ಬೀದರ: ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನೆ ಸಭೆಯು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ ಎಚ್.ಸಿ. ಮಾತನಾಡಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ 2019-20ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳಿಗೆ 139.50 ಲಕ್ಷ ರೂ. ಶಾಲಾ ಅನುದಾನ ಬಿಡುಗಡೆಯಾಗಿತ್ತು. ಶೇ.100ರಷ್ಟು ಸಾಧನೆಯಾಗಿದ್ದು, ಈ ಪೈಕಿ ಅಲ್ಪಸಂಖ್ಯಾತರಿಗೆ 41.859 ಲಕ್ಷ ರೂ. ಮೊತ್ತವನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಅವಿನಾಶ ಮಾತನಾಡಿ, 2018-19ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕಾಗಿ 9,226 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ 546ಕ್ಕೆ ಕೇಂದ್ರ ಸರ್ಕಾರದಿಂದ ಮಂಜೂರಾಗಿದೆ. 7,254 ಅರ್ಜಿಗಳು ಬಾಕಿ ಉಳಿದಿವೆ. ಮೆರಿಟ್ ಕಂ-ಮೀನ್ಸ್ ವಿದ್ಯಾರ್ಥಿವೇತನ ಯೋಜನೆಯಡಿ 2,240 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಈ ಪೈಕಿ 206ಕ್ಕೆ ಮಂಜುರಾತಿ ನೀಡಿದ್ದು, 1,611 ಅರ್ಜಿಗಳು ಬಾಕಿ ಉಳಿದಿವೆ. ಈ ಎರಡು ಯೋಜನೆಗಳಡಿ ಒಟ್ಟು 11,466 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 752ಕ್ಕೆ ಮಂಜೂರಾತಿ ನೀಡಿದ್ದು, 8,865 ಅರ್ಜಿಗಳು ಬಾಕಿ ಉಳಿದಿವೆ ಎಂದು ವಿವರಣೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್‌ನ ಡಿಆರ್‌ಡಿಎ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಲೀಡ್ ಬ್ಯಾಂಕ್, ಜಿಲ್ಲಾ ನಗರಾಭಿವೃದ್ಧಿ ಕೋಶ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳಿಗೆ ನೋಟಿಸ್: ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ ಸೂಚನೆ ನೀಡಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.