Advertisement

ಬೀದರ ಭಾಷೆಯಲ್ಲಿದೆ ದೇಶಿ ಸೊಗಡು

01:21 PM Dec 29, 2019 | Naveen |

ಬೀದರ: ಗಡಿ ಭಾಗದ ಕನ್ನಡ ಭಾಷೆಗೆ ತುಂಬಾ ವೈವಿಧ್ಯತೆಯಿದೆ. ಅದರಲ್ಲಿಯೂ ಬೀದರ ಭಾಷೆಗೆ ದೇಶಿಯತೆಯ ಸೊಗಡು ದಟ್ಟವಾಗಿದೆ. ಆ ಮೂಲಕ ನಿಜವಾದ ಕನ್ನಡ ನೆಲದ ಭಾಷೆಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ-ಸಂಸ್ಥೆಗಳ ಪ್ರತಿನಿಧಿ ಸುಬ್ರಹ್ಮಣ್ಯ ಪ್ರಭು ಹೇಳಿದರು.

Advertisement

ನಗರದ ಕೃಷ್ಣಾ ರೆಜೆನ್ಸಿ ಸಭಾಂಗಣದಲ್ಲಿ ಶನಿವಾರ ಕರುನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಗಡಿನಾಡು ಕನ್ನಡಿಗರ ಸ್ಥಿತಿ-ಗತಿ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಭಾಷೆಯ ಬೆಳವಣಿಗೆಗೆ ಕರ್ನಾಟಕದ ದಕ್ಷಿಣ ಗಡಿಯಲ್ಲಿ ಹೆಚ್ಚು ಸಮಸ್ಯೆಯಿಲ್ಲ. ಉತ್ತರ, ಮಧ್ಯ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮರಾಠಿ, ಉರ್ದು, ತೆಲುಗು ಹಿಂದಿ, ಮೋಡಿ, ತುಳು, ಕೊಂಕಣಿ, ಮುಂತಾದ ಭಾಷೆಗಳ ಪ್ರಭಾವದ ಮಧ್ಯೆಯೂ ಕನ್ನಡ ಭಾಷೆಯು ನಿರಂತರವಾಗಿ ಉಳಿದು, ಬೆಳೆದುಕೊಂಡು ಬರುತ್ತಿದೆ ಎಂದರು.

ಸಾಹಿತಿ ಪ್ರಕಾಶ ದೇಶಮುಖ “ಗಡಿನಾಡು ಕನ್ನಡಿಗರ ಔದ್ಯೋಗಿಕ ಸ್ಥಿತಿ ಗತಿ’ ಕುರಿತು ಮಾತನಾಡಿ, ಗಡಿ ಭಾಗದ ಜನರಿಗೆ ಬದುಕಿನ ಆಧಾರವೆಂದರೆ ಮೂಲ ಕಸುಬಾಗಿದೆ. ಕೈಗಾರಿಕೆಗಳ ಬೆಳವಣಿಗೆಯಿಂದ ಹಿಂದಿನ ಕಾಲದಿಂದಲೂ ಬೆಳೆದು ಬಂದಿರುವ ಗುಡಿ ಕೈಗಾರಿಕೆಗಳು ಅಳಿವಿನ ಅಂಚಿಗೆ ಬಂದಿವೆ. ಅವುಗಳಿಗೆ ಪುನಃಶ್ಚೇತನ ನೀಡಬೇಕಾದ ಅವಶ್ಯಕತೆಯಿದೆ ಎಂದು ಸಲಹೆ ನೀಡಿದರು.

ಸಾಹಿತಿ ಸುನೀತಾ ಕೂಡ್ಲಿಕರ “ಗಡಿ ನಾಡು ಕನ್ನಡಿಗರ ಸಾಹಿತ್ಯಿಕ-ಸಾಂಸ್ಕೃತಿಕ ಸ್ಥಿತಿಗತಿ’ ಕುರಿತು ಮಾತನಾಡಿ, ಗಡಿ ಭಾಗಗಳು ಸಾಂಸ್ಕೃತಿಕವಾಗಿ ಅಷ್ಟೊಂದು ಪ್ರಗತಿ ಹೊಂದದೆ ಇರಲು ಕಾರಣವೆಂದರೆ ಅವಕಾಶದ ಕೊರತೆಯಾಗಿದೆ. ಸಾಕಷ್ಟು ಸಾಹಿತಿಗಳು, ಕಲಾವಿದರು ಇದ್ದಾಗೂ ಕೂಡ ಅವರನ್ನು ಸರ್ಕಾರ ಹೆಚ್ಚು ಪ್ರಮಾಣದಲ್ಲಿ ಗುರುತಿಸದೇ ನಿರ್ಲಕ್ಷ್ಯಕ್ಕೊಳಗಾಗಿದ್ದು, ನೋವಿನ ಸಂಗತಿಯಾಗಿದೆ. ರಾಜಧಾನಿಯಿಂದ ತುಂಬಾ ದೂರ ಇರುವ ಕಾರಣಕ್ಕೂ ಹೆಚ್ಚು ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಅಕಾಡೆಮಿ, ಪ್ರಾ ಧಿಕಾರಗಳಿಗೆ, ಈ ಭಾಗದ ಸಾಹಿತಿ, ಕಲಾವಿದರನ್ನು ನೇಮಿಸುವ ಮೂಲಕ ಗಡಿಭಾಗದಲ್ಲಿ ಕನ್ನಡದ ಕಲರವ ಸದಾ ಕಾಲ ಪಸರಿಸುವಂತೆ ಸಹಕರಿಸಬೇಕಾಗಿದೆ ಎಂದು ಹೇಳಿದರು.

ಭಾರತೀಯ ದಂತ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ| ಡಿ.ಎ. ಪಾಟೀಲ ಮಾತನಾಡಿ, ಕನ್ನಡ ಭಾಷೆಯು ಅನ್ನ ಕೊಡುವ ಭಾಷೆಯಾಗಿ ಪರಿವರ್ತನೆಯಾಗಬೇಕಾಗದದ್ದು ತೀರಾ ಅವಶ್ಯವಾಗಿದೆ. ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಬೇಕಾದರೆ ಇಂಗ್ಲಿಷ್‌ ಅನಿವಾರ್ಯ ಎಂಬ ತಪ್ಪು ಕಲ್ಪನೆಯಿಂದಾಗಿ ಕನ್ನಡದ ನಿರ್ಲಕ್ಷ್ಯವಾಗುತ್ತಿದೆ. ಇಂಗ್ಲಿಷ್‌ ಒಂದು ಭಾಷೆಯಾಗಿ ಮಾತೃ ಭಾಷೆಯ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಅನೇಕರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.

Advertisement

ಕಸಾಪ ತಾಲೂಕಾಧ್ಯಕ್ಷ ಎಂ.ಎಸ್‌. ಮನೋಹರ ಮಾತನಾಡಿ, ಬಂಡವಾಳಶಾಹಿಗಳ ಒತ್ತಡದಿದಾಗಿ ಆಳುವ ಸರ್ಕಾರ ನಮ್ಮ ರಾಜ್ಯದಲ್ಲಿ ಇಂಗ್ಲಿಷ್‌ ಮಾಧ್ಯಮಗಳ ಶಾಲೆಗಳನ್ನು ತೆರೆಯಲು ಅನುಮತಿ ನೀಡುತ್ತಿರುವುದು ಖಂಡನೀಯ. ಕನ್ನಡ ಮಾಧ್ಯಮ ಶಾಲೆಗಳು ಉಳಿದಾಗ ಮಾತ್ರ ನಮ್ಮಕನ್ನಡ ಭಾಷೆ, ಸಂಸ್ಕೃತಿ ಉಳಿಯಲು, ಬೆಳೆಯಲು ಸಾಧ್ಯ ಎಂದು ಹೇಳಿದರು.

ವೇದಿಕೆಯ ಗೌರವಾಧ್ಯಕ್ಷ ಡಾ| ಸಂಜೀವಕುಮಾರ ಅತಿವಾಳೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಈ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯ ಯೋಜನೆ ರೂಪಿಸಬೇಕು, ಜನರ ಸಮಸ್ಯೆಗಳಿಗೆ ತಕ್ಷಣ ಪರಿಹಾರಗಳನ್ನು ನೀಡಬೇಕು. ಆಗ ಮಾತ್ರ ಕನ್ನಡ ಭಾಷೆ, ಕಲೆ, ಸಂಸ್ಕೃತಿ ಉಳಿಸಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ರವೀಂದ್ರ ಬೋರಂಚೆ, ಬಸವರಾಜ ಹಳ್ಳೆ ಮಾತನಾಡಿದರು. ಅಧ್ಯಕ್ಷ ಡಾ| ಶಾಮರಾವ್‌ ನೆಲವಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕರಾದ ಶಂಭುಲಿಂಗ ವಾಲ್ಡೊಡ್ಡಿ, ವೈಜನಾಥ ಬಾಬಶೆಟ್ಟೆ, ಆಶಾರಾಣಿ ನೆಲವಾಡೆಕನ್ನಡ ಗೀತೆಗಳನ್ನು ಹಾಡಿದರು. ಡಾ| ರವೀಂದ್ರ ಲಂಜವಾಡಕರ್‌ ಸ್ವಾಗತಿಸಿದರು. ಸೃಜನ್ಯ ಅತಿವಾಳೆ ನಿರೂಪಿಸಿ ಅಜಿತ ಎನ್‌.ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next