ಬೀದರ: ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಭೌತಿಕ ಸಾಧನೆ ಜೊತೆಗೆ ಆರ್ಥಿಕ ಗುರಿ ಸಾಧನೆಗೆ ಕೂಡ ಒತ್ತು ಕೊಡಬೇಕು. ಕಾಮಗಾರಿ ಪೂರ್ಣಗೊಂಡಿದ್ದರೂ, ಅದಕ್ಕೆ ತಗುಲುವ ವೆಚ್ಚದ ಪಾವತಿಯಲ್ಲಿ ಆಗುತ್ತಿರುವ ವಿಳಂಬಕ್ಕೆ ಏನು ಕಾರಣ ಎಂಬುದನ್ನು ಗುರುತಿಸಿ, ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ಹೈ.ಕ. ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಭೋದ್ ಯಾದವ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಮಗಾರಿಗಳನ್ನು ಕೊಡುವ ವೇಳೆಯಲ್ಲಿ ಕೆಲವು ವಿಷಯಗಳನ್ನು ತಿಳಿಸಲಾಗಿರುತ್ತದೆ. ಆದರೆ, ಬಹುತೇಕ ಇಲಾಖೆಗಳ ಅಧಿಕಾರಿಗಳು ಸುತ್ತೋಲೆಯನ್ನು ಸರಿಯಾಗಿ ಓದಿಕೊಳ್ಳುವುದಿಲ್ಲ. ಸೈಟ್ ಲಭ್ಯವಿರುವ ಕಡೆಗಳಲ್ಲಿ ಮಾತ್ರ ಕೆಲಸ ಕೈಗೆತ್ತಿಕೊಳ್ಳಿರಿ ಎಂದು ತಿಳಿಸಿದ್ದರೂ ಕೆಲವರು, ಸೈಟ್ ಸಿಕ್ಕಿಲ್ಲ, ಏಜೆನ್ಸಿ ಬದಲಾವಣೆಯಾಗಬೇಕಿದೆ, ಟೆಂಡರ್ ಕರೆಯಬೇಕಿದೆ ಎನ್ನುವಂತಹ ಕಾರಣಗಳನ್ನು ಹೇಳಿಕೊಂಡೇ ಇದುವರೆಗೆ ಕಾಮಗಾರಿ ಆರಂಭಿಸಿಲ್ಲ. ಅನವಶ್ಯಕ ಕಾರಣಗಳಿಂದ ಕಾಮಗಾರಿಯು ನಿಲ್ಲುವಂತಾಗಬಾರದು. ವಿಳಂಬವಾಗಬಾರದು ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.
ಹೈದ್ರಾಬಾದ್ ಕರ್ನಾಟಕ ಪ್ರದೇಶವು ಸಾಕಷ್ಟು ಹಿಂದುಳಿದಿದೆ. ಈ ಭಾಗದ ಅಭಿವೃದ್ಧಿಗಾಗಿ ನಾವು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕಿದೆ. ಇಲ್ಲಿ ಏಕಕಾಲಕ್ಕೆ ಹಲವಾರು ಕೆಲಸ ಮಾಡುವ ಅನಿವಾರ್ಯತೆ ಇದೆ ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದರು.
491ಲಕ್ಷ ರೂ. ವೆಚ್ಚದಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಕಾಮಗಾರಿಗೆ 2018ರ ಆಗಸ್ಟ್‌ನಲ್ಲಿಯೇ ವರ್ಕ್ ಆರ್ಡರ್ ನೀಡಲಾಗಿದೆ. ಭಾಲ್ಕಿಯ ರಿಡೀಂಗ್ ಸೆಂಟರ್ ಇನ್ನೂ ಪೂರ್ಣವಾಗಿಲ್ಲ. ಔರಾದ ಪಟ್ಟಣದ ಸರ್ವೇ ನಂಬರ್ 183ರಲ್ಲಿನ ಸರ್ಕಾರಿ ಐಟಿಐ ಕಾಲೇಜ್ ಕಟ್ಟಡ ಪೂರ್ಣಗೊಂಡಿಲ್ಲ. ಮೈಕ್ರೋ ಯೋಜನೆಯಡಿ ನಡೆಯುತ್ತಿರುವ ಜನವಾಡ ಗ್ರಾಮದಿಂದ ಅಲಿಯಂಬರ ವರೆಗಿನ ರಸ್ತೆ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ ಏಕೆ ಎಂದು ಪಿಡಬ್ಲೂಡಿ ಎಂಜಿನಿಯರ್‌ಗಳಿಗೆ ಕಾರ್ಯದರ್ಶಿಗಳು ಪ್ರಶ್ನಿಸಿದರು. ಕಾಮಗಾರಿ ಪೂರ್ಣಗೊಂಡಿದ್ದರೆ ಆ ಬಗ್ಗೆ ಮಾಹಿತಿ ನೀಡಬೇಕು. ನಡೆಯುತ್ತಿದ್ದರೆ ಕಾಲಕಾಲಕ್ಕೆ ಅದನ್ನು ಅಪ್‌ಡೇಟ್ ಮಾಡಬೇಕು. ಸಂಬಂಧಿಸಿದ ಗುತ್ತಿಗೆದಾರರು ವಿಳಂಬ ಮಾಡಿದ್ದರೆ ಆ ಬಗ್ಗೆ ನಮಗೆ ವರದಿ ಮಾಡಿದಲ್ಲಿ ಮುಂದಿನ ಕ್ರಮವನ್ನು ಮಂಡಳಿಯೇ ಕೈಗೊಳ್ಳಲಿದೆ. ನಿಮ್ಮ ಹಂತದಲ್ಲಿ ಏನೂ ಮಾಡಬೇಡಿ ಎಂದು ತಿಳಿಸಿದರು.
ಕಾಲಮಿತಿಯೊಳಗೆ ಪೂರ್ಣಗೊಳಿಸಿ: ಲೋಕೋಪಯೋಗಿ ಇಲಾಖೆ (ಪಿಡಬ್ಲೂಡಿ), ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ವಿಭಾಗ (ಪಿಆರ್‌ಇಡಿ), ಕೆಆರ್‌ಐಡಿಎಲ್, ನಿರ್ಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರಂಥಾಲಯ, ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ನಡೆಯುತ್ತಿರುವ ಮಂಡಳಿಯ ಅನುದಾನದ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಎಲ್ಲ ಕಾಮಗಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.