Advertisement

ಬಿಜೆಪಿಯಿಂದ ಭಯದ ವಾತಾವರಣ

01:00 PM Apr 11, 2019 | Team Udayavani |

ಬಸವಕಲ್ಯಾಣ: ಕಾಂಗ್ರೆಸ್‌-ಜೆಡಿಎಸ್‌ ಪಕ್ಷ ಸಂವಿಧಾನ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಕೆಲಸ ಮಾಡುತ್ತಿದ್ದರೆ, ಬಿಜೆಪಿ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದೆ. ಹೀಗಾಗಿ ಮತದಾರರು ಆಡಳಿತದಿಂದ ಬಿಜೆಪಿ ದೂರವಿಡಿ ಎಂದು ಬೀದರ ಲೋಕಸಭೆ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ್‌ ಖಂಡ್ರೆ ಹೇಳಿದರು.

Advertisement

ನಗರದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, 2014ರ ಪೂರ್ವದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಆದರೆ ಉದ್ಯೋಗ ಸೃಷ್ಟಿಯ ಬದಲು ನಿರುದ್ಯೋಗ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ತಾವು ಪೌರಾಡಳಿತ ಸಚಿವರಾಗಿದ್ದ ಸಂದರ್ಭದಲ್ಲಿ ನಗರಸಭೆಗಳಿಗೆ 350 ಕೋಟಿ ಮತ್ತು ಬಸವಕಲ್ಯಾಣಕ್ಕೆ 50 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಖಂಡ್ರೆ ತಿಳಿಸಿದರು.

ಎಚ್ಡಿಡಿ-ರಾಹುಲ್‌ ಕೈ ಬಲಪಡಿಸಿ: ರೈತರ ಬೆಳೆಗೆ ವೈಜ್ಞಾನಿಕ ಬೆಂಬಲ ಸಿಗದಂತೆ ಮತ್ತು ಕಿಸಾನ್‌ ಬೀಮಾ ಯೋಜನೆ ಉದ್ಯಮಿಗಳಿಗೆ ಉಪಯೋಗಕ್ಕೆ ಬರುವಂತೆ ಮಾಡಿದ್ದರು. ಕಾಂಗ್ರೆಸ್‌ ಪಕ್ಷಕ್ಕೆ ಮರಾಠ ಸಮಾಜ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.50ಕ್ಕೂ ಹೆಚ್ಚು ಹಾಗೂ ಪ್ರತಿಯೊಂದು ಸಮುದಾಯದ ಮತಗಳು ನನ್ನ ಗೆಲುವಿಗೆ ಕಾರಣವಾಗಿತ್ತು ಎಂದು ನೆನೆದ ಅವರು, ಕಾಂಗ್ರೆಸ್‌ಗೆ ಬೆಂಬಲಿಸುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಮತ್ತು ರಾಹುಲ್‌ ಗಾಂಧಿ ಅವರ ಕೈ ಬಲ ಪಡಿಸಬೇಕೆಂದು ಮನವಿ ಮಾಡಿದರು.

ಯೋಚಿಸಿ ಮತ ನೀಡಿ: ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ ಬಿ.ಪಾಟೀಲ್‌ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಯಾರಿಗೆ ಮತದಾನ ಮಾಡಬೇಕು ಎನ್ನುವುದನ್ನು ಮತದಾರರು ನಿರ್ಧಾರ ಮಾಡಬೇಕಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ
ಎಚ್‌.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿರುವುದು ಮತ್ತು ಮಾಜಿ ಸಿಎಂ ದಿ.ಧರಂಸಿಂಗ್‌ ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ 371 (ಜೆ) ಕಾಯ್ದೆ ಜಾರಿಗೆ ಬಂದಿರುವುದು ಮರೆಯುವಂತಿಲ್ಲ ಎಂದರು.
371(ಜೆ) ಕಾಯ್ದೆಯಿಂದ ನಮ್ಮ ಭಾಗದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಹುದ್ದೆ ಪಡೆಯಲು ಸಾಧ್ಯವಾಗಿದೆ. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಬೆಂಬಲಿಸುವಂತೆ ಮನವಿ ಮಾಡಿದರು.

Advertisement

ಮರಾಠರಿಗೆ ಮೋಸ: ಮಾಜಿ ಶಾಸಕ ಮಾರುತಿರಾವ್‌ ಮೂಳೆ ಮಾತನಾಡಿ, ಬಿಜೆಪಿ ಪಕ್ಷ ಮರಾಠ ಸಮಾಜಕ್ಕೆ ಮೋಸ ಮಾಡುತ್ತ ಬಂದಿದೆ. ನನಗೆ ಎರಡು ಬಾರಿ ಟಿಕೆಟ್‌ ಕೊಡುವ ಭರವಸೆ ನೀಡಿ ಕೈಕೊಟ್ಟಿದೆ. ಕಾಂಗ್ರೆಸ್‌ ಸಾಕಷ್ಟು ಬಾರಿ ನನಗೆ ಅವಕಾಶ ಕೊಟ್ಟಿತ್ತು. ಆದರೆ ಜನ ನನ್ನ ಕೈ ಹಿಡಿಯದಿರುವುದು ದುರಾದೃಷ್ಟಕರ ಸಂಗತಿ ಎಂದು ವಿಷಾದಿಸಿದರು.

ಕೇಂದ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಮರಾಠ ಸಮಾಜಕ್ಕೆ ಒಂದು ಸಚಿವ ಸ್ಥಾನ ನೀಡಿಲಿಲ್ಲ.
ಆದರೆ ಮನಮೋಹನ ಸಿಂಗ್‌ ಮತ್ತು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮರಾಠ ಸಮಾಜಕ್ಕೆ ನ್ಯಾಯ ಸಿಗುವಂತ ಕೆಲಸ ಮಾಡಿರುವುದನ್ನು ಸಮಾಜ ಬಾಂಧವರು ಮರೆಯಬಾರದು ಎಂದು ಹೇಳಿದರು.

ಶಾಸಕ ಬಿ. ನಾರಾಯಣರಾವ್‌, ಮಾಜಿ ಶಾಸಕ ಎಂ.ಡಿ. ಲಕ್ಷ್ಮಣ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಸೋಲಪೂರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಜಿಪಂ ಸದಸ್ಯ ಆನಂದ ಪಾಟೀಲ್‌, ಲಾತೂರ ಜೆಡಿಎಸ್‌ ಅಧ್ಯಕ್ಷ ವಿಜಯ ಪಾಟೀಲ್‌, ಆನಂದ ದೇವಪ್ಪಾ, ಸಿದ್ರಾಮ ಗುದಗೆ, ಕೇಶಪ್ಪ
ಬಿರಾದಾರ, ಸುನೀಲ್‌ ಪಾಟೀಲ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಶಬ್ಬೀರ್‌ ಪಾಶಾ ಸೇರಿದಂತೆ ಇತರರು ಇದ್ದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಗೆಲ್ಲಿಸಿದರೆ ಮಾತ್ರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಉಳಿಗಾಲ ಇದೆ. ಇಲ್ಲದಿದ್ದರೆ ನಾವು ಉಳಿಯುವುದಿಲ್ಲ. ಬಡ ಕುಟುಂಬದಲ್ಲಿ ಜನಿಸಿದ ನಾನು ಈ ಮಟ್ಟಕ್ಕೆ ಬೆಳೆಯಲು ಮಾಜಿ ಪ್ರಧಾನಿ ದೇವೇಗೌಡರೇ ಕಾರಣ. ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾನಿ, ಮುರುಳಿ ಮನೋಹರ ಜೋಷಿ ಅಂಥವರಿಗೆ ಬಿಜೆಪಿಯಲ್ಲಿ ಮರ್ಯಾದೆ ಇಲ್ಲ. ಇನ್ನೂ ಅಭಿವೃದ್ಧಿ ಕೆಲಸ ಮಾಡುವುದು ದೂರದ
ಮಾತು.
.ಬಿ.ನಾರಾಯಣರಾವ್‌, ಶಾಸಕ

ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆದಿವೆಯೇ ಹೊರತು ಬಿಜೆಪಿ ಅ ಧಿಕಾರದಲ್ಲಲ್ಲ. ಕಾಂಗ್ರೆಸ್‌ ಚಾಲನೆ ನೀಡಿದ ಪಿಟ್‌ಲೆçನ್‌ ಕಾಮಗಾರಿ, ವಿಮಾನ ಹಾರಾಟ, ಎಫ್‌ಎಂ ಕಾಮಗಾರಿ ಪೂರ್ಣಗೊಳಿಸಲು ನಿಮ್ಮ ಕೈಯಿಂದ ಆಗಲಿಲ್ಲ. ಸಂಸದರಾಗಲು ಯೋಗ್ಯತೆ ನಿಮಗಿದೆಯೇ ಎನ್ನುವುದನ್ನು ಖೂಬಾ ಆತ್ಮಾವಲೋಕನ ಮಾಡಿಕೊಳ್ಳಬೇಕು.
.ಈಶ್ವರ್‌ ಖಂಡ್ರೆ, ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next