Advertisement

ಕೃಷಿ ಕ್ಷೇತ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ

10:23 AM Jul 06, 2019 | Naveen |

ಬೀದರ: ಮಹಾರಾಷ್ಟ್ರದ ಕಡವಂಚಿ ಗ್ರಾಮದ ಮಾದರಿಗೂ ಮೀರಿ ಅತ್ಯಾಧುನಿಕವಾಗಿ ಕೃಷಿ ಕ್ಷೇತ್ರ ಅಭಿವೃದ್ಧಿಗೆ ಜಿಲ್ಲೆಯ ಅಧಿಕಾರಿಗಳು ಕೃಷಿ ಯೋಜನೆಗಳನ್ನು ರೂಪಿಸಬೇಕು. ಪ್ರಾಯೋಗಿಕವಾಗಿ 100 ರೈತ ಸದಸ್ಯರನ್ನು ಸೇರಿಸಿ ಸಹಕಾರ ಸಂಘ ರಚಿಸುವ ಮೂಲಕ ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು. ಬೀದರ್‌ ಜಿಲ್ಲೆ ರಾಜ್ಯದಲ್ಲೇ ಮಾದರಿಯಾಗಬೇಕು ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದ ತಮ್ಮ ನಿವಾಸದಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ, ಮೀನುಗಾರಿಕೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಸಭೆ ನಡೆಸಿ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಿದ ಅವರು, ಈ ಯೋಜನೆ ಅನುಷ್ಠಾನಕ್ಕೆ ಆಯಾ ಇಲಾಖೆಗಳ ಪಾತ್ರ ಹೇಗಿರುತ್ತದೆ ಎಂಬುದರ ಬಗ್ಗೆ ಆಯಾ ಇಲಾಖೆಗಳ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಸಹಕಾರ ಗುಚ್ಚ ಗ್ರಾಮ ಮಾದರಿಯಲ್ಲಿ ಜಿಲ್ಲೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅನುಷ್ಠಾನಗೊಳಿಸಲು ಮತ್ತು ರೈತರ ಆದಾಯದಮಟ್ಟ ಹೆಚ್ಚಿಸಲು ಹೊಸ ಯೋಜನೆಯೊಂದನ್ನು ರೂಪಿಸಿರಿ. ಸಹಕಾರ ವಲಯದಲ್ಲಿ ಕೃಷಿ ಇಲಾಖೆಯ ರೈತ ಉತ್ಪಾದಕರ ಸಂಸ್ಥೆಯ ಮಾದರಿಯಲ್ಲಿ 300 ಎಕರೆ ಕೃಷಿ ಭೂಮಿಯಲ್ಲಿ 100 ರೈತರನ್ನೊಳಗೊಂಡು 500 ಸಂಯುಕ್ತ ಬೇಸಾಯ ಸಹಕಾರ ಸಂಘಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ 2019-20ನೇ ಸಾಲಿನಲ್ಲಿ ಅನುದಾನ ಒದಗಿಸಲಾಗುತ್ತದೆ ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ನಮ್ಮ ಜಿಲ್ಲೆಯಲ್ಲಿ ರೂಪಿಸುವ ಯೋಜನೆ ಇಡೀ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿರಬೇಕು. ಬೇರೆ ಜಿಲ್ಲೆಯ ಜನರು ನಮ್ಮ ಜಿಲ್ಲೆಗೆ ಬಂದು ನಮ್ಮಲ್ಲಿನ ರೈತರ ಕೃಷಿ ಪದ್ಧತಿಯನ್ನು ನೋಡಿಕೊಂಡು ಹೋಗುವ ರೀತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ತಿಳಿಸಿದರು. ಇದಕ್ಕಾಗಿ ಬೀದರ ಜಿಲ್ಲೆಯಲ್ಲಿ ಗ್ರಾಮವೊಂದನ್ನು ಆಯ್ಕೆ ಮಾಡಿಕೊಳ್ಳಬೇಕು. 100 ರೈತರನ್ನು ತೆಗೆದುಕೊಂಡು ಅವರ ಮೂರು ವರ್ಷದ ಬೇಸಾಯದ ವಿವರ ಹಾಗೂ ನಿವ್ವಳ ಲಾಭದ ಕುರಿತು ಮಾಹಿ ಸಂಗ್ರಹಿಸಿಕೊಳ್ಳಬೇಕು ಎಂದು ಸಚಿವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

300ರಿಂದ 500 ಎಕರೆ ಪ್ರದೇಶದಲ್ಲಿ 2016-17, 2017-18 ಹಾಗೂ 2018-19ನೇ ಸಾಲಿನ ಮೂರು ವರ್ಷದಲ್ಲಿ ಬೇಸಾಯ ಮಾಡಿದ ರೈತರ ಅನುಭವ ಏನು ಎಂಬುದನ್ನು ತಿಳಿದುಕೊಳ್ಳಬೇಕು. ಆ ರೈತರು ಕಳೆದ ಮೂರು ವರ್ಷದಲ್ಲಿ ಬೆಳೆದ ಬೆಳೆಗಳ ವಿವರ, ನಿವ್ವಳ ಲಾಭ ಎಷ್ಟು? ಎಂಬುದು ಸೇರಿದಂತೆ ಆ ರೈತರ ಮೂರು ವರ್ಷದ ಬೇಸಾಯದ ಅನುಭವ ಆಧಾರದ ಮೇಲೆ ಕಾರ್ಯಕ್ರಮ ರೂಪಿಸಬೇಕು. ಆ ರೈತರಿಗೆ ಅನುಕೂಲಕ್ಕೆ ತಕ್ಕಂತೆ ಸೌಕರ್ಯ ಕಲ್ಪಿಸಬೇಕು. ಆ ರೈತರ ಜಮೀನಿನ ಮಣ್ಣು ಪರೀಕ್ಷೆ ಮಾಡಿಸಬೇಕು. ಸಾವಯವ ಕೃಷಿಯೊಳಗೊಂಡು ಸಮಗ್ರ ಕೃಷಿ ಪದ್ಧತಿ ಮಾಡಲು ಗಮನ ಕೊಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದರು.

Advertisement

ಆ ರೈತರ ಹಿಂದಿನ ಆರ್ಥಿಕ ಪರಿಸ್ಥಿತಿ ತಿಳಿದು, ಮುಂದೆ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಯೋಜಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದಿಂದ ಸಹಾಯಧನ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಆ ನೂರು ಜನ ರೈತರನ್ನು ಹೆಸರನ್ನು ಸಹಕಾರ ಸಂಘದಲ್ಲಿ ನೋಂದಾಯಿಸಿ ಸಹಕಾರ ಇಲಾಖೆಯಿಂದ ಸಾಲಸೌಲಭ್ಯ ಸಿಗುವ ವ್ಯವಸ್ಥೆ ಮಾಡಬೇಕು. ಆ ಗ್ರಾಮಕ್ಕೆ ಅವಶ್ಯವಿರುವ ಕೃಷಿ ಯಂತ್ರೋಪಕರಣಗಳನ್ನು ಕೃಷಿಯಂತ್ರ ಧಾರೆಯಂತೆ ಬಳಸಿಕೊಂಡು ಉಳಿದ ಹಣವನ್ನು ಸಾಲದ ರೂಪದಲ್ಲಿ ಸಹಕಾರ ಇಲಾಖೆಯಿಂದ ನೀಡುವ ಕುರಿತು ತಿಳಿಸಿದರು. ಇಲಾಖೆಯ ಯೋಜನೆಗಳಲ್ಲಿ ಈ ರೈತರಿಗೆ ಸಿಗುವ ಸವಲತ್ತುಗಳಬ್ಬಯ ಕಲ್ಪಿಸಿಕೊಡಲು ತಿಳಿಸಲಾಯಿತು.

ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಭೂಮಿ ಹೊಂದಿರುವ ರೈತರ ಪ್ರಗತಿಗೆ ಒತ್ತು ಕೊಡಬೇಕಿದೆ. ಈ ನಿಟ್ಟಿನಲ್ಲಿ ಎಕರೆವಾರು ಅವರ ಆದಾಯ ಹೆಚ್ಚಿ, ಜಿಲ್ಲೆಯ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಈ ಯೋಜನೆ ಆ ರೈತರಿಗೆ ಸಹಾಯವಾಗಬೇಕು ಎಂದು ತಿಳಿಸಿದರು.

ಪ್ರಥಮ ಬಾರಿಗೆ ಬೀದರ ಜಿಲ್ಲೆಯ ಮಿರ್ಜಾಪುರ (ಎಂ) ಗ್ರಾಮದಲ್ಲಿ ಈಗಾಗಲೇ ಕೃಷಿ ಹೊಂಡಗಳನ್ನು ಸ್ಥಾಪಿಸಲಾಗಿದೆ. ಸರ್ವೇ ನಂಬರ್‌ ಪ್ರಕಾರ ಮಣ್ಣು ಪರೀಕ್ಷೆ ಹಾಗೂ ಪ್ರಾತ್ಯಕ್ಷಿಕೆಗಳನ್ನು ನಡೆಸಿದ್ದೇವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಕೃಷಿ ಅಧಿಕಾರಿ ಸಿ.ವಿದ್ಯಾನಂದ, ಕೆ.ಎಂ.ಅನ್ಸಾರಿ, ತೋಟಗಾರಿಕಾ ಇಲಾಖೆಯ ಮಲ್ಲಿಕಾರ್ಜುನ ಬಾವುಗೆ, ಪಶುಪಾಲನಾ ಇಲಾಖೆಯ ಓಂಕಾರ ಪಾಟೀಲ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next