ದುರ್ಯೋಧನ ಹೂಗಾರ
ಬೀದರ: 2018-19ನೇ ಸಾಲಿನ ವಿವಿಧ ಮುಂಗಾರು ಬೆಳೆ ನಷ್ಟ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿಮೆ ಹಣ ಬಿಡುಗಡೆಯಾಗಿದ್ದು, ರಾಜ್ಯದ ಒಟ್ಟು 7,95,351 ಲಕ್ಷ ರೈತರಿಗೆ 1557.59 ಕೋಟಿ ವಿಮಾ ಹಣ ಮಂಜೂರಾಗಿದೆ.
ತಾಂತ್ರಿಕ ಕಾರಣಗಳಿಂದ ಹಲವು ದಿನಗಳಿಂದ ಹಣ ಬಿಡುಗಡೆಯಾಗಿರಲಿಲ್ಲ. ಇದೀಗ ರಾಜ್ಯಾದ್ಯಂತ ಏಕಕಾಲಕ್ಕೆ ವಿಮೆ ಹಣ ಆಯಾ ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗುತ್ತಿದ್ದು, ರಾಜ್ಯದಲ್ಲೇ ವಿಜಯಪುರ ಜಿಲ್ಲೆಗೆ ಅತೀ ಹೆಚ್ಚು 224.96 ಕೋಟಿ ಅನುದಾನ ಮಂಜೂರಾಗಿದೆ. ಗದಗ ಜಿಲ್ಲೆಗೆ 224.79 ಕೋಟಿ, ಹಾವೇರಿ 160.50 ಕೋಟಿ, ರಾಯಚೂರು ಜಿಲ್ಲೆ 142.56 ಕೋಟಿ, ಕೊಪ್ಪಳ ಜಿಲ್ಲೆ 139.72 ಕೋಟಿ ಹಾಗೂ ಬೀದರ ಜಿಲ್ಲೆ 125.39 ಕೋಟಿ ವಿಮಾ ಹಣ ಮಂಜೂರಾಗಿದೆ.
ಕಳೆದೆರಡು ವರ್ಷಗಳ ಹಿಂದೆ ಬೀದರ ಜಿಲ್ಲೆ ಫಸಲ್ ಬಿಮಾ ಯೋಜನೆಯ ಹೆಚ್ಚಿನ ಲಾಭ ಪಡೆದುಕೊಂಡು ದೇಶದ ಗಮನ ಸೆಳೆದಿತ್ತು. ಇದೀಗ ಆರನೇ ಸ್ಥಾನ ಪಡೆದುಕೊಂಡಿದೆ. ಯೋಜನೆ ಲಾಭ ಪಡೆದುಕೊಂಡ ರೈತರ ಸಂಖ್ಯೆಗೆ ಹೋಲಿಸಿದರೆ ಬೀದರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ 1,29,903 ರೈತರು ಫಸಲ್ ಬಿಮಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಮುಂಗಾರು ಆರಂಭದಲ್ಲಿ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯ ನಡೆಸಿದರು. ನಂತರದ ದಿನಗಳಲ್ಲಿ ಮಳೆ ಕೊರತೆ ಎದುರಾದ ಹಿನ್ನೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದ ಬೆಳೆಗಳು ಹಾನಿಗೀಡಾಗಿತ್ತು. ಅಲ್ಲದೆ, ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಬೆಳೆ ವಿಮೆ ಪಾವತಿ ವಿಳಂಬವಾಗಿದ್ದು, ಇದೀಗ ರೈತರ ಖಾತೆಗೆ ವಿಮಾ ಹಣ ವರ್ಗಾವಣೆ ಶುರುವಾಗಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಲಾಭ ಪ್ರತಿಯೊಬ್ಬ ರೈತರು ಪಡೆದುಕೊಳ್ಳುವಂತೆ ಕಳೆದ ಮೂರು ವರ್ಷಗಳಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಕಳೆದೆರಡು ವರ್ಷಗಳ ಹಿಂದೆ ಬೀದರ ಜಿಲ್ಲೆಗೆ ಹೆಚ್ಚಿನ ವಿಮಾ ಹಣ ಬಿಡುಗಡೆಯಾಗಿತ್ತು. 2018 ಮುಂಗಾರು ಬೆಳೆ ಬಿತ್ತನೆ ಮಾಡಿ ನಷ್ಟ ಅನುಭವಿಸಿದ ಜಿಲ್ಲೆಯ 1.29 ಲಕ್ಷ ರೈತರಿಗೆ 125.39 ಕೋಟಿ ವಿಮೆ ಮಂಜೂರಾಗಿದೆ. ಈ ಯೋಜನೆ ರೈತರಿಗೆ ಆತ್ಮವಿಶ್ವಾಸ ಮೂಡಿಸುವ ಕಾರ್ಯ ಮಾಡುತ್ತಿದೆ. ಬಿತ್ತನೆ ಮಾಡಿ ಬೆಳೆ ಕೈಕೊಟ್ಟಾಗ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಫಲ ನೀಡುತ್ತಿದೆ. ಪ್ರತಿಯೊಬ್ಬ ರೈತರು ಬೆಳೆ ವಿಮೆ ಮಾಡಿಸಿ ಯೋಜನೆ ಲಾಭ ಪಡೆಯಬೇಕು.
•
ಭಗವಂತ ಖೂಬಾ,
ಸಂಸದ, ಬೀದರ