Advertisement

ಆಗಸ್ಟ್‌ನಲ್ಲಿ ವಿಮಾನ ಯಾನ ಪ್ರಾರಂಭ

02:56 PM May 25, 2019 | Naveen |

ಬೀದರ: ಬರುವ ಆಗಸ್ಟ್‌ ತಿಂಗಳ ವರೆಗೆ ಬೀದರ ನಗರದಲ್ಲಿ ಉಡಾನ್‌ ಯೋಜನೆಯಡಿ ನಾಗರಿಕ ವಿಮಾನಯಾನ ಪ್ರಾರಂಭಿಸುತ್ತೇನೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.

Advertisement

ಸಂಸದರಾಗಿ ಎರಡನೇ ಬಾರಿ ಆಯ್ಕೆಗೊಂಡ ನಂತರ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಅವಧಿಯಲ್ಲಿ ಬಾಕಿ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಜತೆಗೆ, ಎರಡನೇ ಅವಧಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಯಾವ ಹೊಸ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಾರೊ ಆ ಎಲ್ಲ ಯೋಜನೆಗಳನ್ನು ಕ್ಷೇತ್ರಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ, ಕ್ಷೇತ್ರದಲ್ಲಿ ಅವಶ್ಯವಿರುವ ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ತರುವ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೆಲುವಿಗೆ ಏನು ಕಾರಣ: ದೇಶದ ಸುರಕ್ಷತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿರ್ಣಯಗಳು, ದೇಶದ ನಾಗರಿಕರ ಸವಾಂರ್ಗೀಣ ಅಭಿವೃದ್ಧಿಗಾಗಿ ನೀಡಿದ ಅನೇಕ ಕಾರ್ಯಕ್ರಮಗಳು, ಯೋಜನೆಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ದೇಶದ ಸುರಕ್ಷತೆಗಾಗಿ, ದೇಶದ ಸವಾಂರ್ಗೀಣ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯಾಗಿ ಮಾಡುವ ನಿಟ್ಟಿನಲ್ಲಿ ಕ್ಷೇತ್ರದ ಜನರು ಕೂಡ ನನ್ನನ್ನು ಆಯ್ಕೆ ಮಾಡುವ ಮೂಲಕ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಅಲ್ಲದೆ, ಐದು ವರ್ಷಗಳಲ್ಲಿ ಸುಮಾರು 6.5 ಲಕ್ಷ ಅರ್ಹ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಿರುವುದು ಗೆಲುವಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಜೋಶ್‌ ಹೇಗಿದೆ?:ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕ್ಷೇತ್ರದ ಜನರು, ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹರ್ಷದಿಂದ‌ ಸಂಭ್ರಮಿಸುತ್ತಿದ್ದಾರೆ. ಚುನಾವಣೆ ನಾಮ ಪತ್ರ ಸಲ್ಲಿಕೆ ದಿನದಿಂದ ಪಕ್ಷದ ಕಾರ್ಯಕರ್ತರು ಗೆಲುವಿಗೆ ಶ್ರಮಿಸಿದ್ದಾರೆ. ಅಲ್ಲದೆ, ಲಕ್ಷಾಂತರ ಮತದಾರರು ದೇಶಕ್ಕೆ ಮೋದಿ ಸರ್ಕಾರವೇ ಸೂಕ್ತ ಎಂದು ಜಾಗೃತರಾಗಿ ಮತದಾನ ಮಾಡಿ, ಅವರೂ ಕೂಡ ಇಂದು ಸಂಭ್ರಮ ಪಡುತ್ತಿದ್ದಾರೆ. ಮೋದಿ ಗೆಲುವಿಗೆ ರಾಜಕೀಯ ಕಾರ್ಯಕರ್ತರಷ್ಟೇ ಅಲ್ಲ, ಸಾಮಾನ್ಯ ಜನರು ಕೂಡ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸುತ್ತಿರುವುದು ಎಲ್ಲೆಡೆ ಕಂಡು ಬಂದಿತು.

ಟೀಕೆಗೆ ಏನು ಉತ್ತರ?: ಕಾಂಗ್ರೆಸ್‌ ಅಭ್ಯರ್ಥಿ ಮೊದಲು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕ್ಷೇತ್ರದಲ್ಲಿ ಬಡವರ ಮೇಲೆ ನಡೆಯುತ್ತಿರುವ ಅನ್ಯಾಯಗಳು ನಿಲ್ಲಬೇಕು. ಅಹಂಕಾರದ ರಾಜಕೀಯ ಮಾಡಿಕೊಂಡು ಅಧಿಕಾರ ಅನುಭವಿಸಬಹುದು. ಆದರೆ, ಕ್ಷೇತ್ರದ ಅಭಿವೃದ್ಧಿ, ಬಡವರ, ದಲಿತರ, ಕೃಷಿಕರ ಏಳ್ಗೆ ಸಾಧ್ಯವಾಗುವುದಿಲ್ಲ. ಕಾರಣ ದ್ವೇಷದ ರಾಜಕಾರಣ ನಿಲ್ಲಿಸಬೇಕು ಎಂಬ ಸಲಹೆ ನೀಡಿದ್ದಾರೆ.

Advertisement

ಶುಭ ಕೋರಿದವರು: ಜಿಲ್ಲೆಯಲ್ಲಿ ಮೈತ್ರಿ ಸರ್ಕಾರದ ಮೂರು ಜನ ಸಚಿವರಿದ್ದಾರೆ. ಅಲ್ಲದೆ ವಿಧಾನ ಪರಿಷತ್‌ ಸದಸ್ಯರು ಇದ್ದಾರೆ. ಆದರೆ, ಲೋಕಸಭೆ ಚುನಾವಣೆಯ ಫಲಿತಾಂಶದ ನಂತರ ಶುಕ್ರವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಮಾತ್ರ ಕರೆ ಮಾಡಿ ಶುಭ ಕೋರಿದ್ದಾರೆ. ಇನ್ನುಳಿದಂತೆ ಯಾರೂ ಕರೆ ಮಾಡಿಲ್ಲ ಎಂದು ಖೂಬಾ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next