Advertisement

ಖೂಬಾ ಹುಟ್ಟೂರಲ್ಲಿ ಸಂಭ್ರಮಾಚರಣೆ

10:53 AM May 25, 2019 | Naveen |

ಔರಾದ: ಅಮರವಾಡಿಯ ಭೂಮಿಪುತ್ರ ಭಗವಂತ ಖೂಬಾ ಅವರು ಬಹುಮತದೊಂದಿಗೆ ಎರಡನೇ ಬಾರಿಗೆ ಸಂಸರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹುಟ್ಟೂರಿನಲ್ಲಿ ಅದ್ಧೂರಿ ಜನರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.

Advertisement

ಭಗವಂತ ಖೂಬಾ ಅವರು ಔರಾದ ಪಟ್ಟಣದ ನಿವಾಸಿಯಾಗಿದ್ದು, ಸಂಘ ಸಂಸ್ಥೆಗಳಲ್ಲಿ ಉತ್ತಮ ಕೆಲಸ ಮಾಡಿದ್ದರಿಂದ ಪಕ್ಷ ಅವರನ್ನು ಗುರುತಿಸಿ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ವಿರುದ್ಧ ಸ್ಪರ್ಧೆ ಮಾಡುವಂತೆ ಆದೇಶ ಮಾಡಿದಾಗ, ಪಕ್ಷದ ವರಿಷ್ಠರ ಆದೇಶಕ್ಕೆ ತಲೆ ಬಾಗಿ, ಶಾಸಕ ಪ್ರಭು ಚವ್ಹಾಣ ಅವರ ಸಹಕಾರದೊಂದಿಗೆ ಗೆಲುವು ಸಾಧಿಸಿದ್ದರು. ಅದರಂತೆ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ 33 ಸಾವಿರ ಮತಗಳ‌ ಅಂತರದಿಂದ ಜಿಲ್ಲೆಯಲ್ಲಿ ದಾಖಲೆಯ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಔರಾದ ತಾಲೂಕಿನ ಮೊಮ್ಮಗನಾಗಿದ್ದಾರೆ. ಅದರಂತೆ ಸಂಸದ ಭಗವಂತ ಖೂಬಾ ಪಟ್ಟಣದ ನಿವಾಸಿಯಾಗಿದ್ದು, ತಾಲೂಕಿನ ಜನರು ಮೊಮ್ಮಗನಿಗಿಂತ ಮಗನ ಮೇಲೆ ಹೆಚ್ಚು ಪ್ರೀತಿ ತೋರಿಸಿದ್ದಾರೆ. ಹೀಗಾಗಿಯೇ ತಾಲೂಕಿನಲ್ಲಿ 33 ಸಾವಿರ ಮತಗಳ ಲೀಡ್‌ ಸಿಕ್ಕಿದೆ.

ಎರಡು ತಾಲೂಕಿನಲ್ಲಿ ಸಂಭ್ರಮ:ಔರಾದ ಹಾಗೂ ಕಮಲನಗರ ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಭು ಚವ್ಹಾಣ, ಖೂಬಾ ಮತ್ತು ಪ್ರಧಾನಿ ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು. ಪಟ್ಟಣದ ಖೂಬಾ ಬಡಾವಣೆಯಲ್ಲಿ ಕುಟುಂಬ ಸದಸ್ಯರು, ಗೃಹಿಣಿಯರು ಮನೆ ಮಗನ ಗೆಲುವಿಗೆ ಕುಣಿದು ಕುಪ್ಪಳಿಸಿದರು.

ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಮೂರು ಗುಂಪಾಗಿ ಕೆಲಸ ಮಾಡಿರುವಾಗ ಬಿಜೆಪಿ ಶಾಸಕ ಪ್ರಭು ಚವ್ಹಾಣ ಏಕಾಂಗಿಯಾಗಿ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಠಿಣ ಶ್ರಮ ಪಟ್ಟಿರುವುದರಿಂದ ಅಧಿಕ ಮತಗಳು ಬಂದಿವೆ. ಖೂಬಾ ಸಹೋದರರು ಕೂಡ ಈ ಬಾರಿಯ ಚುನಾವಣೆಯಲ್ಲಿ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಎಡನೇ ಅವಧಿಗೆ ಆಯ್ಕೆಯಾದ ಸಂಸದರು, ಪಟ್ಟಣದಲ್ಲಿ ಜನರಿಗೆ ಈ ಹಿಂದೆ ನೀಡಿದ ಭರವಸೆಗಳನ್ನು ಎರಡನೇ ಅವಧಿಯಲ್ಲಿ ಈಡೇರಿಸುತ್ತಾರೆ ಎನ್ನುವುದು ಜನರ ನಿರೀಕ್ಷೆಯಾಗಿದೆ.

Advertisement

ಹಿಂದೆ ನೀಡಿದ ಭರವಸೆಗಳು: ಉದ್ಭವಲಿಂಗ ಅಮರೇಶ್ವರ ಮಹಾದ್ವಾರ ನಿರ್ಮಾಣ, ಬೀದರ-ನಾಂದೇಡ ರೈಲ್ವೆ ಮಾರ್ಗ, ಬೀದರ-ನಾಂದೇಡ್‌ ಅಂತಾರಾಜ್ಯ ಹೆದಾರಿ ನಿರ್ಮಾಣ, ದೈನಿಕರ ತರಬೇತಿ ಕೇಂದ್ರ ಸೇರಿದಂತೆ ಪಟ್ಟಣದ ಜನರಿಗೆ ಶಾಶ್ವತ ಕೆಲಸ ಸಿಗುವ ಉದ್ದೇಶದಿಂದ ಕಂಪನಿ ನಿರ್ಮಾಣ ಮಾಡುವ ಕೆಲಸಗಳನ್ನು ಸಂಸದರು ಈ ಅವಧಿಯಲ್ಲಿ ಮಾಡುತ್ತಾರೆ ಎನ್ನುವುದು ಜನರ ಆಶಯವಾಗಿದೆ.

ತಾಲೂಕಿನ ಜನರಿಗೆ ಈ ಹಿಂದೆ ನೀಡಿದ ಎಲ್ಲ ಭರವಸೆಗಳನ್ನು ಎರಡನೇ ಅವಧಿಯಲ್ಲಿ ಈಡೇರಿಸುತ್ತೇನೆ. ತಾಲೂಕಿನ ಹಾಗೂ ಬೀದರ ಜಿಲ್ಲೆಯ ಜನರು ತೋರಿದ ಪ್ರೀತಿ, ವಿಶ್ವಾಸ ಜೀವನ ಪೂರ್ತಿ ಮರೆಯಲು ಸಾಧ್ಯವಿಲ್ಲ.
ಭಗವಂತ ಖೂಬಾ, ಸಂಸದರು

ಚುನಾವಣೆಯಲ್ಲಿ ತಾಲೂಕಿನ ಜನರು ಹಾಗೂ ಬಿಜೆಪಿ ಕಾರ್ಯಕರ್ತರು ನಿರಂತರ ದುಡಿದಿರುವ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಇಷ್ಟೊಂದು ದಾಖಲೆಯ ಮತಗಳ ಅಂತರದಿಂದ ಗೆಲುವು ಸಾಸಿದ್ದಾರೆ. ಮತದಾರರ ನಂಬಿಕೆಗೆ ನಾವು ನಮ್ಮ ಪಕ್ಷ ಋಣಿಯಾಗಿದ್ದೇವೆ.
ಪ್ರಭು ಚವ್ಹಾಣ, ಶಾಸಕ

ರವೀಂದ್ರ ಮುಕ್ತೇದಾರ

Advertisement

Udayavani is now on Telegram. Click here to join our channel and stay updated with the latest news.

Next