ದುರ್ಯೋಧನ ಹೂಗಾರ
ಬೀದರ: ಮೈತ್ರಿ ಸರ್ಕಾರದ ಮೊದಲ ಬಜೆಟ್‌ನಲ್ಲಿ ರೈತರ ಸಾಲಮನ್ನಾ ಯೋಜನೆಗೆ ಬಗ್ಗೆ ಸಿಎಂ ಕುಮಾರಸ್ವಾಮಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ವರ್ಷ ಸಮೀಪಿಸುತ್ತಿದ್ದರೂ ಯೋಜನೆಗೆ ಅರ್ಹರಾದ ರೈತರ ಪೈಕಿ ಅರ್ಧ ರೈತರ ಸಾಲವೂ ಮನ್ನಾ ಆಗಿಲ್ಲ.
ಬೀದರ ಜಿಲ್ಲೆಯ ಸಹಕಾರ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸಾಲ ಪಡೆದು, ಸರ್ಕಾರದ ನಿಯಮಗಳಂತೆ ಅರ್ಹರಾದ ಒಟ್ಟು 1,70,816 ರೈತರ ಪೈಕಿ 48,022 ರೈತರ ಸಾಲಮನ್ನಾ ಯೋಜನೆ ಲಾಭ ಪಡೆದುಕೊಂಡಿದ್ದಾರೆ. ಇನ್ನೂ 1,22,794 ರೈತರ ಸುಮಾರು 772.67 ಕೋಟಿ ಸಾಲ ಮನ್ನಾ ಆಗಬೇಕಿದೆ. ಮೇ 31ರವರೆಗೆ ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ 48,022 ರೈತರ ಸುಮಾರು 211.33 ಕೋಟಿ ಸಾಲ ಮನ್ನಾ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿದ್ದು, ಇನ್ನೂ ಲಕ್ಷಕ್ಕೂ ಅಧಿಕ ರೈತರು ಸಾಲಮನ್ನಾ ಯೋಜನೆ ಲಾಭಕ್ಕಾಗಿ ಕಾಯುತ್ತಿದ್ದಾರೆ.
ಜಿಲ್ಲೆಯ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಬೆಳೆ ಸಾಲ ಪಡೆದು ಸಾಲಮನ್ನಾ ಯೋಜನೆಗೆ ಅರ್ಹರಾದ ಒಟ್ಟು 53,200 ರೈತರಿಗೆ ಸರ್ಕಾರ ಒಟ್ಟು 480 ಕೋಟಿ ಹಣ ಪಾವತಿ ಮಾಡಬೇಕಿತ್ತು. ಈವರೆಗೆ 11,785 ರೈತರ ಒಟ್ಟು 65.51 ಕೋಟಿ ರೂ. ಸಾಲಮನ್ನಾ ಆಗಿದ್ದು, 414.49 ಕೋಟಿ ಸಾಲ ಮನ್ನಾ ಬಾಕಿ ಉಳಿದುಕೊಂಡಿದೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯಸ್ಥರು ತಿಳಿಸಿದ್ದಾರೆ. ಅದೇ ರೀತಿ ಜಿಲ್ಲೆಯ ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದು, ಸಾಲಮನ್ನಾ ಯೋಜನೆಗೆ ಅರ್ಹರಾದ ಒಟ್ಟು 1,17,616 ರೈತರಿಗೆ ಸರ್ಕಾರ 540 ಕೋಟಿ ಹಣ ಪಾವತಿ ಆಗಬೇಕು. ಆದರೆ ಈವರೆಗೆ 36,237 ರೈತರ 145.82 ಕೋಟಿ ಹಣ ಪಾವತಿ ಆಗಿದೆ. ಇನ್ನೂ 394.18 ಕೋಟಿ ಹಣ ರೈತರ ಸಾಲಮನ್ನಾ ಆಗಬೇಕಿದೆ.
ರೈತರ ಆಕ್ರೋಶ: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಹತ್ವಾಂಕಾಂಕ್ಷೆಯ ಯೋಜನೆ ಎಂದು ಪ್ರಚಾರ ಪಡೆಯುತ್ತಿದೆ. ಆದರೆ, ನಿಜವಾಗಿಯೂ ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಅನೇಕ ರೈತರು ಸಾಲ ಮನ್ನಾ ಯೋಜನೆಯಿಂದ ಹೊರಗುಳಿದಿದ್ದಾರೆ. ಹತ್ತಾರು ದಾಖಲೆಗಳನ್ನು ನೀಡಲು ಸಾಧ್ಯವಾಗದ ಅದೆಷ್ಟೋ ರೈತರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಸಾಲ ಪಡೆದ ರೈತರಿಗೆ ಬ್ಯಾಂಕ್‌ಗಳು ಮರು ಸಾಲ ನೀಡುತ್ತಿವೆ. ಆದರೆ, ಸಾಲ ಮನ್ನಾ ಆಗದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಮುಂಗಾರು ಬಂದಿದ್ದು, ಬೆಳೆ ಸಾಲಕ್ಕಾಗಿ ರೈತರು ಬ್ಯಾಂಕ್‌ಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣಗೊಂಡಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.