ಬೀದರ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಸವಕಲ್ಯಾಣ ನಗರಕ್ಕೆ ಭೇಟಿ ನೀಡಿದ ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಚಾರ ಸಭೆಯಲ್ಲಿ ನೀಡಿದ ಭರವಸೆಗಳನ್ನು ವಾಸ್ತವದಲ್ಲಿ ಈಡೇರಿಸುತ್ತಾರೆಯೇ ಎಂದು ಬಸವಕಲ್ಯಾಣದ ಜನರು ಚರ್ಚಿಸುತ್ತಿದ್ದಾರೆ.
Advertisement
ಕಳೆದ ವರ್ಷ ಏಪ್ರಿಲ್ 29ರಂದು ಬಸವಕಲ್ಯಾಣ ಕ್ಷೇತ್ರಕ್ಕೆ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಪರ ಪ್ರಚಾರ ಸಮಾರಂಭದಲ್ಲಿ ಮಾತನಾಡಿದ್ದ ಬಿಎಸ್‌ವೈ, ಬಸವಕಲ್ಯಾಣ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಭರವಸೆ ನೀಡಿದ್ದರು. ಬಸವಕಲ್ಯಾಣವನ್ನು ದೇಶದಲ್ಲಿಯೇ ದೊಡ್ಡ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳುವಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಈ ನಿಟ್ಟಿನಲ್ಲಿ ವಿಶೇಷ ಅನುದಾನ ಒದಗಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದರು.
Related Articles
ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಮೀಸಲಿದ್ದ ತಾಳಿ ಭಾಗ್ಯ ಯೋಜನೆ ವಿಸ್ತರಿಸಿ ಎಲ್ಲಾ ಸಮುದಾಯಗಳ ಬಡ ಹೆಣ್ಣುಮಕ್ಕಳ ಮದುವೆಗೆ 3-4 ಗ್ರಾಂ ಚಿನ್ನದ ತಾಳಿ ನೀಡಿ ಪ್ರೋತ್ಸಾಹ ನೀಡುವ ಕೆಲಸ ಮಾಡುವುದಾಗಿ ಬಿಎಸ್‌ವೈ ಭರವಸೆ ನೀಡಿದ್ದರು. ಇದೀಗ ಅಧಿಕಾರಕ್ಕೆ ಬಂದು ವಾರ ಕಳೆದಿದ್ದು, ನೀಡಿದ ಭರವಸೆಗಳನ್ನು ಈಡೇರಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
Advertisement
ಉದ್ಯೋಗ ಸೃಷ್ಟಿಗೆ ಅನುದಾನ:ಹೈದ್ರಾಬಾದ ಕರ್ನಾಟಕ ಭಾಗದ ಯುವಕರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಿಶೇಷ ಅನುದಾನ ನೀಡಿ ಕೈಗಾರಿಕಾ ವಲಯ ಸ್ಥಾಪಿಸುವ ಭರವಸೆಯನ್ನು ಬಿಎಸ್‌ವೈ ನೀಡಿದ್ದರು. ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತದೆಯೇ? ನಿಜವಾಗಿಯೂ ಈ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುತ್ತಾರೆಯೆ? ಎಂಬ ಬಗ್ಗೆ ಯುವಕರು ಚರ್ಚಿಸಿಕೊಳ್ಳುತ್ತಿದ್ದಾರೆ.
ತೊಗರಿಗೆ ಬೆಂಬಲ ಬೆಲೆ: ಹೈ.ಕ. ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ತೊಗರಿ ಬೆಳೆಗೆ ಸರ್ಕಾರದಿಂದ ಪ್ರೋತ್ಸಾಹ ನೀಡುವ ಭರವಸೆಯನ್ನು ಬಿಎಸ್‌ವೈ ಚುನಾವಣಾ ಪೂರ್ವದಲ್ಲಿ ನೀಡಿದ್ದರು. ಕೇಂದ್ರ ಸರ್ಕಾರ ರೈತರ ವಿವಿಧ ಬೆಳೆಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಬೆಲೆ ಕುಸಿತವಾದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ನೀಡಿ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 5 ಸಾವಿರ ಕೋಟಿ ಅನುದಾನ ಮೀಸಲಿರಿಸುವುದಾಗಿ ಭರವಸೆ ನೀಡಿದ್ದತು. ಇದೀಗ ಮುಂಗಾರು ಬೆಳೆಗಳು ಉತ್ತಮವಾಗಿ ಬೆಳೆಯುವ ಸಾಧ್ಯತೆ ಇದ್ದು, ಬೆಲೆ ಕುಸಿದ ಸಂದರ್ಭದಲ್ಲಿ ಪ್ರೋತ್ಸಾಹ ಧನ ನೀಡುತ್ತಾರೆಯೇ ಎಂದು ರೈತರು ಪ್ರಶ್ನಿಸುತ್ತಿದ್ದಾರೆ. ಒಟ್ಟಾರೆ ಚುನಾವಣಾ ಪೂರ್ವದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ನೀಡಿದ ಭರವಸೆಗಳನ್ನು ಅವರ ಅಧಿಕಾರ ಅವಯಲ್ಲಿ ಈಡೇರಿಸುತ್ತಾರಾ ಎಂಬುದನ್ನುದು ಕಾದುನೊಡಬೇಕಾಗಿದೆ.