Advertisement

ನಿರಂತರ ನೀರು-ಒಳ ಚರಂಡಿ ಕಾಮಗಾರಿ ಪರಿಶೀಲನೆ

05:24 PM Oct 25, 2019 | Team Udayavani |

ಬೀದರ: ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗವಾರ ಅವರು ನಗರದ ಹಲವೆಡೆ ಸಂಚರಿಸಿ ನಿರಂತರ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿ ಪರಿಶೀಲಿಸಿದರು. ಜನರ ಸಮಸ್ಯೆ ಆಲಿಸಿ ಅಧಿಕಾರಿಗಳಿಗೆ ಕಾಮಗಾರಿ ವಿಷಯದಲ್ಲಿ ಅಗತ್ಯ ನಿರ್ದೇಶನ ನೀಡಿದರು.

Advertisement

ಹಳೆ ನಗರಕ್ಕೆ ಭೇಟಿ ನೀಡಿದ ವೇಳೆ ಸಾರ್ವಜನಿಕರು ಚರಂಡಿಗಳು ತುಂಬಿಕೊಂಡು ಕೊಳಚೆ ನೀರು ಮನೆಯೊಳಗೆ ಬರುತ್ತಿದೆ. ಇದರಿಂದ ಪ್ರತಿದಿನ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಂಡರು. ಕೊಳವೆಯ ಯಾವುದಾದರೊಂದು ಭಾಗದಲ್ಲಿ ತ್ಯಾಜ್ಯದಿಂದ ಮುಚ್ಚಿದಲ್ಲಿ ನೀರು ಮುಂದೆ ಹರಿಯದೇ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಜೆಟ್ಟಿಂಗ್‌ ಮಷಿನ್‌ ಮೂಲಕ ಸರಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಈ ರೀತಿಯ ಸಮಸ್ಯೆಗಳು ಎಲ್ಲೆಲ್ಲಿ ಇವೆ ಎನ್ನುವುದನ್ನು ತಿಳಿದುಕೊಂಡು ಕೂಡಲೇ ಸರಿಪಡಿಸಬೇಕು ಎಂದು ಸಿಇಒ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬಹುತೇಕ ಮನೆಗಳು ಯುಜಿಡಿಗೆ ಸಂಪರ್ಕ ಮಾಡಿಕೊಳ್ಳದೇ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ ಸಿಇಒ, ಒಳಚರಂಡಿ ಯೋಜನೆ ಮಹತ್ವದ ಬಗ್ಗೆ ಜನರಲ್ಲಿ ಇನ್ನಷ್ಟು ತಿಳಿವಳಿಕೆ ನೀಡಬೇಕು. ಪ್ರಸ್ತುತ ಯೋಜನೆ ಜಾರಿಯಿರುವ ಕಡೆಗಳಲ್ಲಿ ಸೂಕ್ತ ನಿರ್ವಹಣೆ ಮಾಡಬೇಕು. ದೂರುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಾರ್ಡ್‌ ಸಂಖ್ಯೆ 7ರಲ್ಲಿ 24ಗಿ7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನದ ಬಗ್ಗೆ ಪರಿಶೀಲಿಸಿದರು. ಮನೆಗಳಲ್ಲಿ ಅಳವಡಿಸಿದ ನಳಗಳನ್ನು ಪರೀಕ್ಷಿಸಿ ನೀರು ಬರುತ್ತಿದೆಯಾ ಇಲ್ಲವೋ ಎನ್ನುವುದನ್ನು ತಿಳಿದುಕೊಂಡರು. ಈ ವೇಳೆ ಸ್ಥಳೀಯರೊಬ್ಬರು ನೀರಿನ ಸಂಪರ್ಕ ಪಡೆದ್ದೇವೆ. ಆದರೂ ಪ್ರತಿದಿನ ನೀರು ಬರುತ್ತಿಲ್ಲ ಎಂದು ದೂರಿದರು.

Advertisement

ನಳದ ಸಂಪರ್ಕ ಪಡೆದ ಎಲ್ಲರಿಗೂ ನೀರು ಪೂರೈಕೆಯಾಗಬೇಕು. ಯಾವುದಾದರೂ ಭಾಗದಿಂದ ನೀರು ಬರುತ್ತಿಲ್ಲ ಎಂದು ದೂರು ಬಂದ ಕೂಡಲೇ ತಕ್ಷಣ ಸರಿಪಡಿಸಬೇಕು ಎಂದು ಸಿಇಒ ಅಧಿಕಾರಿಗಳಿಗೆ ತಿಳಿಸಿದರು.

ನೀರು ಪೋಲಾಗದಂತೆ ನೋಡಿಕೊಳ್ಳಿ: ವಾರ್ಡ್‌ ಸಂಖ್ಯೆ 7ರಲ್ಲಿ ಕೆಲವು ಮನೆಗಳ ಮುಂದೆ ಕುಡಿಯುವ ನೀರು ಪೋಲಾಗುತ್ತಿರುವುದನ್ನು ಕಂಡು ಹಲವು ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವಾಗ ನೀರು ಪೋಲು ಮಾಡುವುದು ಸರಿಯಲ್ಲ. ನೀರನ್ನು ಚರಂಡಿಗೆ ಬಿಡುತ್ತಿರುವವರಿಗೆ ದಂಡ ವಿಧಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಪ್ರಶಾಂತ ಪಿ.ಆರ್‌. ಹಾಗೂ ಇನ್ನಿತರ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next