ಬೀದರ: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಇಲಾಖೆಯ ನಿಯಮಗಳನ್ನು ಪಾಲಿಸದೇ ಮಕ್ಕಳ ಹಕ್ಕುಗಳನ್ನು ಉಲ್ಲಂಘನೆ ಮಾಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಿಲ್ಲೆಯ ವಿವಿಧ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿನ ವಿದ್ಯಾರ್ಥಿಗಳಿಗೆ ನೀಡಬೇಕಿರುವ ಮೂಲ ಸೌಕರ್ಯಗಳನ್ನು ಶಾಲೆಗಳು ನೀಡುತ್ತಿಲ್ಲ. ಸರ್ಕಾರಿ ಶಾಲೆಗಳಲ್ಲಿ ವಿವಿಧ ಯೋಜನೆಗಳಲ್ಲಿ ಅನುಷ್ಠಾನಗೊಂಡ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಶಾಲೆಯಲ್ಲಿ ಶೌಚಾಲಗಳಿಲ್ಲ: ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ನಿರ್ಮಾಣಗೊಂಡ ಶೌಚಾಲಯಗಳು ಮಾತ್ರ ಬಳಕೆಯಾಗುತ್ತಿಲ್ಲ. ಅಲ್ಲದೆ, ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕ ಪಡೆದು ಮಕ್ಕಳಿಗೆ ನೀಡಬೇಕಾದ ಮೂಲ ಸೌಕರ್ಯಗಳನ್ನು ನೀಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಶಿಕ್ಷಣ ನಿಯಮಗಳ ಪ್ರಕಾರ ಒಂದು ಶಾಲೆಯಲ್ಲಿನ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆ ಅನುಸಾರ ಶೌಚಾಲಯ ಹಾಗೂ ಪ್ರತ್ಯೇಕ ಮೂತ್ರ ವಿಸರ್ಜನೆ ಕೋಣೆಗಳನ್ನು ನಿರ್ಮಿಸಬೇಕು. 50 ವಿದ್ಯಾರ್ಥಿಗಳಿಗೆ ಒಂದು ಶೌಚಾಲಯ ಹಾಗೂ 40 ವಿದ್ಯಾರ್ಥಿಗಳಿಗೆ ಒಂದು ಮೂತ್ರಾಲಯ ನಿರ್ಮಿಸಬೇಕು ಎಂಬ ನಿಯಮವಿದೆ. ಆದರೆ, ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಸಾರ ಶೌಚಾಲಯಗಳನ್ನು ನಿರ್ಮಿಸದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ರಸ್ತೆ ಬದಿ ನಿಂತು ಮೂತ್ರ ವಿಸರ್ಜನೆ ಮಾಡುವ ಸ್ಥಿತಿ ಎಲ್ಲಾ ಕಡೆಗಳಲ್ಲಿ ಕಂಡು ಬರುತ್ತಿದೆ. ಈ ಕುರಿತು ಕೆಲ ಶಾಲೆಗಳ ಮುಖ್ಯಸ್ಥರನ್ನು ವಿಚಾರಿಸಿದರೆ, ಶಾಲೆಯ ಮಕ್ಕಳ ಸಂಖ್ಯೆಗೆ ಅನುಸಾರ ಶೌಚಾಲಯ ನಿರ್ಮಿಸಬೇಕಾದರೆ ಶಾಲೆಯ ಅರ್ಧ ಕೊಣೆಗಳು ಬೇಕಾಗುತ್ತವೆ. ನಗರದಲ್ಲಿ ಇಂಚು ಜಾಗಕ್ಕೆ ಸಾವಿರಾರು ಬೇಕಾಗುತ್ತವೆ ಎಂದು ಉತ್ತರಿಸಿದ್ದಾರೆ.
ಶುದ್ಧ ಕುಡಿಯುವ ನೀರಿಲ್ಲ: ಖಾಸಗಿ ಶಾಲೆಗಳು ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಆದರೆ, ಬಹುತೇಕ ಖಾಸಗಿ ಶಾಲೆಗಳಲ್ಲಿ ನೀರು ಶುದ್ಧೀಕರಣ ಘಟಕಗಳೇ ಇಲ್ಲ. ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಕೂಡ ಇದೇ ಸ್ಥಿತಿ ಇದ್ದು, ಶಾಲೆಯಲ್ಲಿನ ಕೊಳವೆ ಬಾವಿ, ತೆರೆದ ಬಾವಿ ಅಥವಾ ನಳಗಳಿಂದ ನೀರು ಪೂರೈಕೆ ಆಗುತ್ತಿದೆ. ಶಾಲೆಯಲ್ಲಿ ಶುದ್ಧ ನೀರು ಸಿಗುವುದಿಲ್ಲ ಎಂದು ತಿಳಿದ ಪಾಲಕರು ಮಕ್ಕಳ ಜತೆಗೆ ನೀರಿನ ಬಾಟಲ್ ಕಳುಹಿಸುವುದು ಅನಿವಾರ್ಯವಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ಸಮಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳು ಮನಬಂದತೆ ವರ್ತಿಸುತ್ತಿವೆ ಎಂಬುದು ಮಕ್ಕಳ ಪಾಲಕರ ಮಾತು.
ಸಿಸಿ ಕ್ಯಾಮೆರಾ ಅಳವಡಿಸಿಲ್ಲ: ಎರಡು ವರ್ಷಗಳ ಹಿಂದೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂಬ ನಿಯಮ ಜಾರಿಗೆ ಬಂದಿತ್ತು. ಈ ಸಂದರ್ಭದಲ್ಲಿ ಕೆಲ ಶಾಲೆಗಳು ಕ್ಯಾಮರಾ ಅಳವಡಿಸಿದ್ದು, ಇನ್ನು ಬಹುತೇಕ ಶಾಲೆಗಳಲ್ಲಿ ಕ್ಯಾಮರಾ ಅಳವಡಿಸಿಲ್ಲ. ಅಲ್ಲದೆ, ಮಕ್ಕಳ ಸಂಚಾರಕ್ಕೆ ಬಳಸುವ ಶಾಲಾ ವಾಹನಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದು ಎಲ್ಲಿಯೂ ಕಂಡು ಬಂದಿಲ್ಲ. ಅಲ್ಲದೆ, ಬಸ್ಸಿನಲ್ಲಿ ಸೀಟ್ ವ್ಯವಸ್ಥೆಗೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸುತಿರುವುದು ಕೂಡ ಕಂಡು ಬರುತ್ತಿದೆ.
ಆಟದ ಮೈದಾನ ಇಲ್ಲ: ಜಿಲ್ಲೆಯ ಬಹುತೇಕ ಖಾಸಗಿ ಶಾಲೆಗಳಲ್ಲಿ ಮಕ್ಕಳ ಆಟಕ್ಕೆ ಮೈದಾನವೆ ಇಲ್ಲ. ಬಹು ಮಹಡಿಯಲ್ಲಿ ತರಗತಿ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳು ಮಕ್ಕಳ ಆಟಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ. ಈ ವಿಷಯ ಶಿಕ್ಷಣ ಇಲಾಖೆಗೆ ಗೊತ್ತಿದರೂ ಕೂಡ ಇಂದಿಗೂ ಯಾವ ಶಾಲೆಗಳ ವಿರುದ್ಧವೂ ಕಠಿಣ ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನ ಹುಟ್ಟುವಂತೆ ಮಾಡಿದೆ. ಅಲ್ಲದೆ, ಬಹುಮಹಡಿಯಲ್ಲಿ ವರ್ಗ ಕೋಣೆಗಳನ್ನು ಸ್ಥಾಪಿಸಿರುವ ಶಾಲೆಗಳಲ್ಲಿ ಮೆಟ್ಟಿಲು ಏರಿ ಇಳಿಯಲು ಮಕ್ಕಳು ಹೈರಾಣಾಗುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
ಹೆಸರಿಗಷ್ಟೇ ಕಾನ್ವೆಂಟ್: ಆಂಗ್ಲ ಮಾಧ್ಯಮದ ಬೋರ್ಡ್ ಇದ್ದರೆ ಸಾಕು ಹಣ ಮಾಡುವುದು ಎಂಬ ಖಯಾಲಿಗೆ ಬಿದ್ದಿರುವ ಹಲವು ಶಿಕ್ಷಣ ಸಂಸ್ಥೆಗಳು ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿ ತೇರ್ಗಡೆಯಾದವರನ್ನೇ ಶಿಕ್ಷಕರನ್ನಾಗಿ ನೇಮಿಸುತ್ತಿದ್ದಾರೆ. ಶಿಕ್ಷಣ ಪದವಿ ಪಡೆದ ಅಭ್ಯರ್ಥಿಗಳಿಗೆ ಹೆಚ್ಚು ಸಂಬಳ ನೀಡಬೇಕಾಗುತ್ತದೆ. ಹಾಗಾಗಿ, ಹೆಚ್ಚು ಶಾಲೆಗಳಲ್ಲಿ ಅನುಭವ ಇಲ್ಲದ ಶಿಕ್ಷಕರೇ ಕಾಣಸಿಗುತ್ತಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯ ಮಾನದಂಡವಿದ್ದರೂ ಯಾವ ಶಿಕ್ಷಣ ಸಂಸ್ಥೆಗಳೂ ಕೂಡ ಅನುಸರಿಸುತ್ತಿಲ್ಲ. ವಿದ್ಯಾರ್ಥಿಗಳ ಪಾಲಕರಿಂದ ದೊಡ್ಡ ಮೊತ್ತದಲ್ಲಿ ಹಣ ವಸೂಲಿ ಮಾಡುತ್ತಿರುವ ಶಿಕ್ಷಣ ಸಂಸ್ಥೆಗಳು ದಿನದೂಡುವುದು ಮಾತ್ರ ತಮ್ಮ ಕಾಯಕ ಎಂಬಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.