Advertisement

ಈ ವರ್ಷವೂ ಬರಗಾಲವೆ?

10:33 AM Jul 13, 2019 | Naveen |

ದುರ್ಯೋಧನ ಹೂಗಾರ
ಬೀದರ:
ಆಕಾಶದಲ್ಲಿ ಕರಿ ಮೋಡಗಳು ಸಂಚರಿಸುತ್ತಿದ್ದರೂ ಕೂಡ ಮಳೆಯಾಗುತ್ತಿಲ್ಲ. ಬಿತ್ತಿದ ಬೆಳೆ ಕಣ್ಣೆದುರಿಗೆ ಒಣಗುತ್ತಿರುವುದನ್ನು ನೋಡಿ ರೈತರು ಮರುಗುತ್ತಿದ್ದು, ಈ ವರ್ಷ ಕೂಡ ಮತ್ತೆ ಬರಗಾಲವಾಗಲಿದೆಯೇ ಎಂಬ ಆತಂಕ ರೈತರನ್ನು ಕಾಡುತ್ತಿದೆ.

Advertisement

ಮುಂಗಾರು ಆರಂಭಗೊಂಡರೂ ಕೂಡ ನಿಗದಿತ ಪ್ರಮಾಣದ ಮಳೆ ಸುರಿಯದ ಕಾರಣ ಜಿಲ್ಲೆಯ ರೈತರು ಸಂಕಷ್ಟ ಎದುರಿಸು ಸ್ಥಿತಿ ನಿರ್ಮಾಣಗೊಂಡಿದೆ. ಅಲ್ಲದೆ, ಇಂದಿಗೂ ಕೂಡ ಜಿಲ್ಲೆಯ ವಿವಿಧೆಡೆ ಕುಡಿಯುವ ನೀರಿನ ಸಮಸ್ಯೆ ಇದೆ. ಮುಂಗಾರು ಮುನ್ನ ಶೇ.73.64ರಷ್ಟು ಮಳೆ ಕೊರತೆ ಇತ್ತು. ಇದೀಗ ಮುಂಗಾರಿನಲ್ಲಿ ಶೇ.85.21ರಷ್ಟು ಮಳೆ ಕೊರತೆ ಎದುರಾಗಿದ್ದು, ಇದೇ ರೀತಿ ಮುಂದುವರಿದರೆ ರೈತರು, ಜನ ಜಾನವಾರುಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಮಳೆಗಾಗಿ ಜಿಲ್ಲೆಯ ವಿವಿಧೆಡೆ ಪ್ರಾರ್ಥನೆ, ಪಾದಯಾತ್ರೆ ಮೂಲಕ ಜನರು ದೇವರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ.

ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಕೂಡ ನಿಗದಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜೂನ್‌ ತಿಂಗಳಲ್ಲಿ ಜಿಲ್ಲೆಯ ವಿವಿಧೆಡೆ ಅಲ್ಪ ಪ್ರಮಾಣದ ಮಳೆ ಸುರಿದಿದ್ದು, ರೈತರು ಹರ್ಷದಿಂದ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದರು. ಬಿತ್ತನೆ ಕಾರ್ಯ ಮುಗಿದ ನಂತರ ಕೂಡ ವಿವಿಧೆಡೆ ತುಂತುರು ಮಳೆ ಸುರಿದು ರೈತರು ಸಂತಸ ಪಡುವಂತೆ ಮಾಡಿತ್ತು. ಆದರೆ ಇದೀಗ ಮಳೆ ಮಾಯವಾಗಿದ್ದು, ರೈತರು ಆಕಾಶದ ಕಡೆಗೆ ಮುಖ ಮಾಡುವಂತೆ ಆಗಿದೆ.

ಆರಂಭದಲ್ಲಿ ಸುರಿದ ಮುಂಗಾರು ಮಳೆಯನ್ನು ನಂಬಿ ಬಿತ್ತನೆ ಕೈಗೊಂಡಿರುವ ರೈತರು ಈ ವರ್ಷವೂ ಬೆಳೆ ಬರುವ ಭರವಸೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಅಲ್ಪಕಾಲಿಕ ಬೆಳೆಗಳಾದ ಹೆಸರು, ಉದ್ದು ಬೆಳೆಗಳ ಮೇಲಿನ ಭರವಸೆ ಕಳೆದುಕೊಂಡಿರುವ ರೈತರು ಸೋಯಾಬಿನ್‌, ಹೈಬ್ರೀಡ್‌ ಜೋಳ, ತೊಗರಿ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮೋಡಗಳು ಕಟ್ಟುವುದು ಹಾಗೂ ಒಡೆದು ಹೋಗುವುದು ನಿತ್ಯದಾಟವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಗಡಿ ಜಿಲ್ಲೆಯಲ್ಲಿ ಸತತ ಮೂರು ವರ್ಷಗಳ ಕಾಲ ಬರದ ಛಾಯೆ ಮೂಡಿತ್ತು. ಇದೀಗ ಮತ್ತೆ ಜಿಲ್ಲೆ ಬರಕ್ಕೆ ತುತಾಗುತ್ತಾ ಎಂದು ಜನರು ಭಯ ಪಡುವಂತೆ ಮಾಡಿದೆ.

ಮತ್ತೆ ಮುನಿದ ವರುಣ: ಆರಂಭದಲ್ಲಿ ಮುಂಗಾರು ಉತ್ತಮವಾಗಿ ಸುರಿದಿದ್ದು, ರೈತರು ಹುರುಪಿನಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಬಳಿಕ ಜಿಲ್ಲೆಯ ಅಲ್ಲಲ್ಲಿ ಸ್ವಲ್ಪ ಮಟ್ಟಿಗೆ ಮಳೆ ಸುರಿದು ಭರವಸೆ ಮೂಡಿಸಿತ್ತು. ಜೂನ್‌ ಅಂತ್ಯದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆ ಆಗಿದೆ. ಬಳಿಕ ಸ್ಥಗಿತಗೊಂಡ ಮಳೆ ಇತ್ತ ಸುಳಿಯುತ್ತಲೂ ಇಲ್ಲ. ಕೆಲ ಕಡೆ ತುಂತುರು ಹನಿ ಚೆಲ್ಲಿದರೂ ಪ್ರಯೋಜನವಾಗುತ್ತಿಲ್ಲ ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Advertisement

ಬಿತ್ತನೆ ಪ್ರಮಾಣ: ಜಿಲ್ಲೆಯಲ್ಲಿನ ಒಟ್ಟಾರೆ 3.68 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯ ಪೈಕಿ 2.14 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ನಡೆದಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಅನೇಕ ರೈತರು ಬಿತ್ತನೆ ಕಾರ್ಯದಿಂದ ದೂರು ಉಳಿದುಕೊಂಡಿದ್ದು, ಉತ್ತಮ ಮಳೆ ಸುರಿದ ನಂತರ ಬಿತ್ತನೆ ಮಾಡುವ ನಿಟ್ಟಿನಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 1.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಅವರೆ ಬಿತ್ತನೆಗೆ ಗುರಿ ಇತ್ತು. ಆದರೆ, ಈ ವರೆಗೆ ಜಿಲ್ಲೆಯಲ್ಲಿ 90.9 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. 80 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆ ಗುರಿ ಇತ್ತು. ಆದರೆ, 66.6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 25 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಉದ್ದು ಬೆಳೆ ಬಿತ್ತನೆ ಗುರಿ ಇತ್ತು. ಆದರೆ, 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಆಗಿದೆ. 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಗುರಿ ಪೈಕಿ 11 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 30 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತೆನೆ ಗುರಿ ಇತ್ತು. ಆದರೆ, 11.4 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಅಲ್ಲದೆ, ಇತರೆ ಬೆಳೆಗಳು ಕೂಡ ನಿಗದಿತ ಪ್ರಮಾಣದಲ್ಲಿ ಬಿತ್ತನೆ ಕಾರ್ಯ ಆಗಿಲ್ಲ. ವಿಶೇಷವೆಂದರೆ ಕಬ್ಬು ಬೆಳೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದ ರೈತರು ಮಳೆ ಕೊರತೆ, ನೀರಿನ ಸಮಸ್ಯೆ ಎದುರಿಸಿದ ಹಿನ್ನೆಲೆಯಲ್ಲಿ ಕಬ್ಬು ಬಿತ್ತನೆಗೆ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ. ಈ ವರ್ಷ 30.50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬಿತ್ತನೆಯ ಗುರಿ ಇತ್ತು. ಆದರೆ, 20.74 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ.

ಮುಂಗಾರು ಪೂರ್ವ ಮಳೆ: ಮುಂಗಾರು ಪೂರ್ವದಲ್ಲಿ ಜನೇವರಿ ತಿಂಗಳಲ್ಲಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ 5.9 ಮಿ.ಮೀ. ಮಳೆ ಆಗಬೇಕು ಇತ್ತು. ಆದರೆ, ಶೇ.0.2ರಷ್ಟು ಮಳೆ ಸುರಿದು ಶೇ. 84.41ರಷ್ಟು ಮಳೆ ಕೊರತೆ ಉಂಟಾಗಿತ್ತು. ಅದೇರೀತಿ ಫೆಬ್ರವರಿ ತಿಂಗಳಲ್ಲಿ ಸರಾಸರಿ 6.1 ಮಿ.ಮೀ. ಮಳೆ ಪೈಕಿ 0.10ರಷ್ಟು ಮಳೆ ಸುರಿದಿದ್ದು, ಶೇ.98.36 ಕೊರತೆಯಾಗಿದೆ. ಮಾರ್ಚ್‌ ತಿಂಗಳಲ್ಲಿ ಸರಾಸರಿ 10.7 ಮಿ.ಮೀ ಪೈಕಿ 0.48 ಮಿ.ಮೀ ಮಳೆ ಸುರಿದು ಶೇ.95.51 ಕೊರತೆಯಾಗಿದೆ. ಏಪ್ರಿಲ್ ತಿಂಗಳಲ್ಲಿ 19.8 ಮಿ.ಮೀ ಮಳೆ ಪೈಕಿ 11 ಮಿ.ಮೀ ಮಳೆ ಸುರಿದಿದ್ದು, ಶೇ.44.44 ಕೊರತೆಯಾಗಿದೆ. ಮೇ ತಿಂಗಳಲ್ಲಿ 31.1 ಮಿ.ಮೀ ಪೈಕಿ 6.90 ಮಿ.ಮೀ. ಮಳೆ ಆಗಿದ್ದು, ಶೇ.77.81ರಷ್ಟು ಮಳೆ ಸುರಿದಿದೆ. ಒಟ್ಟಾರೆ ಮುಂಗಾರು ಮುನ್ನ ಜಿಲ್ಲೆಯಲ್ಲಿ 73.6 ಮಿ.ಮೀ. ಪೈಕಿ 19.40 ಮಿ.ಮೀ. ಮಳೆ ಆಗಿದ್ದು, ಶೇ.73.64 ಮಿ.ಮೀ. ಮಳೆ ಕೊರತೆ ಉಂಟಾಗಿತ್ತು.

ಮುಂಗಾರು ಮಳೆ ಪ್ರಮಾಣ: ಜೂನ್‌ ತಿಂಗಳಲ್ಲಿ ಜಿಲ್ಲೆಯಲ್ಲಿ 127.5 ಮಿ.ಮೀ ಮಳೆ ಆಗಬೇಕಿತ್ತು. ಆದರೆ, 90.81 ಮಿ.ಮೀ. ಮಳೆ ಆಗಿದ್ದು, ಶೇ.28.78ರಷ್ಟು ಮಳೆ ಕೊರತೆ ಉಂಟಾಗಿದೆ. ಜುಲೈ ತಿಂಗಳಲ್ಲಿ 186.7 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, ಈ ವರೆಗೆ ಜಿಲ್ಲೆಯಲ್ಲಿ 10.60 ಮಿ.ಮೀ ಮಳೆ ಸುರಿದಿದ್ದು, ಶೇ. 95.32ರಷ್ಟು ಮಳೆ ಕೊರತೆ ಉಂಟಾಗಿರುವುದು ರೈತರನ್ನು ಆತಂಕಕ್ಕೆ ದೂಡುವಂತೆ ಮಾಡಿದೆ.

ದೇವರ ಮೊರೆ ಹೋದ ಜನರು: ಮುಂಗಾರು ಆರಂಭವಾದರೂ ಕೂಡ ನಿಗದಿತ ಮಳೆ ಸುರಿಯದ ಹಿನ್ನೆಲೆಯಲ್ಲಿ ವರುಣ ದೇವರನ್ನು ಪ್ರಾರ್ಥಿಸಲಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಭಜನೆ, ಸಪ್ತ, ಹೋಮ, ಹವನ, ದೇವರಿಗೆ ವಿಶೇಷ ಪೂಜೆಗಳನ್ನು ಮಾಡಿಸಲಾಗುತ್ತಿದೆ. ಸಿರ್ಸಿ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ಗ್ರಾಮಸ್ಥರು ಅಹೋರಾತ್ರಿ ಭಜನೆ, ಸಪ್ತ ಕಾರ್ಯಗಳನ್ನು ನಡೆಸಿದ್ದಾರೆ.

ಸದ್ಯಕ್ಕೆ ಜಿಲ್ಲೆಯಲ್ಲಿ ಶೇ.60ರಷ್ಟು ಬಿತ್ತನೆಯಾಗಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ಉತ್ತಮ ಮಳೆಗಾಗಿ ರೈತರು ಕಾಯುತ್ತಿದ್ದಾರೆ. ಹುಮನಾಬಾದ, ಬಸವಕಲ್ಯಾಣ ತಾಲೂಕಿನಲ್ಲಿ ತುಂತುರು ಮಳೆಯಾಗಿದೆ. ಆದರೆ, ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಮಳೆಯ ಕೊರತೆ ಉಂಟಾಗಿದೆ. ರೈತರು ಬಿತ್ತನೆ ಮಾಡಿದ ಸೋಯಾ ಅವರೆ ಇದೀಗ ಮೊಳಕೆಯೊಡೆದು ಎಲೆ ಬರುತ್ತಿವೆ. ಮುಂದಿನ ಒಂದು ವಾರದಲ್ಲಿ ಮಳೆ ಬರದಿದ್ದರೆ ಬೆಳೆಗಳ ಸ್ಥಿತಿ ಗಂಭೀರವಾಗಲಿದೆ.
ಸಿ.ವಿದ್ಯಾನಂದ,
ಕೃಷಿ ಇಲಾಖೆಯ ಜಂಟಿ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next