ಬೀದರ: ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ನಾಮಪತ್ರ ಸಲ್ಲಿಕೆಗೆ ಮೇ 16 ಕೊನೆ ದಿನ ಆದರೂ ಇಂದಿಗೂ ಯಾವ ಪಕ್ಷದವರು ವಾರ್ಡ್‌ವಾರು ಅಭ್ಯರ್ಥಿಗಳ ಟಿಕೆಟ್ ಘೋಷಣೆ ಮಾಡದಿರುವುದು ಟಿಕೆಟ್ ಆಕಾಂಕ್ಷಿಗಳ ಆತಂಕಕ್ಕೆ ಕಾರಣವಾಗಿದ್ದು, ಆಕಾಂಕ್ಷಿಗಳು ಬೆಂಬಲಿಗರೊಂದಿಗೆ ಪ್ರತಿನಿತ್ಯ ಆಯಾ ಕ್ಷೇತ್ರದ ಶಾಸಕರ ಮನೆಬಾಗಿಲಿಗೆ ದುಂಬಾಲು ಬಿದ್ದಿದ್ದಾರೆ.
ಬೀದರ್ ನಗರದ ಸಭೆ ಹೊರೆತುಪಡಿಸಿ ಜಿಲ್ಲೆಯ ಬಸವಕಲ್ಯಾಣ ನಗರಸಭೆ 31 ವಾರ್ಡ್, ಹುಮನಾಬಾದ ಪುರಸಭೆ 27 ವಾರ್ಡ್, ಚಿಟಗುಪ್ಪ ಪುರಸಭೆ 23 ವಾರ್ಡ್, ಭಾಲ್ಕಿ ಪುರಸಭೆ 27 ವಾರ್ಡ್, ಔರಾದ (ಬಿ) ಪಪಂ 20 ವಾರ್ಡ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಎಲ್ಲ ನಗರಗಳಲ್ಲಿ ಆಕಾಂಕ್ಷಿಗಳು ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆಸುತ್ತಿದ್ದಾರೆ.
ಹೆಚ್ಚಾಗಿ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದು, ಗೆಲ್ಲುವ ಕುದುರೆಗೆ ಟಿಕೆಟ್ ನೀಡಬೇಕು ಎಂಬ ಲೆಕ್ಕಾಚಾರಲ್ಲಿ ಕಾಂಗ್ರೆಸ್ ಇದೆ. ವಾರ್ಡ್‌ಗಳ ಜನರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡಿದರೆ ಸೂಕ್ತ ಎಂಬ ಲೆಕ್ಕಾಚಾರ ಹಿನ್ನೆಲೆಯಲ್ಲಿ ಈ ವರೆಗೂ ಟಿಕೆಟ್ ನೀಡುವಲ್ಲಿ ಎಲ್ಲ ಪಕ್ಷಗಳು ವಿಳಂಬ ಮಾಡುತ್ತಿದ್ದಾರೆ. ಹೆಚ್ಚಿನ ಆಕಾಂಕ್ಷಿಗಳು ಭಾರಿ ಪೈಪೋಟಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೂಡ ವಿಳಂಬ ನೀತಿ ಅನುಸರಿಸಿ ಕೊನೆ ಕ್ಷಣದಲ್ಲಿ ಬಿ ಫಾರ್ಮ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ದಾಖಲಾತಿ ತಯಾರಿ: ಚುನಾವಣೆ ದಿನಾಂಕ ಘೋಷಣೆಯಾದ ನಂತರ ಒಂದು ವಾರ್ಡ್‌ನಿಂದ ಕನಿಷ್ಠ 4 ರಿಂದ 8 ಅಭ್ಯರ್ಥಿಗಳು ಟಿಕೆಟ್ಗಾಗಿ ಬೇಡಿಕೆ ಇಡುತ್ತಿದ್ದು, ಚುನಾವಣೆಗೆ ಸ್ಪರ್ಧಿ ಸಲೇಬೇಕೆಂದು ಆಕಾಂಕ್ಷಿಗಳು ಈಗಾಗಲೇ ಎಲ್ಲ ದಾಖಲಾತಿ ತಯಾರಿಸಿಕೊಳ್ಳುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸೂಚಕರ ಹೆಸರು, ಪುರಸಭೆ, ನಗರಸಭೆಗಳ ಕರ ಬಾಕಿ, ನೀರಿನ ಕರ ಒಳಗೊಂಡಂತೆ ಇತರ ಕರ ಭರಿಸಿ, ಯಾವುದೇ ಬಾಕಿ ಇಲ್ಲ ಎಂಬ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ಕೆಲವರು ಪಕ್ಷಗಳ ಟಿಕೆಟ್ ಸಿಗದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂಬ ನಿಟ್ಟಿನಲ್ಲಿ ತಯಾರಿಸಿ ನಡೆಸುತ್ತಿದ್ದಾರೆ.
ಹೊಸ ಮುಖಗಳು: ವಾರ್ಡ್ ಮತದಾರರ ಬದಲಾವಣೆ, ಹೊಸ ವಾರ್ಡ್ ರಚನೆ ಜತೆಗೆ ಹೊಸ ಮೀಸಲಾತಿ ಬಂದ ಹಿನ್ನೆಲೆಯಲ್ಲಿ ಈ ಬಾರಿ ಚುನಾವಣೆಯಲ್ಲಿ ಹೆಚ್ಚಿನ ಆಕಾಂಕ್ಷಿಗಳು ಮುಂದೆ ಬರುತ್ತಿದ್ದಾರೆ. ಹೊಸ ಮುಖಗಳನ್ನು ಚುನಾವಣೆ ಕಣಕ್ಕಿಳಿಸಬೇಕೆಂಬ ಲೆಕ್ಕಾಚಾರ ಕೂಡ ಎಲ್ಲ ಪಕ್ಷಗಳು ನಡೆಸಿವೆ. ಟಿಕೆಟ್ ವಿಷಯಕ್ಕೆ ಸಂಬಂಧಿಸಿದಂತೆ ಹುಮನಾಬಾದನಲ್ಲಿ ಹೊಡೆದಾಟ ನಡೆದಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಚುನಾವಣೆ ಏನೆಲ್ಲ ನಡೆಯುತ್ತೆ ಕಾದುನೋಡಬೇಕು.
ಕಾಂಗ್ರೆಸ್-ಜೆಡಿಎಸ್ ಪ್ರತ್ಯೇಕ ಸ್ಪರ್ಧೆ!
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದು, ಇದೀಗ ಎರಡು ಪಕ್ಷಗಳು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಪ್ರತ್ಯೇಕ ಸ್ಪರ್ಧೆಗೆ ಮುಂದಾಗಿದ್ದಾರೆ. ಎರಡು ಪಕ್ಷ ಕಾರ್ಯಕರ್ತರು ವೈರಿಗಳಂತೆ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಹೇಗೆ ಪ್ರಚಾರ ನಡೆಸುತ್ತಾರೆ ಎಂದು ಜನ ಕುತೂಹಲದಿಂದ ಕಾಯುತ್ತಿದ್ದಾರೆ.
ದುರ್ಯೋಧನ ಹೂಗಾರ