Advertisement

ಕಸ ವಿಲೇವಾರಿ ‘ಆಂದೋಲನ’ದಂತೆ ನಡೆಯಲಿ

07:49 PM Nov 06, 2019 | Naveen |

ಬೀದರ: ನಗರದ ಸಾರ್ವಜನಿಕರ ಸಹಕಾರ ಪಡೆದು, ನಗರದ ಎಲ್ಲಾ ಕಡೆಗಳಲ್ಲಿ ಕಸ ವಿಲೇವಾರಿ ಕಾರ್ಯವನ್ನು ಆಂದೋಲನ ಮಾದರಿಯಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಾಭಿವೃದ್ಧಿ ಕೋಶ, ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಜೊತೆಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಗಳು ಸುಗಮ ಸಂಚಾರಕ್ಕೆ ಪೂರಕವಾಗಿರಬೇಕು. ಈ ನಿಟ್ಟಿನಲ್ಲಿ ಆಯಾ ಕಡೆಗಳಲ್ಲಿ ಬಿದ್ದಿರುವ ಎಲ್ಲಾ ಗುಂಡಿಗಳನ್ನು ಮುಚ್ಚಿಸುವ ಕಾರ್ಯ ನಾಳೆಯಿಂದಲೇ ಆರಂಭವಾಗಬೇಕು ಎಂದು ನಿರ್ದೇಶನ ನೀಡಿದರು.

ನಗರಸಭೆ ವಾಹನಗಳು ಸಂಜೆ 6ರಿಂದ 8ರ ವರೆಗೆ ಕಸ ಸಂಗ್ರಹಿಸಲು ನಗರ ಸುತ್ತುತ್ತವೆ. ನಗರಸಭೆಯಿಂದ ಪ್ರತಿ ಮನೆಗೆ ತಲಾ ಎರಡು ಬಕೇಟ್‌ಗಳನ್ನು ನೀಡಿದ್ದೇವೆ. ಆದರೂ ಜನರು ಕಸವನ್ನು ಬೀದಿಯಲ್ಲಿ ಎಸೆಯುವುದು ಕಂಡು ಬರುತ್ತಿದೆ ಎಂದು ಪೌರಾಯುಕ್ತ ಬಸಪ್ಪ ಅವರು ಸಭೆಗೆ ತಿಳಿಸಿದರು.

ಕಸ ಎಸೆಯುವವರಿಗೆ ದಂಡ ವಿಧಿಸಿ: ಯಾವ ಯಾವ ಪ್ರದೇಶದಲ್ಲಿ ಯಾರು ಕಸವನ್ನು ಬೀದಿಗೆ ಎಸೆಯುತ್ತಾರೆ ಎಂಬುದನ್ನು ಪತ್ತೆ ಹಚ್ಚಿ ಯಾವುದೇ ಮುಲಾಜಿಲ್ಲದೇ ಅಂತವರಿಗೆ ದಂಡ ವಿಧಿಸಿ. ವಾಹನಗಳು ಬಂದಾಗ ಕಸ ಹಾಕದೇ ವಾಹನ ಹೋದ ಬಳಿಕ ಕಸವನ್ನು ಬೀದಿಗೆ ಚೆಲ್ಲುವ ಅಂಗಡಿ ಮಾಲೀಕರಿಗೂ ನೊಟೀಸ್‌ ಕೊಟ್ಟು ಎಚ್ಚರಿಕೆ ನೀಡಿರಿ ಎಂದು ಜಿಲ್ಲಾ ಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ಲಾಸ್ಟಿಕ್‌ ಹಾಗೂ ಇನ್ನಿತರ ವಸ್ತುಗಳಿಂದ ತುಂಬಿಕೊಂಡ ಚರಂಡಿಗಳನ್ನು ಸರಿಪಡಿಸುವ ಕಾರ್ಯ ಕೂಡ ಏಕಕಾಲಕ್ಕೆ ನಡೆಯಬೇಕು. ಜೆಸಿಬಿ ಯಂತ್ರಗಳನ್ನು ಬಳಸಿಕೊಂಡು 10 ದಿನಗಳೊಳಗೆ ಈ ಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ಗಡುವು ವಿಧಿಸಿದರು.

Advertisement

ನಗರದ ಯಾವ ಯಾವ ಕಡೆಗಳಲ್ಲಿ ಬೀದಿ ದೀಪ ಇಲ್ಲ. ಯಾವ ಯಾವ ಕಡೆಗಳಲ್ಲಿ ಚರಂಡಿ ಮಾಡುವುದು ಬಾಕಿ ಇದೆ ಎಂಬುದನ್ನು ಸರಿಯಾಗಿ ಗುರುತಿಸಿ ಎಲ್ಲಾ ಕಡೆಗಳಲ್ಲಿ ಬೀದಿದೀಪಗಳ ವ್ಯವಸ್ಥೆ ಮಾಡಬೇಕು. ವೈಜ್ಞಾನೀಕ ರೀತಿಯಲ್ಲಿ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿರಿ ಎಂದು ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.

ಪ್ಲಾಸ್ಟಿಕ್‌ ನಿರ್ಮೂಲನೆಗೆ ದಾಳಿ ನಡೆಸಿ: ನಗರದಲ್ಲಿ ಪ್ಲಾಸ್ಟಿಕ್‌ ಬಳಕೆ ಕಡಿಮೆಯಾಗಿದೆ. ಆದರೂ ಇನ್ನೂ ಕೆಲವು ಕಡೆಗಳಲ್ಲಿ ಬಳಸುತ್ತಿದ್ದಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ ಒಂದು ವಾರಗಳ ಕಾಲ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಬಳಸುವವರ ಮೇಲೆ ದಂಡ ಹಾಕಿರಿ.

ಪ್ಲಾಸ್ಟಿಕ್‌ ಬಳಕೆ ಮುಂದುವರಿಸಿದರೆ ಅಂಗಡಿಯನ್ನು ಮುಚ್ಚಿಸುವುದಾಗಿ ಎಚ್ಚರಿಕೆ ನೀಡಿರಿ ಎಂದು ಜಿಲ್ಲಾ ಧಿಕಾರಿಗಳು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ನಗರೋತ್ಥಾನ 2 ಮತ್ತು 3ರ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮ ವಹಿಸುವುದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಸಂಬಂಧಿಸಿದ ಗುತ್ತಿಗೆದಾರರ ಸಭೆ ಕರೆಯಲು ಜಿಲ್ಲಾಧಿಕಾರಿಗಳು ಬೀದರ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತ ಶಶಿಕಾಂತ ಮಳ್ಳಿ ಅವರಿಗೆ ಸೂಚಿಸಿದರು.

8 ಕಡೆಗಳಲ್ಲಿ ನಗರಸಭೆ ನೀರು: ನ್ಯೂ ಆದರ್ಶ ಕಾಲೋನಿ, ಸಂಗಮೇಶ್ವರ ಕಾಲೋನಿ, ನಂದಿ ಪೆಟ್ರೋಲ್‌ ಬಂಕ್‌ ಹಿಂದುಗಡೆ, ಅಲ್ಲಪ್ರಭು ನಗರ, ಹಳೆಯ ಕುಂಬಾರವಾಡ ಸೇರಿದಂತೆ ಒಟ್ಟು ನಗರದ 8 ಕಡೆಗಳಲ್ಲಿನ 3000 ಮನೆಗಳಿಗೆ ನಿರಂತರ ಕುಡಿಯುವ ನೀರಿನ ಸೌಕರ್ಯ ಒದಗಿಸುವಲ್ಲಿ ತೊಂದರೆಯಾಗುತ್ತಿದೆ. ಹೀಗಾಗಿ ಇಲ್ಲಿನ ಜನತೆಗೆ ಸದ್ಯಕ್ಕೆ ನಗರಸಭೆಯಿಂದ ನೀರು ಪೂರೈಕೆ ಮಾಡುತ್ತಿದ್ದೇವೆ. ಬರುವ 20 ದಿನಗಳೊಳಗೆ ನಿರಂತರ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗುವುದು ಎಂದು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತದ ನಾಗರಾಜ ಅವರು ಸಭೆಗೆ ತಿಳಿಸಿದರು.

ಡಿ.1ರಿಂದ ಎಲ್ಲಾ 8 ಕಡೆಯ 3000 ಮನೆಗಳಿಗೆ ನಿರಂತರ ನೀರಿನ ಸೌಕರ್ಯ ಸಿಗುವ ವ್ಯವಸ್ಥೆ ಮಾಡಬೇಕು. ಪ್ರಸ್ತಾವನೆಗಳಿಗೆ ನಗರಸಭೆಯಿಂದ ಒಪ್ಪಿಗೆ ಪಡೆದು ಕಾಮಗಾರಿಯ ವೇಗ ಹೆಚ್ಚಿಸಬೇಕು ಎಂದು ಜಿಲ್ಲಾಧಿಕಾರಿಗಳು ನಾಗರಾಜ ಅವರಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ನಗರಸಭೆ ಅಭಿಯಂತ ರಾಜಶೇಖರ ಮಠಪತಿ, ಪರಿಸರ ಅಭಿಯಂತರ ರವೀಂದ್ರ ಕಾಂಬಳೆ, ಹೆಲ್ತ್‌ ಇನ್ಸ್‌ಪೆಕ್ಟರ್‌ ಸುಭಾಷ ಮತ್ತಿತರರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next