ಬೀದರ: ಬಹುಕೋಟಿ ರೂ. ವೆಚ್ಚದಲ್ಲಿ ನಿಮಾರ್ಣಗೊಂಡಿರುವ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಆಸ್ಪತ್ರೆ ಕಟ್ಟಡ ಮುಂಭಾಗದ ಛಾವಣಿ ಕುಸಿದ ಹಿನ್ನೆಲೆಯಲ್ಲಿ ಸಂಸದ ಭಗವಂತ ಖೂಬಾ ರವಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ,ಆಸ್ಪತ್ರೆ ಕಟ್ಟಡ ಕುರಿತು ಉನ್ನತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಸಾಧಾರಣ ಮಳೆಗೆ ಬಿದ್ದರೆ ಆಸ್ಪತ್ರೆ ಕಟ್ಟಡದ ಗತಿ ಏನೆಂದು ಆಸ್ಪತ್ರೆಯ ನಿರ್ದೇಶಕರನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡರು. ಕಟ್ಟಡ ಕಾಮಗಾರಿ ಕಳಪೆ ಇರುವ ಕಾರಣಕ್ಕೆ ಮೇಲ್ಛಾವಣಿ ಕುಸಿದಿರಬೇಕು ಅಲ್ವೇ ಎಂದು ಮರು ಪ್ರಶ್ನೆ ಮಾಡಿದರು.
ಯಾರು ಹೊಣೆ?: ಬಡವರ ಆರೋಗ್ಯ ಸೇವೆ ನೀಡಲಿ ಎಂದು ಸರ್ಕಾರ ಬಹುಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಿದೆ. ಇಂತಹ ದುರ್ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಪ್ರಾಣಕ್ಕೆ ಕುತ್ತು ಬಂದರೆ ಯಾರು ಹೊಣೆ ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ಬೆಂಗಳೂರಿನ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗೆ ಕರೆ ಮಾಡಿ ಘಟನೆಯ ವಿವರಣೆ ನೀಡಿದ ಸಂಸದ ಖೂಬಾ ಕೂಡಲೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂದರು.
ಅಧಿಕಾರಿಗಳ ವಿರುದ್ಧ ಆಕ್ರೋಶ: ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಖೂಬಾ ಆಸ್ಪತ್ರೆಯಲ್ಲಿ ಸಂಚರಿಸಿ ಆಸ್ಪತ್ರೆಯ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಅಲ್ಲದೆ, ವಿವಿಧ ವಾರ್ಡ್‌ಗಳಿಗೆ ತೆರಳಿ ರೋಗಿಗಳಿಂದ ಮಾಹಿತಿ ಪಡೆದರು. ನಂತರ ಆಸ್ಪತ್ರೆ ನಿರ್ದೇಶಕ ಡಾ|ಕ್ಷೀರಸಾಗರ ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಸದ ಖೂಬಾ, ವೈದ್ಯರು ಜನರ ಸೇವೆ ಮಾಡಬೇಕು. ಸರ್ಕಾರ ನಿಮಗೆ ಎಲ್ಲ ವ್ಯವಸ್ಥೆಗಳನ್ನು ನೀಡಿ ಜನರ ಸೇವೆ ಮಾಡಲು ಅವಕಾಶ ನೀಡಿದೆ. ಆದರೆ, ಇಲ್ಲಿ ಮಾತ್ರ ಅವ್ಯವಸ್ಥೆಗಳು ಎದ್ದು ಕಾಣುತ್ತಿವೆ. ಮಾನವೀಯತೆಯಿಂದ ಕೆಲಸ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದರು.