ಬೀದರ: ಬೆಳೆಗಳಿಗೆ ಕೀಟನಾಶಗಳನ್ನು ಸಿಂಪರಣೆ ಮಾಡುವಾಗ ರೈತರು ಮುಂಜಾಗ್ರತಾ ಕ್ರಮ ಗಳನ್ನು ಅನುಸರಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ. ರೈತರಿಗೆ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಉದ್ದು, ಹೆಸರು ಮತ್ತು ಸೋಯಾ ಅವರೆ ಬೆಳೆಗಳಾದ ಕೀಟ/ ರೋಗ ಬಾಧೆಯನ್ನು ತಡೆಗಟ್ಟಲು ಕೀಟನಾಶಕ ಸಿಂಪರಣೆ ಮಾಡುವಾಗ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಸಿಂಪರಣೆ ಮಾಡಿರುವುದರಿಂದ ಜಿಲ್ಲೆಯಲ್ಲಿ ಕೆಲವು ರೈತರು ಅನಾರೋಗ್ಯದಿಂದ ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪ್ರಕರಣಗಳು ನಡೆದಿವೆ. ಪ್ರಯುಕ್ತ ಈಗಾಗಲೇ ತೊಗರಿ ಬೆಳೆಯಲ್ಲಿ ಮೊಗ್ಗು, ಹೂ ಬಿಡುವಿಕೆ ಪ್ರಾರಂಭವಾಗಿದ್ದು, ಕೀಟಗಳ ಹಾವಳಿ ಕಂಡು ಬರುತ್ತಿದೆ. ಆದ್ದರಿಂದ ಈ ಕೀಟಗಳನ್ನು ತಡೆಗಟ್ಟುವ ಮುನ್ನ ಜಿಲ್ಲೆಯ ಎಲ್ಲಾ ರೈತರು ಈ ಕೆಳಕಂಡ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.
ಔಷಧ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಸಿಂಪರಣೆ ಮಾಡಬಾರದು ಹಾಗೂ ಗಾಳಿಯು ಹೆಚ್ಚಾಗಿದ್ದರೂ ಕೂಡ ಸಿಂಪರಣೆ ಮಾಡಬಾರದು. ಮುಂಜಾನೆ ಮತ್ತು ಸಾಯಂಕಾಲ ಸಿಂಪರಣೆ ಮಾಡುವುದು ಉತ್ತಮ. ಸಿಂಪರಣೆಗೆ ಉಪಯೋಗಿಸುವ ಸ್ಪ್ರೇಯರ್‌ನ್ನು ಚೆನ್ನಾಗಿ ನೀರಿನಲ್ಲಿ ತೊಳೆದಿರಬೇಕು. ಔಷಧ ಮತ್ತು ನೀರು ಮಿಶ್ರಣ ಮಾಡಿ ಚೆನ್ನಾಗಿ ಕಲಿಸಿ ನಂತರ ಸಿಂಪರಣೆ ಮಾಡಬೇಕು. ಸುರಕ್ಷಿತ ಉಪಕರಣಗಳಾದ ಕನ್ನಡಕ, ಮುಖವಾಡ, ಕೈ ಚೀಲಗಳನ್ನು ಧರಿಸಿಕೊಂಡು ಸಿಂಪರಣೆ ಮಾಡಬೇಕು.
ಕೀಟನಾಶಕ ಸಿಂಪರಣೆ ಮಾಡುವ ಸಮಯದಲ್ಲಿ ಯಾವುದೇ ತರಹದ ತಿಂಡಿ ತಿನಿಸು ಸೇವಿಸಬಾರದು. ಧೂಮಪಾನ ಮತ್ತು ತಂಬಾಕು ಸೇವನೆ ಮಾಡಬಾರದು. ಸಿಂಪರಣೆಯಾದ ತಕ್ಷಣವೇ ಸಿಂಪರಣೆಗೆ ಬಳಸಿದ ಉಪಕರಣಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಇಡಬೇಕು. ಸಿಂಪರಣೆ ಆದ ತಕ್ಷಣವೇ ಧರಿಸಿದ ಬಟ್ಟೆಯನ್ನು ಬದಲಾಯಿಸಬೇಕು. ಹಾಗೂ ಕೈ ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಂಡ ನಂತರವೇ ಊಟ ಉಪಚಾರವನ್ನು ಮಾಡಬೇಕು.
ಸಿಂಪರಣೆ ಔಷಧಗಳನ್ನು ಮಕ್ಕಳಿಂದ ಹಾಗೂ ಔಷಧಗಳ ಕುರಿತು ತಿಳಿವಳಿಕೆ ಇರದ ವ್ಯಕ್ತಿಗಳಿಂದ ಹಾಗೂ ಸಾಕು ಪ್ರಾಣಿಗಳಿಂದ ದೂರವಿಡಬೇಕು. ರೈತರು ಔಷಧ ಸಿಂಪರಣೆ ಮಾಡುವಾಗ ಪ್ರಥಮ ಚಿಕಿತ್ಸೆ ಪೆಟ್ಟಿಗೆ (ಫಸ್ಟ್ ಏಡ್ ಬಾಕ್ಸ್) ಹೊಂದಿರಬೇಕು.
ಒಂದು ವೇಳೆ ಸಿಂಪರಣೆ ಮಾಡುವಾಗ ಏನಾದರೂ ತೊಂದರೆಯಾದಾಗ ತಕ್ಷಣವೇ ಸಮೀಪದ ಆಸ್ಪತ್ರೆಯಲ್ಲಿ ವೈದ್ಯರನ್ನು ಕಾಣಬೇಕು. ರೈತರು ಸಿಂಪರಣೆ ಮಾಡುವುದಕ್ಕಿಂತ ಮುಂಚೆ ಔಷಧ ಮೇಲಿರುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಹಾಗೂ ನಿರ್ಧರಿಸಿದ ಪ್ರಮಾಣದಷ್ಟೆ ಮಾತ್ರ ಕೀಟ ರೋಗನಾಶಕ ಸಿಂಪಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.