Advertisement

ಶೋಷಿತರ ಪರ ಹೋರಾಡುವ ನನ್ನ ಬೆನ್ನಿಗೆ ನಿಲ್ಲಿ: ಸಿದ್ದರಾಮಯ್ಯ

01:10 PM Nov 04, 2019 | Naveen |

ಬೀದರ: ಶೋಷಿತರು ಸಂಘಟಿತರಾಗಿ ದೊಡ್ಡ ಧ್ವನಿಯಾದಾಗ ಮಾತ್ರ ಸಂವಿಧಾನಿಕ ಹಕ್ಕು ಪಡೆಯಲು ಸಾಧ್ಯ. ಒಗ್ಗಟ್ಟು, ಹೋರಾಟ ಇಲ್ಲದಿದ್ದರೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯದಿಂದ ವಂಚಿತರಾಗಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಗಣೇಶ ಮೈದಾನದಲ್ಲಿ ರವಿವಾರ ಶೋಷಿತ ವರ್ಗಗಳ (ಅಹಿಂದ) ಒಕ್ಕೂಟ ಆಯೋಜಿಸಿದ್ದ ಶೋಷಿತರ ಬೃಹತ್‌ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಉದ್ದೇಶಗಳನ್ನು ಈಡೇರಿಸುವವರ ಜತೆಗೆ ಶೋಷಿತರು ನಿಲ್ಲುವುದು ಅವರ ಆದ್ಯ ಕರ್ತವ್ಯ. ಹಾಗಾಗಿ ಶೋಷಿತ ವರ್ಗದವರು ಮೊದಲು ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದರು.

ದೇಶದಲ್ಲಿ ಜಾತಿ ವ್ಯವಸ್ಥೆ, ಅಸಮಾನತೆ ಇಂದಿಗೂ ಮುಂದುವರೆದಿದೆ. ಸಮಾಜ ಬದಲಾವಣೆಗಾಗಿ ದಾರ್ಶನಿಕರು ಸಾಕಷ್ಟು ಪ್ರಯತ್ನ ಮಾಡಿದರೂ ಬಾವಿಯಲ್ಲಿ ಕಸ ತುಂಬಿದ ನೀರಿನಂತಾಗಿದೆ. ಚಲನರಹಿತ, ಜಡತ್ವದ ಸಮಾಜ ಇರುವರೆಗೆ ಬದಲಾವಣೆ ಅಸಾಧ್ಯ. ಬೇರು ಬಿಟ್ಟಿರುವ ಜಾತಿ ವ್ಯವಸ್ಥೆ ಸಡಿಲವಾಗಬೇಕಾದರೆ ಶೋಷಿತರು, ಹಿಂದುಳಿದವರು ಸಬಲರಾಗಬೇಕು ಮತ್ತು ಜಾತಿಗಳ ನಡುವೆ ಸಮಾನತೆ ಬರಬೇಕಿದೆ ಎಂದರು.

ಸಂವಿಧಾನ ಅವಕಾಶ ವಂಚಿತ, ಶೋಷಿತರಿಗೆ ಸಮಾನ ಅವಕಾಶ ಕಲ್ಪಿಸಿಕೊಡುತ್ತದೆ. ಹಾಗಾಗಿ ಅಂಬೇಡ್ಕರ್‌ ಹೇಳಿದಂತೆ ಜಾತಿ ವ್ಯವಸ್ಥೆ ಇರುವವರೆಗೂ ಮೀಸಲಾತಿ ಜಾರಿಯಲ್ಲಿರಬೇಕು. ಉತ್ಪಾದನಾ ಆದಾಯ ಎಲ್ಲರಿಗೂ ಹಂಚಿಕೆಯಾಗಬೇಕು.

ಇದನ್ನು ಹೇಳಿದರೆ ಸಿದ್ದರಾಮಯ್ಯ ಜಾತಿವಾದಿ ಅಂತಾರೆ. ಮೇಲ್ವರ್ಗದವರು ವಿರೋಧ ಮಾಡಲಿ, ನಿಮಗೆ (ಶೋಷಿತರು) ಧ್ವನಿಯಾಗಿ ಹೇಳುವಾಗ ನೀವಾದರೂ ಜೊತೆಯಾಗಿ ನಿಲ್ಲಿ ಎಂದು ಕೈ ಮುಗಿದು ಕೇಳಿಕೊಂಡರು.

Advertisement

ಮುಖ್ಯಮಂತ್ರಿಯಾಗಿ ಸಂವಿಧಾನದ ಆಶಯಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದೇನೆ. ಹಣಕಾಸು ಸಚಿವನಾಗಿ ಮಂಡಿಸಿರುವ 13 ಬಜೆಟ್‌ ಗಳಲ್ಲಿ ಅವಕಾಶದಿಂದ ವಂಚಿತರಾದವರಿಗೆ ನ್ಯಾಯ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ.

ಜತೆಗೆ ಇತರ ಸಮಾಜದ ಬಡವರಿಗೂ ಸಹ ನಿರ್ಲಕ್ಷ್ಯ
ಮಾಡಿಲ್ಲ. ಅನ್ನಭಾಗ್ಯದಂಥ ಹಲವು ಯೋಜನೆಗಳನ್ನು ಎಲ್ಲ ವರ್ಗದವರಿಗೂ ತಲುಪಿಸುವ ಕೆಲಸ ಮಾಡಿದ್ದೇನೆ ಎಂದರು.

ಉತ್ತರ ಪ್ರದೇಶದ ಬಿಜೆಪಿ ಮಾಜಿ ಸಂಸದೆ ಸಾವಿತ್ರಿಬಾಯಿ ಫುಲೆ ಮಾತನಾಡಿ, ದೇಶದಲ್ಲಿ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಆದಿವಾಸಿ, ಲಿಂಗಾಯತ, ಮುಸ್ಲಿಂ, ಶೋಷಿತ ವರ್ಗಗಳು ನದಿಯ ದಡದಲ್ಲಿ ಇದ್ದುಕೊಂಡು ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲದಂತಹ ದುಸ್ಥಿಯಲ್ಲಿ ಬದುಕುತ್ತಿವೆ.

ಪ್ರಜಾಪ್ರಭುತ್ವ ಇಂದು ಅಪಾಯಕ್ಕೆ ಸಿಲುಕಿದ್ದರಿಂದಲೇ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದೆ. ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗಾಗಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕೊನೆಯವರೆಗೂ ಹೋರಾಡುತ್ತೇನೆ ಎಂದರು.

ಮಾಜಿ ಸಚಿವ ಎಚ್‌.ಎಂ ರೇವಣ್ಣ, ಶಾಸಕರಾದ ಈಶ್ವರ ಖಂಡ್ರೆ, ರಾಜಶೇಖರ ಪಾಟೀಲ, ರಹೀಂ ಖಾನ್‌, ಬಿ. ನಾರಾಯಣರಾವ್‌, ಎಂಎಲ್‌ಸಿಗಳಾದ ವಿಜಯಸಿಂಗ್‌, ಚಂದ್ರಶೇಖರ ಪಾಟೀಲ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ, ಹಿಂದುಳಿದ ವರ್ಗಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಎಸ್‌ಸಿ/ಎಸ್‌ಟಿ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಹಾದೇವ ಸ್ವಾಮಿ ಮತ್ತಿತರರು ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next