Advertisement

ಒತ್ತಡ ಕಳೆಯುವ ಸಾಧನ ಬರವಣಿಗ

01:51 PM Dec 16, 2019 | Naveen |

ಬೀದರ: ಬರವಣೆಗೆ ಒಂದು ಮನೋವೈಜ್ಞಾನಿಕ ಕ್ರಮ. ನಮ್ಮೊಳಗಿನ ನೇತ್ಯಾತ್ಮಕ ವಿಚಾರಧಾರೆ ಮತ್ತು ಒತ್ತಡ ಕಡಿಮೆ ಮಾಡಬಲ್ಲ ಸಾಧನವೆಂದರೆ ಅದು ಬರವಣಿಗೆ. ತಂತ್ರಜ್ಞಾನ ಬೆಳೆದಂತೆ ನಮ್ಮೊಳಗಿನ ಸೃಜನಶೀಲನೆ ಕಡಿಮೆಯಾಗಬಾರದು ಎಂದು ಹಿರಿಯ ಸಾಹಿತಿ ಶಿವಕುಮಾರ ಕಟ್ಟೆ ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ರವಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಂದಾರ ಕಲಾವಿದರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ರಜತ ಕವಿ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

ಜಾಗತೀಕರಣದ ಇಂದಿನ ದಿನಗಳಲ್ಲಿ ಬರಹಗಾರರು ಸ್ವತಂತ್ರರಾಗಿರಬೇಕು. ಸಾಂಸ್ಕೃತಿಕ ಬಂಡವಾಳಶಾಹಿಗಳಾಗಿರಬೇಕು. ಮತ್ತೋರ್ವ ಬರಹಗಾರನ ಪ್ರಭಾವಕ್ಕೊಳಗಾರದರೂ ಸ್ವಂತಿಕೆಯ ನೆಲದ ಮೇಲೆ ಬದುಕಬೇಕು. ನಮ್ಮ ಬರಹ ನಮ್ಮ ಪ್ರವೃತ್ತಿಯಾದಾಗ ಅದಕ್ಕೊಂದು ಮೌಲ್ಯ ಒದಗಿಸಿಕೊಡಬೇಕು. ಪ್ರವೃತ್ತಿಗಳು ಅತೃಪ್ತಿಗೊಂಡಾಗ ಮನಸ್ಸು ವ್ಯಗ್ರವಾಗುತ್ತದೆ ಎಂದರು.

ಟೀಕಾಕಾರರ ಕಲ್ಲಿಂದ ಮನೆ ಕಟ್ಟಿ: ಜಟಿಲ ಕಾನನದ ಮಧ್ಯ ಸತ್ಯದ ಹುಡುಕಾಟ ನಡೆಸುವ ಕವಿ, ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಹೊಂದುವ ತುಡಿತ, ಅನಂತ ನೆಮ್ಮದಿ ಹುಡುಕಾಟದ ಹಂಬಲ ಜಗದ ಜೀವಂತಿಕೆಯನ್ನು ತನ್ನೊಡಲೊಳಗೆ ತುಂಬಿಕೊಂಡಿದೆ. ಕಾವ್ಯ ರಚನೆಗೆ ಅವಸರ ಸಲ್ಲ. ಇನ್ನು ಓದುಗ ಸ್ವೀಕರಿಸುವ ಭಾವಾರ್ಥ ಅವರವರಿಗೆ ಬಿಟ್ಟಿದ್ದು. ಕಾವ್ಯ ರಚನೆಯ ನಂತರವೂ ಟೀಕೆಗೆ ಅವಕಾಶ ಮಾಡಿಕೊಡಬೇಕು. ಟೀಕಾಕಾರರು ಎಸೆಯುವ ಕಲ್ಲುಗಳಿಂದಲೇ ಮನೆ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಪ್ರತಿಯೊಬ್ಬ ಕವಿಯೂ ಒಬ್ಬರಿಗೊಬ್ಬರೂ ಭಿನ್ನರೆ. ಆಯಾ ಕಾಲಘಟ್ಟದಲ್ಲಿ ಮೂಡಿ ಬಂದ ಕವಿತೆಗಳ ಆಧಾರದಲ್ಲಿ ಎಲ್ಲ ಕವಿಗಳೂ ಒಂದೇ ಎಂದು ಹೇಳಲಿಕ್ಕಾಗದು. ಒಂದು ಪರಂಪರೆಯ ಭಾಷೆ ಮತ್ತು ಅನುಭವವನ್ನು ಪ್ರತಿಯೊಬ್ಬ ಕವಿ ತನ್ನ ವಿಶಿಷ್ಟಾಭಿವ್ಯಕ್ತಿಯಿಂದ ಗುರುತಿಸಬಲ್ಲ. ಪಂಪ ಮತ್ತು ರನ್ನ ಇಬ್ಬರೂ ಚಂಪೂ ಕಾವ್ಯ ಪ್ರಕಾರದಲ್ಲೇ ಬರೆದರೂ ಇಬ್ಬರ ಕಾವ್ಯ ಶೈಲಿ ಬೇರೆ ಬೇರೆ. ಕವಿತೆ ಕೇವಲ ತನ್ನ ಅಂತಃಸತ್ವದ ಬಲದ ಮೇಲೆ ದೃಢವಾಗಿ ಕಾಲೂರಿ ನಿಲ್ಲಬೇಕೆಂದು ಅಡಿಗರು ಪ್ರತಿಪಾದಿಸಿದ್ದರು. ಆದರೂ ಮುಂದುವರಿದ ನವ್ಯಕಾವ್ಯದ ಅನೇಕ ಜನ ಕವಿಗಳ ಕಾವ್ಯ
ಇಂದು ಹಾಡಿನ ರೂಪದಲ್ಲಿ ನಮಗೆ ಲಭ್ಯವಿವೆ ಎಂದರು.

Advertisement

ಕಾವ್ಯ ಕ್ಷೇತ್ರಕ್ಕೆ ನೋವನ್ನು ಮರೆಸುವ ಗುಣವಿದೆ. ಅದು ಭಾವಾಭಿವ್ಯಕ್ತಿಯ ಸಾಧನ. ಕಾವ್ಯದೊಳಗೆ ಅನೇಕ ಸಂಗತಿಗಳಿರುತ್ತವೆ. ಅನೇಕರು ಪ್ರಯೋಗಾತ್ಮಕ ರಚನೆಯಲ್ಲಿ ತೊಡಗಿದ್ದರೆ, ಮತ್ತೆ ಅನೇಕರು ಸ್ವತಂತ್ರ ಕಾವ್ಯ ರಚನೆಯಲ್ಲಿ ತೊಡಗಿರುತ್ತಾರೆ. ಯಾವ ಕಾವ್ಯ ಮತ್ತೆ ಮತ್ತೆ ಓದಬೇಕೆನಿಸುತ್ತದೋ ಅದು ಬಹುಕಾಲ ಕಾವ್ಯಕ್ಷೇತ್ರದಲ್ಲಿ ಬದುಕುತ್ತದೆ.

ಇಂಗ್ಲಿಷ್‌ ಕೊಲ್ಲುವ ಭಾಷೆ: ಇಂದು ಜಗತ್ತನ್ನು ಆಕ್ರಮಿಸಿಕೊಂಡಿರುವ ಇಂಗ್ಲಿಷ್‌ ಜಗತ್ತಿನ ಇತರ ಭಾಷೆಗಳನ್ನು ಕೊಲ್ಲುವ ಭಾಷೆಯಾಗಿದೆ. ತನ್ನೊಳಗೆ ಒಂದಿನಿತು ಸ್ವಂತಿಕೆ ಇಲ್ಲದ ಇಂಗ್ಲೀಷ್‌ ಜಗತ್ತಿನ ಎಲ್ಲ ಭಾಷೆಯ ಪದಗಳನ್ನು ಎರವಲು ಪಡೆದುಕೊಂಡು ಬೀಗುತ್ತಿದೆ. ಅದು ಕನ್ನಡದಿಂದಲೇ ಎಪ್ಪತ್ತು ಸಾವಿರ ಪದಗಳನ್ನು ಪಡೆದುಕೊಂಡಿದೆ. ಭಾಷೆಯ ರಕ್ಷಣೆಯಿಂದ ನಾಡಿನ ಮತ್ತು ಸಂಸ್ಕೃತಿಯ ರಕ್ಷಣೆ ಸಾಧ್ಯ.

ಭಾಷೆಯ ರಕ್ಷಣೆಗೆ ಕೇವಲ ಸಂಘಟನೆಗಳು ನಡೆಸುವ ಹೋರಾಟ ಪ್ರಮುಖವಲ್ಲ. ಭಾಷೆಯ ರಕ್ಷಣೆಯಾಗಬೇಕಾದರೆ ನಮ್ಮಲ್ಲಿರುವ ಪ್ರವೃತ್ತಿಗಳು ಜಾಗೃತವಾಗಬೇಕು. ಆ ಪ್ರವೃತ್ತಿಗಳನ್ನು ನಾವು ವ್ಯವಸ್ಥಿತಗೊಳಿಸಬೇಕಾದ ಅನಿವಾರ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next