ಬೀದರ: ಫಸಲ್ ಬಿಮಾ ಯೋಜನೆ ಹಣ ತಕ್ಷಣ ರೈತರ ಖಾತೆಗೆ ಜಮೆಯಾಗದಿದ್ದರೆ ಸಂಸದ ಭಗವಂತ್ ಖೂಬಾ ನಿವಾಸದ ಮುಂದೆ ಧರಣಿ ನಡೆಸುವುದಾಗಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ಜಿಲ್ಲೆಗೆ 125 ಕೋಟಿ ರೂ. ಬಿಡುಗಡೆಯಾಗಿದೆ ಎಂಬ ಮಾಹಿತಿ ಪತ್ರಿಕೆಗಳಿಂದ ಗೊತ್ತಾಗಿದೆ. ಆದರೆ, ಬಹಳಷ್ಟು ಜನ ರೈತರಿಗೆ ಈವರೆಗೆ ನಯಾಪೈಸೆ ವಿಮಾ ಹಣ ಖಾತೆಗೆ ಜಮಾ ಆಗಿಲ್ಲ. ಸಂಸದ ಭಗವಂತ್ ಖೂಬಾ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜತೆಗೆ ತಕ್ಷಣ ಮಾತುಕತೆ ನಡೆಸಿ ವಿಮಾ ಹಣ ಜಮಾ ಮಾಡಿಸಲು ಮುಂದಾಗಬೇಕು. ಸೂಕ್ತ ಸಮಯದಲ್ಲಿ ಹಣ ಬಿಡುಗಡೆ ಆಗದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.
ಬಹಳಷ್ಟು ರೈತರು ಇಂದಿಗೂ ಸಾಲ ಮನ್ನಾ ಹಾಗೂ ಕಬ್ಬಿನ ಬಾಕಿ ಹಣ ದೊರಕದೇ ಪರದಾಡುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಬೇಟಿ ನೀಡಿದಾಗ ಸಾಲಮನ್ನಾ ಸಮಸ್ಯೆ ಶೀಘ್ರದಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಮೈತ್ರಿ ಸರ್ಕಾರ ಪತನವಾಗಿದ್ದು, ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಸಿರು ಶಾಲು ಹೊದ್ದು ಅಧಿಕಾರ ಸ್ವೀಕರಿಸಿದ್ದ ಬಿಎಸ್‌ವೈ ರೈತರ ಸಂಕಷ್ಟಗಳಿಗೆ ಪರಿಹಾರ ದೊರಕಿಸಿಕೊಡಬೇಕು. ಸಿದ್ದರಾಮಯ್ಯ ಅವರಂತೆ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ ವರ್ಷ ಜಿಲ್ಲೆಯಲ್ಲಿ ಭೀಕರ ಬರಗಾಲ ಉಂಟಾಗಿದೆ. ರೈತರು ಭಾರೀ ಸಂಕಷ್ಟಕ್ಕೆ ಈಡಾಗಿತ್ತು. ಆದರೆ, ಬರಗಾಲದ ಪರಿಹಾರಧನ ಈವರೆಗೆ ರೈತರಿಗೆ ದೊರಕಿಲ್ಲ. ಹಿಂದೂ ಸಂಘಟನೆಗಳ ಮೇಲಿರುವ ಕೇಸ್ ವಾಪಸ್ ಪಡೆದ ಸರ್ಕಾರ ಅದೇ ರೀತಿಯಲ್ಲೇ ರೈತ ಮುಖಂಡರ ವಿರುದ್ಧದ ಕೇಸ್‌ಗಳನ್ನು ಸಹ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು. ರಾಜ್ಯದ ರೈತರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಇನ್ನು ಅನೇಕ ಕಾರ್ಖಾನೆಗಳು ರೈತರಿಗೆ ಎಫ್‌ಆರ್‌ಪಿ ದರ ನೀಡಿಲ್ಲ. ಪ್ರಸಕ್ತ ವರ್ಷ ಕಾರ್ಖಾನೆ ಆರಂಭಕ್ಕೆ ಸಿದ್ಧತೆ ನಡೆಸಿರುವ ಕಾರ್ಖಾನೆಗಳು ಕೂಡಲೆ ರೈತರ ಬಾಕಿ ಹಣ ಪಾವತಿಸಬೇಕು. ಅಲ್ಲದೆ, ಈ ವರ್ಷ ನೆರೆ ರಾಜ್ಯಗಳ ಹಾಗೂ ಜಿಲ್ಲೆಯ ವಿವಿಧ ಕಾರ್ಖಾನೆಗಳು ನೀಡುವ ಬೆಲೆಯಂತೆ ಇಲ್ಲಿನ ಕಾರ್ಖಾನೆಗಳು ಕಬ್ಬಿನ ಬೆಲೆ ನೀಡಬೇಕು. ಯಾವ ಕಾರ್ಖಾನೆಗಳಿಗೆ ಸೂಕ್ತ ಬೆಲೆ ನೀಡಲು ಸಾಧ್ಯ ಇಲ್ಲವೊ ಅವುಗಳು ರೈತರ ಕಬ್ಬು ಕಟಾವು ಮಾಡಬಾರದು. ಈ ಕುರಿತು ಜಿಲ್ಲಾಡಳಿತ ಸೂಕ್ತ ನಿರ್ದೇಶನ ನೀಡಬೇಕು. ಈ ವರ್ಷ ಯಾವುದೇ ಕಾರ್ಖಾನೆಗಳು ಕಡಿಮೆ ಬೆಲೆ ನೀಡದೆ ಇತರೆ ಕಾರ್ಖಾನೆಗಳು ನೀಡುವ ಬೆಲೆ ನೀಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.
ಬೆಳೆಗಳು ಕಾಡು ಪ್ರಾಣಿಗಳಿಂದ ಬೆಳೆ ಹಾಳಾಗುತ್ತಿದೆ. ಅಧಿಕಾರಿಗಳು ಕೂಡಲೇ ಪ್ರಾಣಿಗಳ ರಕ್ಷಣೆ ಮಾಡಿ, ರೈತರ ಬೆಳೆ ಹಾಳಾಗದಂತೆ ನೋಡಿಕೊಳ್ಳಬೇಕು. ಫಸಲ್ ಬಿಮಾ ಯೋಜನೆ ಅಡಿ ರೈತರ ಖಾತೆಗೆ ಹಣ ಜಮೆಯಾದರೆ ಅದು ಸಾಲಕ್ಕೆ ಕಡಿತ ಮಾಡಬಾರದು ಎಂದು ಒತ್ತಾಯಿಸಿದರು.
ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಸೂಕ್ತ ಅನುದಾನ ನೀಡಿ ಪುನಶ್ಚೇತನಕ್ಕೆ ಶ್ರಮಿಸುವುದಾಗಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದರು. ಇದೀಗ ಅವರೇ ಮುಖ್ಯಮಂತ್ರಿ ಆಗಿದ್ದು, ಬಿಎಸ್‌ಎಸ್‌ಕೆ ಕಾರ್ಖಾನೆಗೆ ಕೂಡಲೇ ವಿಶೇಷ ಅನುದಾನ ನೀಡಿ ರೈತರ ನೇರವಿಗೆ ಧಾವಿಸಬೇಕು. ಈ ಕಾರ್ಖಾನೆ ನಡೆದರೆ ಜಿಲ್ಲೆಯ ಬಹುತೇಕ ರೈತರಿಗೆ ಅನುಕೂಲ ಎಂದು ತಿಳಿಸಿದರು.