ಬೀದರ: ಬೀದರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸುಮಾರು 100 ವರ್ಷಕ್ಕೂ ಹೆಚ್ಚು ಹಳೆಯದಾದ ಮಣ್ಣಿನ ಮನಗೆಳ ಕುರಿತು ಸರ್ವೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಬಸವಕಲ್ಯಾಣ ನಗರದಲ್ಲಿ ಬುಧವಾರ ಮಳೆಯಿಂದಾಗಿ ಮನೆಯ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ 6 ಜನರು ಮೃತಪಟ್ಟವರ ಮನೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಭೇಟಿ ನೀಡಿ 24 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬೀದರ ಜಿಲ್ಲೆಯ ವಿವಿಧಡೆ ಮಣ್ಣಿನ ಮನೆಗಳು ಇರುವ ಬಗ್ಗೆ ಮಾಹಿತಿ ದೊರೆತಿದೆ. ಅಂತಹ ಮನೆಗಳ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ವಿವಿಧ ವಸತಿ ಯೋಜನೆಗಳ ಅಡಿ ಬೀದರ ಜಿಲ್ಲೆಯಲ್ಲಿ ಮನೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಬಸವಕಲ್ಯಾಣ ತಾಲೂಕಿನಲ್ಲಿ 2500 ಮನೆಗಳ ನಿರ್ಮಾಣಕ್ಕೆ ಆದೇಶ ನೀಡಲಾಗಿದೆ. ಸದ್ಯ ಮಣ್ಣಿನ ಮನೆಯಲ್ಲಿ ವಾಸ ಇರುವ ಕುಟುಂಬಸ್ಥರನ್ನು ಗುರುತಿಸಿ ಮನೆ ಮಾಲೀಕನ ಹೆಸರಲ್ಲಿ ನಿವೇಶನ ಇದ್ದರೆ ಕೂಡಲೇ ಮನೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ತಿಳಿಸಿದರು.
ಕಾರಂಜಾ ಸಂತ್ರಸ್ತರಿಗೆ ಪರಿಹಾರ: ಕಾರಂಜಾ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ. ಸಂತ್ರಸ್ತರ ಸಮಸ್ಯೆ ನನ್ನ ಅವಧಿಯಲ್ಲಿ ಉಲ್ಬಣಗೊಂಡಿಲ್ಲ. ಆದರೂ ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾದ ಸಮಿತಿ ವರದಿ ಬಂದ ಕೂಡಲೇ ಮುಂದಿನ ಕ್ರಮ ಕೈಗೊಳ್ಳಾಗುವುದು ಎಂದು ತಿಳಿಸಿದರು.
ಸಹಕಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ಕ್ರೀಡಾ ಖಾತೆ ಸಚಿವ ರಹೀಂಖಾನ್, ಅರಣ್ಯ ನಿಗಮ ಅಧ್ಯಕ್ಷ ಹಾಗೂ ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್, ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.