Advertisement

ಜಿಲ್ಲೆಯ ನೀರಾವರಿಗೆ 800 ಕೋಟಿ ರೂ.

10:58 AM Jun 28, 2019 | Team Udayavani |

ಬೀದರ: ಜಿಲ್ಲೆಯ ನೀರಾವರಿ ಉದ್ದೇಶಕ್ಕಾಗಿ 800 ಕೊಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Advertisement

ಬಸವಕಲ್ಯಾಣ ತಾಲೂಕು ಉಜಳಂಬ ಗ್ರಾಮದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಣ್ಣ ನೀರಾವರಿ ಹಾಗೂ ಜಲಸಂಪನ್ಮೂಲ ಇಲಾಖೆ ಯೋಜನೆ ಗಳಿಗಾಗಿ 800 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ 5-6 ತಿಂಗಳಲ್ಲಿ ಈ ಯೋಜನೆಗಳು ಕಾರ್ಯ ರೂಪಕ್ಕೆ ಬರಲಿವೆ. ಭಾಲ್ಕಿ ಹಾಗೂ ಬಸವಕಲ್ಯಾಣ ತಾಲೂಕು ಗಳಿಗೆ 75 ಕೋಟಿ ರೂ. ವೆಚ್ದದಲ್ಲಿ ಮಾಂಜ್ರಾ ನದಿಗೆ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಈ ಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಲೋಕೋಪಯೋಗಿ ಇಲಾಖೆಯಿಂದ ವಿವಿಧ ಕಾಮಗಾರಿಗಳಗಾಗಿ 317 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಹಕಾರ ಇಲಾಖೆಯಿಂದ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರ ಅವಧಿ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ರೈತರಿಗೆ ಅನುಷ್ಠಾನವಾದ ಸಾಲಮನ್ನಾ ಯೋಜನೆಯಿಂದ ಬೀದರ್‌ ಜಿಲ್ಲೆಯ ರೈತರಿಗೆ 1045 ಕೋಟಿ ಸಾಲಮನ್ನಾ ಆಗಿದೆ. ಅಲ್ಲದೆ, ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸಾಲ ಪಡೆದ 11,756 ರೈತರ 43 ಕೋಟಿ ರೂ. ಮನ್ನಾ ಮಾಡಲಾಗಿದೆ ಎಂದು ಹೇಳಿದರು. ಹೈದ್ರಾಬಾದ ಕಾರ್ನಾಟಕ ಭಾಗದ ಆರೋಗ್ಯ ಹಾಗೂ ಶೈಕ್ಷಣಿಕ ಅಭಿವೃದ್ಧಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮುಂದಿನ 8 ದಿನಗಳಲ್ಲಿ ವಿಶೇಷ ಸಭೆ ನಡೆಸಿ, ಈ ಭಾಗದ ಪ್ರತಿಯೊಂದು ಗ್ರಾಮಗಳಲ್ಲಿನ ಶಾಲೆಗಳ ಸ್ಥಿತಿಗತಿ, ದುರಸ್ತಿ, ಶಿಕ್ಷಕರ ಕೊರತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದರು.

ಬೀದರ್‌ ನಗರದ ಬ್ರಿಮ್ಸ್‌ ಬೋಧಕ ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆಯಾಗಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಈ ಕುರಿತು ಈಗಾಗಲೇ ಆರೋಗ್ಯ ಖಾತೆ ಸಚಿವ ಶಿವಾನಂದ ಪಾಟೀಲ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಇ.ತುಕಾರಾಮ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆಸ್ಪತ್ರೆಯಲ್ಲಿನ ಲೋಪಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲ್ಲಿದೆ ಎಂದು ಹೇಳಿದರು.

Advertisement

ಬರದಿಂದ ತತ್ತರಿಸುತ್ತಿರುವ ಗಡಿ ಭಾಗದ ರೈತರು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ. ಸರ್ಕಾರ ನೀಡುವ ಸೌಲಭ್ಯ ಪಡೆದುಕೊಂಡು ರೈತರು ಕೃಷಿ ಕ್ಷೇತ್ರದಲ್ಲಿ ಹೊಸ ಪದ್ಧತಿ ಅಳವಡಿಸಿಕೊಳ್ಳಬೇಕು. ಇಸ್ರೇಲ್ ಮಾದರಿ ಕೃಷಿ ಹಾಗೂ ನೆರೆ ರಾಜ್ಯ ಮಹಾರಾಷ್ಟ್ರದ ಕಡಗಂಚಿ ಗ್ರಾಮದಲ್ಲಿನ ಕೃಷಿ ಯೋಜನೆ ನೋಡಿಕೊಂಡು ಪ್ರಗತಿ ಹೊಂದಬೇಕು. ಕೃಷಿ ಸಾಲಕ್ಕಾಗಿ ಬ್ಯಾಂಕ್‌ಗಳ ಕಡೆಗೆ ಹೋಗಬಾರದು. ಸರ್ಕಾರವೇ ಎಲ್ಲ ರೀತಿಯ ಸಹಕಾರ ನೀಡಲು ಮುಂದಾಗಿದೆ. ಸಹಾಯ ಧನ ಪಡೆದುಕೊಂಡು ರೈತರು ಆಧುನಿಕ ಕೃಷಿಗೆ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಸಾಲ ಪಡೆದ ರೈತರಿಗೆ ಋಣಮುಕ್ತ ಪತ್ರ ನೀಡಲಾಯಿತು.

ಸಹಕಾರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪುರ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ, ಕ್ರೀಡಾ ಖಾತೆ ಸಚಿವ ರಹೀಂಖಾನ್‌, ಅರಣ್ಯ ನಿಗಮ ಅಧ್ಯಕ್ಷ ಹಾಗೂ ಶಾಸಕ ಬಿ.ನಾರಾಯಣರಾವ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ವಿಧಾನ ಪರಿಷತ್‌ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ, ವಿಜಯಸಿಂಗ್‌, ಜಿಲ್ಲಾಧಿಕಾರಿ ಎಚ್.ಆರ್‌. ಮಹಾದೇವ, ಜಿಪಂ ಸಿಇಒ ಮಹಾಂತೇಶ ಬೀಳಗಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next