Advertisement

ಹಳ್ಳಿ ಮಕ್ಕಳಿಗೂ ಇಂಗ್ಲಿಷ್‌ ಮಾಧ್ಯಮ ಶಿಕ್ಷಣ

11:01 AM May 29, 2019 | Naveen |

ಬೀದರ: ಖಾಸಗಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳಲ್ಲಿ ದುಬಾರಿ ಶುಲ್ಕ, ಡೊನೇಷನ್‌ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಮುಂದಾಗಿದ್ದು, ಗಡಿ ಜಿಲ್ಲೆ ಬೀದರನಲ್ಲಿ 26 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದ 1ನೇ ತರಗತಿಗೆ ಇದೇ ಶೈಕ್ಷಣಿಕ ವರ್ಷದಿಂದ ಉಚಿತ ಪ್ರವೇಶ ಆರಂಭವಾಗುತ್ತಿದೆ.

Advertisement

ಖಾಸಗಿ ಇಂಗ್ಲಿಷ್‌ ಶಾಲೆಗಳ ದುಬಾರಿ ಶುಲ್ಕ ಭರಿಸಲಾಗದೆ ಅನೇಕ ಪೋಷಕರು ಅನಿವಾರ್ಯವಾಗಿ ಕನ್ನಡ ಮಾಧ್ಯಮಕ್ಕೆ ಸೇರಿಸುವುದು ಸಾಮಾನ್ಯವಾಗಿತ್ತು. ಇನ್ನೂ ಕೆಲ ಬಡವರು ತಮ್ಮ ಮಕ್ಕಳಿಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂಬ ಮಹದಾಸೆ ಹೊಂದಿದ್ದರೂ ಆರ್ಥಿಕ ಸಮಸ್ಯೆಯಿಂದ ತಮ್ಮ ಕನಸು ಕೈ ಬಿಡುವಂತಾಗಿತ್ತು. ಅಂಥವರ ಕನಸು ನನಸಾಗಿಲು ರಾಜ್ಯ ಸರಕಾರವೇ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುತ್ತಿರುವುದು ಬಡ ಪೋಷಕರಲ್ಲಿ ಹರುಷ ತಂದಿದೆ. ಸರಕಾರದ ನಿರ್ಧಾರದಿಂದಾಗಿ ಪ್ರಸಕ್ತ ಸಾಲಿನಿಂದಲೇ ಜಿಲ್ಲೆಯ 26 ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಬಾಗಿಲು ತೆರೆಯಲಿದ್ದು, ಅದಕ್ಕಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಅಗತ್ಯ ಸಿದ್ಧತೆ ನಡೆಸಿದ್ದಾರೆ.

ಶಾಲೆಗಳ ವಿವರ: ಔರಾದ ಪಟ್ಟಣದ ಸರ್ಕಾರಿ ಹಿರಿಯ ಶಾಲೆ, ಗಡಿ ಗ್ರಾಮ ಹಂಗರಗಾ ಸರ್ಕಾರಿ ಶಾಲೆ, ಕೌಡಗಾಂವ ಎಚ್ಪಿಎಸ್‌ ಹಾಗೂ ಆರ್‌ಎಂಎಸ್‌ಎ ಶಾಲೆ, ಕುಶನೂರ್‌(ಟಿ) ಸರ್ಕಾರಿ ಎಂಪಿಎಸ್‌, ಏಕಲಾರ್‌ ಗ್ರಾಮದ ಸರ್ಕಾರಿ ಎಚ್ಪಿಎಸ್‌ ಶಾಲೆ, ಕಲ್ಲಖೋರಾ ಸರ್ಕಾರಿ ಎಚ್ಪಿಎಸ್‌ ಶಾಲೆ, ಬಸವಕಲ್ಯಾಣ ನಗರದ ಸರ್ಕಾರಿ ಉರ್ದು ಬಾಲಕಿಯರ ಶಾಲೆ, ಮುಡಗಿ ಗ್ರಾಮದ ಎಂಪಿಎಸ್‌ ಸರ್ಕಾರಿ ಶಾಲೆ, ಭಾಲ್ಕಿ ಪಟ್ಟಣದ ಎಂಪಿಎಸ್‌ ಗಂಜ್‌ ಸರ್ಕಾರಿ ಶಾಲೆ, ಜೋಳದಾಬಕಾ ಗ್ರಾಮದ ಎಚ್.ಪಿ.ಎಸ್‌. ಮತ್ತು ಎಚ್.ಎಸ್‌. ಸರ್ಕಾರಿ ಶಾಲೆ, ಹಳೆಂಬರ್‌ ಸರ್ಕಾರಿ ಶಾಲೆ, ಹಳ್ಳಿಖೇಡ(ಕೆ) ಸರ್ಕಾರಿ ಪಿಯು ಕಾಲೇಜು ಕಟ್ಟಡ, ಚಿಲ್ಲರಗಿ ಗ್ರಾಮದ ಎಚ್ಪಿಎಸ್‌ ಸರ್ಕಾರಿ ಶಾಲೆ, ಚಿದ್ರಿ ಸರ್ಕಾರಿ ಉರ್ದು ಶಾಲೆ, ಬೀದರ್‌ ನಗರದ ರಾವ್‌ ತಾಲೀಮ್‌ ಸರ್ಕಾರಿ ಶಾಲೆ, ಜನವಾಡ ಸರ್ಕಾರಿ ಶಾಲೆ, ಮನಳ್ಳಿ ಸರ್ಕಾರಿ ಶಾಲೆ, ಮಂದಕನಳ್ಳಿ ಎಚ್ಪಿಎಸ್‌ ಸರ್ಕಾರಿ ಶಾಲೆ, ಅಮಲಾಪೂರ್‌ ಸರ್ಕಾರಿ ಶಾಲೆ, ಮನ್ನಾಎಖೇಳ್ಳಿ ಸರ್ಕಾರಿ ಶಾಲೆ, ಹಂದಿಕೇರಾ ಗ್ರಾಮದ ಸರ್ಕಾರಿ ಶಾಲೆ, ದುಬಲಗುಂಡಿ ಸರ್ಕಾರಿ ಶಾಲೆ, ಹುಮನಾಬಾದ ಪಟ್ಟಣದ ಎಚ್ಪಿಎಸ್‌ ಸರ್ಕಾರಿ ಶಾಲೆ, ಬೇಮಳ ಖೇಡಾ ಜಿಎಚ್ಎಸ್‌ ಸರ್ಕಾರಿ ಶಾಲೆಗಳಲ್ಲಿ ಈ ವರ್ಷ ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಆರಂಭವಾಗಲಿವೆ.

ಶಿಕ್ಷಕರಿಗೆ ವಿಶೇಷ ತರಬೇತಿ: ಇದೇ ಮೊದಲ ಬಾರಿಗೆ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಆಯಾ ಶಾಲೆ ಶಿಕ್ಷಕಕರೊಬ್ಬರಿಗೆ ಈ ಕುರಿತು ವಿಶೇಷ ತರಬೇತಿ ನೀಡಲಾಗುತ್ತಿದೆ. 1ನೇ ತರಗತಿ ಮಕ್ಕಳಿಗೆ ಸೂಕ್ತವಾಗಿ ಇಂಗ್ಲಿಷ್‌ ಮಾಧ್ಯಮದಲ್ಲಿ ಬೋಧಿಸುವ ಎಲ್ಲಾ ಕೌಶಲ್ಯಗಳನ್ನು ಶಿಕ್ಷಕರಿಗೆ ಅಗತ್ಯ ತರಬೇತಿಯೊಂದಿಗೆ ನೀಡಲಾಗಿದೆ. ಈಗಾಗಲೇ ಡಯಟ್ ಮೂಲಕ ಜಿಲ್ಲೆಯ 39 ಶಿಕ್ಷಕರಿಗೆ ತರಬೇತಿ ನೀಡಿದ್ದು, ಮೇ 29ರಿಂದ ಎಲ್ಲಾ ಕಡೆಗಳಲ್ಲಿ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಸದ್ಯ ಒಂದು ತರಗತಿ ಮಾತ್ರ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಒಬ್ಬ ಶಿಕ್ಷಕರು ಮಾತ್ರ ಆಯಾ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಮಾಹಿತಿ ನೀಡಿದ್ದಾರೆ.

ಶಾಲೆ ಆಯ್ಕೆಗೆ ಮಾನದಂಡವೇನು?: ಇತ್ತೀಚಿನ ದಿನಗಳಲ್ಲಿ ಸರಕಾರಿ ಶಾಲೆಗಳು ಎಂದರೆ ವಿವಿಧ ಕಾರಣಗಳಿಂದಾಗಿ ದೂರ ಹೋಗುವವರೆ ಹೆಚ್ಚು. ಆದರೂ, ಕಳೆದ ಎರಡ್ಮೂರು ವರ್ಷಗಳಿಂದ 1ನೇ ತರಗತಿಗೆ ಕನಿಷ್ಠ 30 ಮಕ್ಕಳ ದಾಖಲಾತಿ ಇರಬೇಕು. ಶಾಲೆ ಸುಸಜ್ಜಿತ ಕಟ್ಟಡ, ಮೂಲ ಸೌಕರ್ಯ ಹೊಂದಿರಬೇಕು. ಅಂತಹ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್‌ ಶಾಲೆ ಆರಂಭಿಸಲಾಗುತ್ತಿದೆ. ಅದರೊಂದಿಗೆ ಇಂಗ್ಲಿಷ್‌ ಶಾಲೆಗೆ ಮಕ್ಕಳನ್ನು ಆಕರ್ಷಿಸಲು ಈಗಾಗಲೇ ಸುಣ್ಣ- ಬಣ್ಣದೊಂದಿಗೆ ಶಾಲೆಯನ್ನು ಸಿದ್ಧಗೊಳಿಸುವಂತೆ ಆಯಾ ಶಾಲೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

ವಿದ್ಯಾರ್ಥಿಗಳಿಗೆ ಸೌಲಭ್ಯಗಳು: ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಸಕಾರದಿಂದ ಉಚಿತವಾಗಿ ಬಟ್ಟೆ, ರಾಜ್ಯ ಸರ್ಕಾರ ಇಂಗ್ಲಿಷ್‌ ಮಾಧ್ಯಮದ ಪಠ್ಯಪುಸ್ತಕ, ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಡಿ ಹಾಲು, ಮೊದಲಾದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಕಲಿಕಾ ಗುಣಮಟ್ಟ ವೃದ್ಧಿಸುವುದಕ್ಕೆ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಪೋಷಕರು ಕೂಡ ಇಂಗ್ಲಿಷ್‌ ವ್ಯಾಮೋಹದಿಂದ ಹೊರತಾಗಿಲ್ಲ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿಯೂ ಹೆಚ್ಚಾಗುವ ನೀರಿಕ್ಷೆ ಇದೆ ಎಂಬುದು ಶಿಕ್ಷಣ ಇಲಾಖೆ ಅಧಿಕಾರಿಗಳ ಅಭಿಪ್ರಾಯವಾಗಿದೆ.

30 ವಿದ್ಯಾರ್ಥಿಗಳಿಗೆ ಅವಕಾಶ: ಸದ್ಯ ಸರ್ಕಾರ ಪ್ರಾರಂಭಿಸುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಬ್ಬ ನುರಿತ ಶಿಕ್ಷಕರು ಕಾರ್ಯ ನಿರ್ವಹಿಸಲಿದ್ದಾರೆ. ಒಂದು ವರ್ಷಕ್ಕೆ ಗರಿಷ್ಠ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಮೊದಲು ಬಂದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವ ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಶಾಲಾ ಅವಧಿ ಇರಲ್ಲಿದೆ. ಶಾಲೆಗೆ ಯಾವುದೇ ಶುಲ್ಕ ಭರಿಸುವ ಅವಶ್ಯಕತೆ ಇಲ್ಲ. ಸರ್ಕಾರದ ಎಲ್ಲಾ ಯೋಜನೆಗಳ ಲಾಭ ಆಂಗ್ಲ ಮಾಧ್ಯಮ ಮಕ್ಕಳಿಗೂ ದೊರೆಯಲಿದೆ. ಪಠ್ಯದ ಜೊತೆಗೆ ವಿವಿಧ ಕಲಿಕಾ ವಿಧಾನಗಳನ್ನು ಮಕ್ಕಳಿಗೆ ಕಲಿಸುವ ಮೂಲಕ ಆಂಗ್ಲ ಭಾಷೆಯನ್ನು ಅತಿ ಸರಳವಾಗಿ ಕಲಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಸದ್ಯ ಸರ್ಕಾರಿ ಶಾಲೆಯ ಒಂದು ಕೋಣೆಯಲ್ಲಿ ತರಗತಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ದಾಖಲಾತಿಗೆ ಜನ ಜಾಗೃತಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಮಾಡಿಸುವಂತೆ ಆಯಾ ಶಾಲೆಗಳ ಎಸ್‌ಡಿಎಂಸಿ ಸದಸ್ಯರು, ಶಾಲಾ ಸಿಬ್ಬಂದಿಗಳು ಗ್ರಾಮದ ಪ್ರಮುಖರೊಂದಿಗೆ ವಿವಿಧ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಜಿಲ್ಲೆಯಲ್ಲಿ ನಡೆಯುತ್ತಿದೆ. ಖಾಸಗಿ ಶಾಲೆಗಳು ಮುದ್ರಿಸುವ ಕರ ಪತ್ರಗಳಂತೆ ಈ ವರ್ಷ ಅನೇಕ ಸರ್ಕಾರಿ ಶಾಲೆಗಳು ಕೂಡ ಕರ ಪತ್ರ, ಬ್ಯಾನರ್‌ಗಳನ್ನು ಮುದ್ರಿಸಿ ಜಾಗೃತಿ ಕಾರ್ಯ ಮಾಡುತ್ತಿವೆ. ಕೆಲವು ಕಡೆಗಳಲ್ಲಿ ಎತ್ತಿನ ಬಂಡೆಯಲ್ಲಿ ಜಾಗೃತಿ ಮೂಡಿಸಿದರೆ, ಇನ್ನೊಂದು ಕಡೆಗಳಲ್ಲಿ ವಾಹನಗಳಲ್ಲಿ ಧ್ವನಿ ವರ್ಧಕಗಳನ್ನು ಬಳಸಿ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲಿಸುವಂತೆ ಮನವರಿಕೆ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಜನ ಅಭಿಪ್ರಾಯ: ರಾಜ್ಯ ಸರ್ಕಾರ ದೆಹಲಿ ಮಾದರಿಯ ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯಲು ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು, ಶಾಲೆಗಳಲ್ಲಿ ಶಿಕ್ಷಣ ಹೇಗೆ ನೀಡುತ್ತಾರೆ ಎಂಬುದನ್ನು ಜನ ಕಾದು ನೋಡುತ್ತಿದ್ದಾರೆ. ಮೊದಲ ವರ್ಷದಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಶಿಕ್ಷಣದಲ್ಲಿ ಉತ್ತಮ ಪ್ರತಿಕ್ರಿಯೆಗಳು ಬಂದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿಯೇ ದಾಖಲಾತಿ ಮಾಡಬೇಕು ಎಂಬ ಚರ್ಚೆಗಳು ಕೇಳಿ ಕೇಳಿಬರುತ್ತಿದ್ದು, ಖಾಸಗಿ ಶಾಲೆಗಳ ಡೋನೇಷನ್‌ ಹಾವಳಿಗೆ ಬ್ರೇಕ್‌ ಬೀಳಲಿದೆ ಎಂಬ ನಿರೀಕ್ಷೆಯಲ್ಲಿ ಪಾಲಕರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next