ಶಶಿಕಾಂತ ಬಂಬುಳಗೆ
ಬೀದರ: ಮುಂಗಾರು ಮಳೆ ವಿಳಂಬ ನಡುವೆಯೂ ಔಷಧೀಯ ಗುಣವುಳ್ಳ ಸೀತಾಫಲ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬೆಲೆ ದುಬಾರಿಯಾಗಿಸಿದೆ. ಚಳಿಗಾಲ ಆರಂಭವಾಗುತ್ತಲೇ ಮಾರುಕಟ್ಟೆಯಲ್ಲಿ ಸೀತಾಫಲ ಮಾರಾಟದ ಭರಾಟೆ ಹೆಚ್ಚುತ್ತದೆ. ಆದರೆ, ಕಳೆದ ಎರಡ್ಮೂರು ವರ್ಷ ಬರ ಹಿನ್ನೆಲೆಯಲ್ಲಿ ಹಣ್ಣಿನ ಆವಕ ತೀರಾ ಕಡಿಮೆಯಾಗಿತ್ತು.
ಹೀಗಾಗಿ ಹಣ್ಣು ದುಬಾರಿಯಾಗಿತ್ತು. ಈ ವರ್ಷ ಉತ್ತಮ ಮಳೆಯಾಗಿದ್ದರೂ ಸಕಾಲಕ್ಕೆ ಬಾರದ ಹಿನ್ನೆಲೆಯಲ್ಲಿ “ಸೀತಾಫಲ ಸುಗ್ಗಿ’ ಸ್ವಲ್ಪ ಕಡಿಮೆಯಾಗಿದೆ. ಈ ನಡುವೆ ಮೂರ್‍ನಾಲ್ಕು ವಾರಗಳಿಂದ ನಗರದಲ್ಲಿ ಹಣ್ಣಿನ ವ್ಯಾಪಾರ ಜೋರಾಗಿದೆ.
ವ್ಯಾಪಾರ ಜೋರು: ನಗರದ ಸಿದ್ಧಾರ್ಥ ಕಾಲೇಜು ಪಕ್ಕ ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಸೀತಾಫಲ ವ್ಯಾಪಾರ ಜೋರಾಗಿದೆ. ಶಿವಾಜಿ ವೃತ್ತ, ಚೌಬಾರಾ, ಬಸ್ ನಿಲ್ದಾಣ ಸೇರಿದಂತೆ ವಿವಿಧ ವೃತ್ತ ಹಾಗೂ ಮುಖ್ಯ ರಸ್ತೆಗಳಲ್ಲಿ ಸೀತಾ ಫಲ ಬುಟ್ಟಿಗಳು ಕಂಡು ಬರುತ್ತಿವೆ. ವಯಸ್ಸಾದ ಅಜ್ಜಿಯರೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಕ್ಕೆ ಕುಳಿತಿರುವುದು ಕಂಡು ಬರುತ್ತಿದೆ.ಸೀತಾಫಲ ಹಣ್ಣು ಔರಾದ ಮತ್ತು ಭಾಲ್ಕಿ ತಾಲೂಕಿನಲ್ಲೇ ಹೆಚ್ಚು ಬೆಳೆಯುತ್ತಿದ್ದು, ಅಲ್ಲಿಂದಲೇ ನಗರದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಬೆಲೆ ಹೆಚ್ಚು ಗ್ರಾಹಕರೂ ಹೆಚ್ಚು: ಕಳೆದ ವರ್ಷಕ್ಕಿಂತಲೂ ಈ ಬಾರಿ ಕೊಂಚ ಬೆಲೆ ಹೆಚ್ಚಿದ್ದರೂ ವರ್ಷಕ್ಕೊಮ್ಮೆ ಸಿಗುವ ಹಣ್ಣು ಇದಾಗಿರುವುದರಿಂದ ಗ್ರಾಹಕರು ಖುಷಿಯಿಂದಲೇ ಸೀತಾಫಲ ಖರೀದಿಸಿ ಸವಿಯುತ್ತಿದ್ದಾರೆ. ಇದರಿಂದ ನಗರದ ಮಾರುಕಟ್ಟೆಯಲ್ಲಿ ಸೀತಾಫಲಕ್ಕೆ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ದೊಡ್ಡ ಕಾಯಿಗೆ 15 ರೂ. ಮತ್ತು ಸಣ್ಣ ಕಾಯಿಗೆ 8 ರೂ. ನಂತೆ ಹಣ್ಣು ಮಾರಾಟವಾಗುತ್ತಿದ್ದು, ಕಳೆದ ವರ್ಷ ಸಣ್ಣ ಕಾಯಿಗೆ 8-10 ರೂ. ಇತ್ತು. 50-60 ಕಾಯಿ ಹೊಂದಿರುವ ಒಂದು ಬುಟ್ಟಿ 400-500 ರೂ.ವರೆಗೆ ಮಾರಾಟ ಆಗುತ್ತಿದೆ.
ಸೀತಾಫಲ ಸುಗ್ಗಿ ಕಾಲದಲ್ಲಿ ಬಹು ಬೇಡಿಕೆಯುಳ್ಳ ಹಣ್ಣು. ಈ ವರ್ಷ ಮಳೆ ವಿಳಂಬದ ಕಾರಣ ಇಳುವರಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಹಣ್ಣುಗಳು ಬಂದಿಲ್ಲ. ಹಾಗಾಗಿ ದರವೂ ಸ್ವಲ್ಪ ಹೆಚ್ಚಿದೆ. ಲಾಭ ಕಡಿಮೆ ಅನಿಸಿದರೂ ಪರವಾಗಿಲ್ಲ. ಕೆಲವೊಮ್ಮೆ ಹೆಚ್ಚು, ಮತ್ತೆ ಕೆಲವೊಮ್ಮೆ ಕಡಿಮೆ ಲಾಭ ಸಿಗುತ್ತದೆ. ನಿತ್ಯ ಜಮಗಿಯಿಂದ ಬಸ್‌ನಲ್ಲಿ ಬಂದು ವ್ಯಾಪಾರ ಮಾಡುತ್ತೇನೆ. ನಿತ್ಯ 1,500-2000 ರೂ. ವರೆಗೆ ವ್ಯಾಪಾರ ಆಗುತ್ತದೆ.ಏನಿಲ್ಲವೆಂದರೂ 500 ರೂ. ಆದಾಯ ಆಗುತ್ತದೆ.
ರಾಜಮ್ಮ ಜಮಗಿ,
ಸೀತಾಫಲ ವ್ಯಾಪಾರಿ