Advertisement

ತಾರತಮ್ಯ ಅಳಿದರೆ ಪತ್ರಿಕಾ ಕ್ಷೇತ್ರ ಬಲಿಷ್ಠ

10:22 AM Jul 03, 2019 | Naveen |

ಬೀದರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮುದ್ರಣ ಮಾಧ್ಯಮವು ತನ್ನ ಪಾವಿತ್ರ್ಯ ಕಾಯ್ದುಕೊಂಡು ಸಾಗಿದೆ. ಆದರೆ ಸಣ್ಣ ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಹಾಗೂ ಕೊಪ್ಪಳದ ಹಿರಿಯ ಪತ್ರಕರ್ತೆ ಸಾವಿತ್ರಿ ಮುಜುಮದಾರ ಹೇಳಿದರು.

Advertisement

ನಗರದ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಾಧ್ಯಮ ಕ್ಷೇತ್ರದಲ್ಲಿನ ತಾರತಮ್ಯ ನಿವಾರಣೆಯಾದರೆ ಮಾತ್ರ ಪತ್ರಿಕಾ ಕ್ಷೇತ್ರ ಬಲಿಷ್ಠವಾಗಲಿದೆ. ಅತ್ಯಧಿಕ ಖರ್ಚು ವೆಚ್ಚಗಳ ಕಾರಣಕ್ಕಾಗಿ ಸಣ್ಣ ಪತ್ರಿಕೆಯ ಸಂಪಾದಕರು ತಮ್ಮ ಪತ್ರಿಕಾ ಧರ್ಮದಿಂದ ವಿಮುಖರಾಗುತ್ತಿರುವುದು ಒಂದೆಡೆಯಾದರೆ, ಉತ್ಕಷ್ಟ ಹಾಗೂ ಪರಿಣಾಮಕಾರಿ ಸುದ್ದಿಗಳನ್ನು ಬಿತ್ತರಿಸುವಲ್ಲಿ ರಾಜ್ಯಮಟ್ಟದ ಪತ್ರಿಕೆಗಳೊಂದಿಗೆ ಪೈಪೋಟಿಗಿಳಿಯಬೇಕಾಗಿರುವುದು ಅನಿವಾರ್ಯವಾಗಿದೆ. ಮತ್ತೂಂದೆಡೆ ರಾಜಕೀಯ ಅಥವಾ ಔದ್ಯೋಗಿಕ ಜಗತ್ತಿಗೆ ಜಾರುತ್ತಿರುವುದರಿಂದ ಅವುಗಳ ಪಾವಿತ್ರ್ಯತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪತ್ರಿಕೆಗಳು ಸ್ಥಳೀಯ ಗಂಭೀರ ಸಮಸ್ಯೆಗಳತ್ತ ಬೆಳಕು ಹರಿಸಿ, ಆತ್ಮವಿಶ್ವಾಸ ಗಟ್ಟಿಗೊಳಿಸಿಕೊಂಡು ಮುನ್ನುಗ್ಗಬೇಕಿದೆ ಎಂದರು.

ಸಾಮಾಜಿಕ ಜಾಲತಾಣಗಳು ಪತ್ರಕರ್ತರನ್ನು ಸಂಕುಚಿತ ಮನೋಭಾವದತ್ತ ಕೊಂಡೊಯ್ಯುತ್ತಿವೆ. ದೃಶ್ಯ ಮಾಧ್ಯಮಗಳು ಟಿಆರ್‌ಪಿಗಾಗಿ ನೈಜತೆಯಿಂದ ದೂರ ಸರಿಯುತ್ತಿವೆ. ಮೂಢ ನಂಬಿಕೆಗಳತ್ತ ಸಾರ್ವಜನಿಕರನ್ನು ಮತ್ತೆ ದೂಡುತ್ತಿದ್ದು, ಜನರ ಮಾನಸಿಕ ಖನ್ನತೆಗೆ ಅವು ಕಾರಣವಾಗುತ್ತಿವೆ. ಇಂಥ ದೃಷ್ಟಿಕೋನದಿಂದ ಬಚಾವಾಗಲು ಪತ್ರಕರ್ತರು ಮೊದಲು ಮಾನಸಿಕವಾಗಿ ಗಟ್ಟಿಗೊಳ್ಳಬೇಕಿದ್ದು, ಪ್ರಜಾಪಿತ ಬ್ರಹ್ಮಾಕುಮಾರಿ ಕೇಂದ್ರಗಳಲ್ಲಿ ಸದಾ ಜರುಗುವ ರಾಜಯೋಗ ಶಿಬಿರದ ಮೊರೆ ಹೋಗಬೇಕೆಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ. ಪ್ರತಿಮಾ ಸಹೋದರಿ ಮಾತನಾಡಿ, ಇಂದು ಮನುಷ್ಯ ನಕಾರಾತ್ಮಕ ಗುಣಗಳತ್ತ ವೇಗವಾಗಿ ಸಾಗುತ್ತಿರುವ ಸನ್ನಿವೇಶದಲ್ಲಿ ಪತ್ರಕರ್ತರು ಸಕಾರಾತ್ಮಕ ಸುದ್ದಿಗಳನ್ನು ಸಮಾಜದಲ್ಲಿ ಬಿತ್ತರಿಸಬೇಕಿದೆ. ಇದರಿಂದ ಸಾಮಾಜಿಕ ಸ್ವಾಸ್ಥ ್ಯ ಕಾಪಾಡಿದಂತಾಗುತ್ತದೆ. ಮಾಧ್ಯಮ ಸೇವೆ ಒಂದು ರೀತಿಯಲ್ಲಿ ಈಶ್ವರಿಯ ಸೇವೆಯಾಗಿದ್ದು, ಅದನ್ನು ಸೇವೆಯ ರೂಪದಲ್ಲಿ ಕಾಣಬೇಕೇ ವಿನಃ ಹಣ ಮಾಡುವ ಕ್ಷೇತ್ರವಾಗಿ ಗುರ್ತಿಸಕೂಡದು ಎಂದು ಕಿವಿ ಮಾತು ಹೇಳಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರನ್ನು ಹಿಯಾಳಿಸುವ ಹಾಗೂ ಹೆದರಿಸುವವರ ಸಂಖ್ಯೆ ದಿನೆ, ದಿನೆ ಹೆಚ್ಚಾಗುತ್ತಿದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆಗೆ ಇದರಿಂದ ಪೆಟ್ಟು ಬೀಳುತ್ತಿದೆ. ಸ್ವಾಭಿಮಾನ ಹಾಗೂ ಸ್ವಾತಂತ್ರ್ಯ ಪತ್ರಕರ್ತರಲ್ಲಿ ಬೇರೂರಲು ವಿಶಾಲ ಮನೋಭಾವ ವುಳ್ಳವರಾಗಬೇಕು. ಅದಕ್ಕೆ ಜಿಲ್ಲಾ ಪತ್ರಕರ್ತರ ಸಂಘ ಸದಾ ಪತ್ರಕರ್ತರ ಬೆನ್ನಿಗಿರುತ್ತದೆ ಎಂದು ಅಭಯ ನೀಡಿದರು.

ಸೆಪ್ಟೆಂಬರ್‌ನಲ್ಲಿ ಮೌಂಟ್ ಅಬೂದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಾಧ್ಯಮ ಸಮ್ಮೇಳನದಲ್ಲಿ ಜಿಲ್ಲೆಯ ಪತ್ರಕರ್ತರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಬ್ರಹ್ಮಕುಮಾರಿ ರಾಜಯೋಗ ಕೇಂದ್ರದ ಪ್ರವರ್ತಕ ಬಿ.ಕೆ. ಪ್ರಭಾಕರ ಕೋರವಾರ, ಬಿ.ಕೆ ವಿಜಯಲಕ್ಷ್ಮೀ ಸಹೋದರಿ ಕರೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

ಮುದ್ರಣ, ದೃಶ್ಯ ಮಾಧ್ಯಮ, ಛಾಯಾ ಗ್ರಾಹಕರು, ಜಾಹಿರಾತು ಪ್ರತಿನಿಧಿಗಳು, ಪತ್ರಿಕಾ ಏಜೆಂಟರು ಮತ್ತು ವಿತರಕರನ್ನೂ ಸನ್ಮಾನಿಸಲಾಯಿತು. ಬಿ.ಕೆ. ಮಂಗಲಾ, ಬಿ.ಕೆ ಗುರುದೇವಿ, ವಾರ್ತಾಧಿಕಾರಿ ಗವಿಸಿದ್ದಪ್ಪ, ಪೃಥ್ವಿರಾಜ ಎಸ್‌. ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next