Advertisement

ಪಿಒಪಿ-ಬಣ್ಣ ಲೇಪಿತ ಗಣೇಶ ಮೂರ್ತಿ ನಿಷೇಧ: ಡಿಸಿ

04:51 PM Aug 02, 2019 | Naveen |

ಬೀದರ: ಗಣೇಶ ಹಬ್ಬಕ್ಕೆ ಈ ವರ್ಷ ಯಾರೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಬಳಸದೇ ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಿ ಹಬ್ಬ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್‌. ಮಹಾದೇವ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗಣೇಶ ಚತುರ್ಥಿ ಆಚರಣೆಯಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ಬಣ್ಣ ಲೇಪಿತ ವಿಗ್ರಹಗಳ ನಿಷೇಧ ಹಾಗೂ ಮುಂಜಾಗ್ರತೆಯಾಗಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಈ ಬಾರಿ ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸಹಕರಿಸಬೇಕು. ಗಣೇಶ ಉತ್ಸವದಲ್ಲಿ ಪ್ರತಿಯೊಬ್ಬರೂ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಈ ಮೂಲಕ ಜಿಲ್ಲೆಯಲ್ಲಿ ಹೊಸದೊಂದು ವಾತಾವರಣ ನಿರ್ಮಾಣವಾಗಬೇಕು ಎಂದರು.

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ಬಣ್ಣ ಲೇಪಿತ ವಿಗ್ರಹಗಳ ನಿಷೇಧದ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ಇದಕ್ಕೆ ಜನರು ಸಹಕರಿಸಬೇಕು. ಪ್ರತಿಯೊಬ್ಬರು ಪರಿಸರ ಸ್ನೇಹಿ ಮೂರ್ತಿಗಳನ್ನು ಬಳಸಲು ಬೇಕಾದ ವಾತಾವರಣವನ್ನು ಜಿಲ್ಲೆಯಲ್ಲಿ ಜಿಲ್ಲಾಡಳಿತದಿಂದ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸಾರ್ವಜನಿಕರಿಗೆ ಎಚ್ಚರಿಕೆ: ಗಣೇಶ ಉತ್ಸವದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ಬಣ್ಣಲೇಪಿತ ವಿಗ್ರಹಗಳನ್ನು ಯಾರೂ ಕೂಡ ಪ್ರತಿಷ್ಠಾಪಿಸಬಾರದು ಮತ್ತು ಮಾರಾಟ ಮಾಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿ ಯಾರಾದರೂ ಪಿಒಪಿ ಮೂರ್ತಿಗಳನ್ನು ಮಾರಾಟ ಮಾಡಿದಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಚ್ಚರಿಸಿದರು.

Advertisement

ಮತ್ತೂಂದು ಸಭೆ ನಡೆಯಲಿ: ಈ ಸಭೆಯಲ್ಲಿ ಬಹಳಷ್ಟು ಗಣೇಶ ಮಂಡಳಿಗಳ ಪ್ರಮುಖರು ಪಾಲ್ಗೊಂಡಿಲ್ಲ. ಅವರಿಗೆ ಮತ್ತೂಂದು ಸಭೆ ಮಾಡಬೇಕು ಎಂದು ಯುವ ಮುಖಂಡ ವಿರೂಪಾಕ್ಷ ಗಾದಗಿ ಸಭೆಗೆ ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಮಹಾಮಂಡಳದ ಪದಾಧಿಕಾರಿಗಳೊಂದಿಗೆ ಮತ್ತೂಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಪಿಒಪಿ ವಿಗ್ರಹ ತಯಾರಿಕೆ ನಿಲ್ಲಿಸಿ: ಉತ್ಸವದ ಸಂದರ್ಭದಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ವೇಳೆ ಕ್ರಮ ಜರುಗಿಸುವುದು ಸರಿಯಲ್ಲ. ಹೀಗಾಗಿ ಮುಖ್ಯವಾಗಿ ಇಂತಹ ನಿಷೇಧಿತ ಮೂರ್ತಿಗಳ ತಯಾರಿಕೆಯನ್ನೇ ನಿಲ್ಲಿಸಬೇಕು. ಇಂತಹ ಮೂರ್ತಿ ತಯಾರಿ ಮಾಡುವವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕ್ರಮ ಜರುಗಿಸುವುದಾಗಿ ಎಚ್ಚರಿಸಬೇಕು ಎನ್ನುವ ಸಲಹೆಗಳು ಸಭೆಯಲ್ಲಿ ಕೇಳಿ ಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ವಹಿಸಿ ನಿಷೇಧಿತ ಮೂರ್ತಿಗಳನ್ನು ತಯಾರಿಸುವುದನ್ನೇ ತಡೆಯುವ ಪ್ರಯತ್ನ ಮಾಡಲಿದೆ ಎಂದರು.

ಮಣ್ಣಿನ ಮೂರ್ತಿ ಲಭ್ಯವಾಗಲಿ: ಮಣ್ಣಿನ ವಿಗ್ರಹಗಳನ್ನು ಬಳಸಲು ನಮಗೆ ಯಾವುದೇ ಅಭ್ಯಂತರವಿಲ್ಲ. ಆದರೆ ಜಿಲ್ಲೆಯಲ್ಲಿ ಮಣ್ಣಿನಿಂದ ತಯಾರಿಸಿದ ವಿಗ್ರಹಗಳು ಸಿಗುತ್ತಿಲ್ಲ. ಅನಿವಾರ್ಯವಾಗಿ ಜನರು ಪಿಒಪಿ ವಿಗ್ರಹಗಳನ್ನು ಬಳಸುತ್ತಾರೆ. ಆದ್ದರಿಂದ ಮಣ್ಣಿನ ವಿಗ್ರಹಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುವಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಯುವ ಮುಖಂಡ ಶ್ರೀಮಂತ ಸಪಾಟೆ ಸಲಹೆ ನೀಡಿದರು. ಅಪರ ಜಿಲ್ಲಾಧಿಕಾರಿ ರುದ್ರೇಶ್‌ ಗಾಳಿ, ಮುಖಂಡರಾದ ಅನೀಲ ಬೆಲ್ದಾರ, ಆನಂದ ದೇವಪ್ಪ, ವಿಜಯಕುಮಾರ ಸೊನಾರೆ, ಸಾಹಿತಿ ಜಗನ್ನಾಥ ಹೆಬ್ಟಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ರಾಜಶೇಖರ ವಟಗೆ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next