ಬೀದರ: ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದ ಅಂಗವಾಗಿ ಸೆ.25ರಂದು ಜಿಲ್ಲೆಯಾದ್ಯಂತ 1ರಿಂದ 19 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಜಂತು ಹುಳು ನಿವಾರಣೆಯ ಅಲ್ಬೆಂಡಾಜೋಲ್ ಮಾತ್ರೆಗಳನ್ನು ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ಫೆಬ್ರುವರಿ ತಿಂಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲೆಯ 6,30,000 ಮಕ್ಕಳಿಗೆ ಮಾತ್ರೆ ವಿತರಿಸಲಾಗಿತ್ತು. ಈ ಬಾರಿ 6,69,123 ಮಕ್ಕಳಿಗೆ ಮಾತ್ರೆಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ರವೀಂದ್ರ ಸಿರಸಗೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಮಾಹಿತಿ ನೀಡಿದರು. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆ, ಪದವಿ ಪೂರ್ವ ಕಾಲೇಜುಗಳು, ಡಿಪ್ಲೋಮಾ, ಫಾರ್ಮಸಿ,
ಪ್ಯಾರಾಮೇಡಿಕಲ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷ ವಯೋಮಿತಿಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಲ್ಬೆಂಡಾಜೋಲ್ ಮಾತ್ರೆಗಳನ್ನು ವಿತರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆ.25ರಂದು ಮಾತ್ರೆಗಳನ್ನು ಸೇವಿಸದೇ ಇದ್ದಲ್ಲಿ ಸೆ.30ರಂದು ಮಾತ್ರೆಗಳನ್ನು ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಜಂತು ಹುಳು ಸೋಂಕಿಗೆ ಒಳಪಡುವ ಮಕ್ಕಳಲ್ಲಿ ರಕ್ತಹೀನತೆ, ಪೌಷ್ಟಿಕಾಂಶದ ಕೊರತೆ, ಹಸಿವೆಯಾಗದಿರುವುದು, ನಿಶಕ್ತಿ ಮತ್ತು ಆತಂಕ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ತೂಕ ಕಡಿಮೆಯಾಗುವುದು ಇಂತಹ ನಾನಾ ಲಕ್ಷಣಗಳು ಕಾಣಿಸುತ್ತವೆ. ಅಲ್ಲದೇ ಮಗುವಿನ ಬೆಳವಣಿಗೆ ಕುಂಠಿತವಾಗುವ ಜೊತೆಗೆ ಬುದ್ಧಿಶಕ್ತಿ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಮಾತ್ರೆಗಳನ್ನು ಸೇವಿಸುವುದರಿಂದ ರಕ್ತಹೀನತೆ ನಿಯಂತ್ರಣ, ಪೌಷ್ಟಿಕಾಂಶ ಹೀರಿಕೆ ನಿಯಂತ್ರಣ, ಏಕಾಗ್ರತೆ, ಕಲಿಕಾ ಸಾಮರ್ಥ್ಯ ವೃದ್ಧಿಸುವುದಲ್ಲದೆ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಹಾಜರಾತಿ ಸುಧಾರಣೆಗೆ ನೆರವಾಗಲಿದೆ. ಹಾಗಾಗಿ ಪ್ರತಿ ಮಗುವಿಗೆ ಜಂತು ಹುಳು ನಿವಾರಕ ಮಾತ್ರೆಯನ್ನು ವರ್ಷದಲ್ಲಿ ಎರಡು ಬಾರಿ ತಪ್ಪದೇ ನೀಡಬೇಕು. ಪೋಷಕರು ಸೆ.25ರಂದು ತಮ್ಮ ಮಕ್ಕಳನ್ನು ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ಶಾಲೆಗಳಿಗೆ ಕರೆದೊಯ್ದು ಜಂತು ಹುಳು ನಿವಾರಕ ಮಾತ್ರೆಗಳನ್ನು ಸೇವಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಕೋರಿದರು.
ಮಾತ್ರೆ ಸೇವಿಸುವ ವಿಧಾನ: ಎರಡು ವರ್ಷದೊಳಗಿನ ಮಕ್ಕಳು ಅರ್ಧ ಮಾತ್ರೆ ಹಾಗೂ 2ರಿಂದ 19 ವರ್ಷದೊಳಗಿನವರು ಒಂದು ಮಾತ್ರೆಯನ್ನು ಅಗಿದು ನುಂಗಬೇಕು. ಊಟದ ನಂತರ ಅಥವಾ ಮುಂಚಿತವಾಗಿಯೂ ಈ ಮಾತ್ರೆಯನ್ನು ಸೇವಿಸಬಹುದು. ಅಡ್ಡ ಪರಿಣಾಮಗಳಿಲ್ಲ: ಜಂತು ಹುಳು ನಿವಾರಕ ಮಾತ್ರೆಯ ಸೇವನೆಯಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳಾಗುವುದಿಲ್ಲ. ಸೋಂಕು ಹೊಂದಿರುವ ಕೆಲವು ಮಕ್ಕಳಲ್ಲಿ ಮಾತ್ರೆ ತೆಗೆದುಕೊಂಡ ನಂತರ ವಾಕರಿಕೆ, ಹೊಟ್ಟೆ ನೋವು ಕಾಣಿಸಬಹುದು. ಇದಕ್ಕೆ ಗಾಬರಿಯಾಗಬೇಕಿಲ್ಲ ಎಂದು ಸಿರಸಗೆ ಅವರು ಸ್ಪಷ್ಟಪಡಿಸಿದರು. ಸೋಂಕು ಹರಡದಂತೆ ಮುನ್ನೆಚ್ಚರಿಕೆ: ಜಂತು ಹುಳು ಸೋಂಕು ಅಶುಚಿತ್ವದಿಂದಾಗಿ ಹರಡುತ್ತದೆ. ಹಾಗಾಗಿ ನಿಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಿರಿ. ಬರಿಗಾಲಲ್ಲಿ ನಡೆಯದೇ ಪಾದರಕ್ಷೆಗಳನ್ನು ಧರಿಸಿ, ಬಹಿರ್ದೆಸೆಗೆ ಯಾವಾಗಲೂ ಶೌಚಾಲಯವನ್ನು ಬಳಸಿ. ಹಣ್ಣು ಮತ್ತು ತರಕಾರಿಗಳನ್ನು ಶುದ್ಧ ನೀರಿನಿಂದ ಶುಚಿಗೊಳಿಸಬೇಕು. ಯಾವಾಗಲೂ ಶುದ್ಧ ನೀರನ್ನು ಸೇವಿಸಬೇಕು. ಆಹಾರ ಮುಚ್ಚಿಡಬೇಕು. ಉಗುರುಗಳನ್ನು ಸ್ವತ್ಛ ಮತ್ತು ಚಿಕ್ಕದಾಗಿ ಇರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುಭಾಷ ಮುಧಾಳೆ, ಕಾರ್ಯಕ್ರಮ ಅಧಿಕಾರಿ ಉಮೇಶ ಬಿರಾದಾರ, ಉಪ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ಉಪಸ್ಥಿತರಿದ್ದರು.