Advertisement
ಈ ಅಭೂತಪೂರ್ವ ಕ್ಷಣಕ್ಕೆ ದೇಶ-ವಿದೇಶದಿಂದ ಆಗಮಿಸಿದ ಸಾವಿರಾರು ಸಿಖ್ ಧರ್ಮಿಯರು ಸಾಕ್ಷಿಯಾದರು. ಜಯಂತಿ ಹಿನ್ನೆಲೆಯಲ್ಲಿ ನಗರದ ಗುರುದ್ವಾರ ಪರಿಸರದಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ಗುರುನಾನಕ್ ಮಂದಿರದಲ್ಲಿ ದಿನವಿಡಿ ಧಾರ್ಮಿಕ ಕೈಂಕರ್ಯಗಳು, ಗ್ರಂಥ ಪಠಣ, ಕಥೆ-ಕೀರ್ತನೆಗಳು ಶ್ರದ್ಧಾ, ಭಕ್ತಿಯಿಂದ ನೆರವೇರಿದವು. ಸಂಜೆ 4 ಗಂಟೆಗೆ ಆರಂಭವಾದ ಮೆರವಣಿಗೆ ಸಂಜೆ 7ರ ವರೆಗೆ ಸಾಗಿತು.
ಭಾವದೊಂದಿಗೆ ಭಾಗಿಯಾಗಿ ಹಾಡಿ, ಕುಣಿದು ಸಂಭ್ರಮಿಸಿದ ರಲ್ಲದೇ ಧಾರ್ಮಿಕ ಗ್ರಂಥ ಪಠಣ ಮಾಡಿದರು. ಜನಾಕರ್ಷಿಸಿದ ಕಲೆಗಳ ಪ್ರದರ್ಶನ: ಬಾನಂಗಳದಲ್ಲಿ ಪಟಾಕಿಗಳು ಬೆಳಕಿನ ಚಿತ್ತಾರ ಮೂಡಿಸಿದರೆ ಪಾರಂಪರಿಕ ಕಲೆ ಪ್ರದರ್ಶನಗಳು ಮೈ ಜುಮ್ಮೆನಿಸಿದವು. ನೀಲಿ ಮತ್ತು ಹಳದಿ ಧ್ವಜ (ನಿಶಾನೆ ಸಾಹೇಬ್) ಮತ್ತು ಸಿಖ್ಖರ ‘ಬೋಲೆ ಸೋನಿಹಾಲ್, ಸಶ್ರೀಯಾ ಅಕಾಲ್’ ಜಯ ಘೋಷಗಳು ನೆರೆದವರನ್ನು ಆಕರ್ಷಿಸಿತು. ಅಲಂಕೃತ ಕುದರೆಗಳ ಮೇಲೆ ಸಿಖ್ ಧರ್ಮೀಯರು ಪಾರಂಪರಿಕ ತಲವಾರ್ ಮತ್ತು ಚಕ್ರ ತಿರುಗಿಸುವುದು, ತಲವಾರ್ ಹಿಡಿದು ಓಡುವುದು ನೋಡುಗರನ್ನು ಸೆಳೆಯಿತು.
Related Articles
Advertisement
ಐತಿಹಾಸಿಕ ಗುರುದ್ವಾರದಿಂದ ಆರಂಭವಾದ ಮೆರವಣಿಗೆ ಮಡಿವಾಳ ವೃತ್ತ, ಕರಿಯಪ್ಪ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮೂಲಕ ಸಾಗಿ ನಂತರ ನೆಹರು ಕ್ರೀಡಾಂಗಣ ಮೂಲಕ ಪುನಃ ಗುರುನಾನಕ್ ದೇವಸ್ಥಾನಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಿಖ್ ಬಾಂಧವರಿಗಾಗಿ ವಿವಿಧ ಸಂಘ-ಸಂಸ್ಥೆಗಳಿಂದ ರಸ್ತೆಯುದ್ದಕ್ಕೂ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಗುರುದ್ವಾರ ಪ್ರಬಂಧಕ ಕಮಿಟಿ ಅಧ್ಯಕ್ಷ ಬಲಬೀರಸಿಂಬ್, ಪ್ರಮುಖರಾದ ಮನಪ್ರೀತ್ ಸಿಂಗ್ ಬಂಟಿ, ಬಾಬಾ ರಾಮಸಿಂಗ್, ಬಲವಿಂದರ್ ಸಿಂಗ್, ಮನಪ್ರೀತ್‌ಸಿಂಗ್, ಹರಪಾಲ್‌ಸಿಂಗ್ ರಾಂಜನ್, ದರ್ಬಾರ್‌ಸಿಂಗ್, ಪ್ರದೀಪಸಿಂಗ್, ತೆಜಪಾಲಸಿಂಗ್, ದರ್ಶನಸಿಂಗ್, ಗುರುಪ್ರೀತಸಿಂಗ್ ಹಾಗೂ ಬೆಂಗಳೂರು, ನಾಂದೇಡ, ಉದಗೀರ, ಲಾತೂರ, ಪುಣೆ, ಹೈದ್ರಾಬಾದ ಸೇರಿದಂತೆ ವಿವಿಧಡೆಯಿಂದ ಸಿಖ್ಖ ಬಾಂಧವರು ಆಗಮಿಸಿದ್ದರು.