿಂದ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಲಸಿಕೆ ನೀಡಿದ್ದರೂ ಸಹ ಮತ್ತೂಮ್ಮೆ ಲಸಿಕೆ ಹಾಕಿಸುವುದರಿಂದ ಯಾವುದೇ ಪ್ರತಿಕೂಲ ಪರಿಣಾಮ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೀದರ ಜಿಲ್ಲೆಯಲ್ಲಿ 20 ಶಂಕಿತ ಡಿಫ್ತೀರಿಯಾ ಪ್ರಕರಣಗಳು ಪತ್ತೆಯಾಗಿವೆ. ಸರ್ಕಾರಿ, ಅನುದಾನಿತ, ಖಾಸಗಿ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಹಾಗೂ ಮದರಸಾ ಮತ್ತು ಧಾರ್ಮಿಕ ಶಾಲೆಗಳು, ಅನಾಥಾಶ್ರಮಗಳು, ವಸತಿ ಶಾಲೆ, ವಸತಿ ನಿಲಯಗಳಲ್ಲಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಜೋಜನಾ, ಡಿಎಚ್‌ಒ ವಿ.ಜಿ.ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ರತಿಕಾಂತ ಸ್ವಾಮಿ, ಆರೋಗ್ಯ ಇಲಾಖೆಯ ಕಾರ್ಯಕ್ರಮ ಅಧಿಕಾರಿಗಳಾದ ಡಾ|ರವೀಂದ್ರ ಸಿರಸಗೆ, ಡಾ| ದೀಪಾ ಖಂಡ್ರೆ, ಡಾ| ಇಂದುಮತಿ ಪಾಟೀಲ, ಡಾ| ಅನೀಲ ಚಿಂತಾಮಣಿ, ಡಾ| ರಾಹುಲ, ಡಾ| ಶಾಂತಲಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿ ಕಾರಿ ಸಂಗಮೇಶ ಕಾಂಬಳೆ, ಕಾರ್ಯಕ್ರಮ ಮೇಲ್ವಿಚಾರಕ ಶಿವಕುಮಾರ ಬೇಮಳಗಿ, ಗುರುನಾಥ ಕವಳೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.