Advertisement

ಸುಗ್ಗಿ ಹಬ್ಬ ಎಳ್ಳಮಾವಾಸ್ಯೆ ಸಂಭ್ರಮ

12:55 PM Dec 26, 2019 | Naveen |

ಬೀದರ: ತಲೆ ಮೇಲೆ ಭಕ್ಷ್ಯ ಭೋಜನದ ಬುಟ್ಟಿ ಹೊತ್ತು ಹೊಲದತ್ತ ಹೆಜ್ಜೆ ಹಾಕಿದ ರೈತ ಕುಟುಂಬಗಳು. “ಓಲಗ್ಯಾ ಓಲಗ್ಯಾ ಚಲ್ಲಂ ಪೋಲಗ್ಯಾ’ ಎಂದು ಕೂಗುತ್ತ ಭೂರಮೆಗೆ ಚರಗ ಚೆಲ್ಲಿ ಭೂತಾಯಿಗೆ ಪ್ರಾರ್ಥಿಸಿದ ಅನ್ನದಾತರು.. ಬಂಧು- ಬಳಗ, ಸ್ನೇಹಿತರಿಗೆ ದಾಸೋಹ ಸೇವೆ ಮಾಡಿದ ನೇಗಿಲ ಯೋಗಿಗಳು!

Advertisement

ಇದು ಜಿಲ್ಲಾದ್ಯಂತ ಬುಧವಾರ ಎಳ್ಳಮಾವಾಸ್ಯೆ ಹಿನ್ನೆಲೆಯಲ್ಲಿ ಕಂಡು ಬಂದ ದೃಶ್ಯ. ಅನ್ನದಾತರು ಆಚರಿಸುವ ವಿಶಿಷ್ಟ ಹಬ್ಬ ಇದಾಗಿದ್ದು, ಜಾತಿ, ಮತ ಎಂಬ ಭೇದ- ಭಾವ ಇಲ್ಲದೆ ಹಬ್ಬವನ್ನು ಸೌಹಾರ್ದತೆಯ ಸಂಕೇತವಾಗಿ ಆಚರಿಸಲಾಯಿತು. ಎಲ್ಲೆಡೆ ಸುಗ್ಗಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಗುರುವಾರ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಬುಧವಾರವೇ ಹಬ್ಬವನ್ನು ಸಡಗರದಿಂದ ನಡೆಸಲಾಯಿತು.

ಎಳ್ಳಮಾವಾಸ್ಯೆ ಹಬ್ಬ ಭೂತಾಯಿಯ ಆರಾಧನೆ ಪ್ರತೀಕವಾಗಿದೆ. ಪ್ರತಿ ಹಬ್ಬಗಳನ್ನು ಮನೆಯಲ್ಲಿ ಸಿಹಿ ಭಕ್ಷ್ಯಗಳನ್ನು ಸಿದ್ಧಪಡಿಸಿ ಸವಿದು ಆಚರಿಸಿದರೆ, ಎಳ್ಳ ಅಮಾವಾಸ್ಯೆ ದಿನದಂದು ಮಾತ್ರ ಹೊಲದಲ್ಲಿ ಆಚರಿಸುವುದು ವಿಶೇಷ. ಎಳ್ಳ ಅಮವಾಸ್ಯೆ ಹಬ್ಬ ಗ್ರಾಮೀಣ ಭಾಗದ ಸೊಗಡನ್ನು ಇಂದಿಗೂ ಜೀವಂತವಾಗಿಡುತ್ತಿದೆ.

ಭೂತಾಯಿ ಪೂಜಿಸಿ ಚರಗಾ ಚೆಲ್ಲಿದರು: ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಬೆಳಗ್ಗೆ ಬುಟ್ಟಿಯಲ್ಲಿ ತುಂಬಿಕೊಂಡು ರೈತರು ಹೊಲಗಳಿಗೆ ಬಂದು, ಅಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸುವ ಗುಡಿಸಿಲಿಗೆ ಮತ್ತು ಪಾಂಡವರಿಗೆ ಪೂಜೆ ಸಲ್ಲಿಸಿದರು. ನಂತರ ಜೋಳದ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಪೈರುಗಳ ಮಧ್ಯೆ ನಿಂತು ಚರಗಾ ಚೆಲ್ಲುವ ಮೂಲಕ ಭೂತಾಯಿಗೆ ನಮಿಸುತ್ತ ಒಳ್ಳೆಯ ಬೆಳೆ ಕೊಡಮ್ಮಾ ಎಂದು ಕಾಯಕ ಜೀವಿಗಳು ಪ್ರಾರ್ಥಿಸಿದರು.

ಇತರ ಹಬ್ಬಗಳಿಗಿಂತ ಎಳ್ಳ ಅಮಾವಾಸ್ಯೆ ವಿಶೇಷವಾಗಿರುವಂತೆ ಮಾಡುವ ಭಕ್ಷ್ಯ ಭೋಜನಗಳಲ್ಲೂ ಸಹ ಭಿನ್ನ. ಈ ಹಬ್ಬಕ್ಕಾಗಿ ವಿವಿಧ ಕಾಳು ಮತ್ತು ತರಕಾರಿಗಳಿಂದ ತಯಾರಿಸಿದ ಭಜ್ಜಿ ವಿಶೇಷ. ಜತೆಗೆ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಬಗೆ ಬಗೆಯ ಅನ್ನ, ಅಂಬಲಿ ಮತ್ತು ಹುಗ್ಗಿ ಸೇರಿದಂತೆ ವಿವಿಧ ಭಕ್ಷ್ಯ ಅಲ್ಲಿರುತ್ತದೆ. ಬಂಧು- ಬಾಂಧವರು ಹಸಿರು ಪರಿಸರದ ಮಧ್ಯ ಕುಳಿತು ಊಟ ಸವಿದರು.

Advertisement

ಜೋಕಾಲಿ, ಪತಂಗ ಹಾರಾಟ: ಎಳ್ಳ ಅಮಾವಾಸ್ಯೆ ಹಬ್ಬ ಕೇವಲ ವಿಭಿನ್ನ ಊಟ ಮಾಡಲು ಮಾತ್ರ ಸೀಮಿತವಲ್ಲ. ಹೊಲದಲ್ಲಿ ಬೃಹತ್‌ ಮರಗಳಿಗೆ ಜೋಕಾಲಿ ಹಾಕಿ ಆಡುವುದು ಮತ್ತು ಕೆಲವೆಡೆ ಪತಂಗ ಹಾರಿಸುವುದು ಈ ಹಬ್ಬದ ಮತ್ತೂಂದು ವಿಶೇಷ. ಮಕ್ಕಳು ಸೇರಿದಂತೆ ಮಹಿಳೆಯರು ಮತ್ತು ಹಿರಿಯರು ಜೋಕಾಲಿ ಆಡುವ ಮೂಲಕ ಸಂತಸ ಪಟ್ಟರು.

ಉದ್ಯಾನವನಗಳಲ್ಲಿ ಜನಸ್ತೋಮ
ಇಂದಿನ ಯಾಂತ್ರಿಕಮಯ ಜೀವನದಲ್ಲಿ ಒತ್ತಡಗಳ ಮಧ್ಯೆ ಕಾಲ ಕಳೆಯುವ ನಗರ ವಾಸಿಗರು ಎಳ್ಳ ಅಮಾವಾಸ್ಯೆ ಹಬ್ಬದಂದು ತಮ್ಮ ತಮ್ಮ ಊರುಗಳಿಗೆ ಅಥವಾ ಸಂಬಂ ಧಿಕರ ಜಮೀನುಗಳಿಗೆ ತೆರಳುತ್ತಾರೆ. ಇನ್ನೂ ಕೆಲವರು ನಗರದ ಪ್ರಸಿದ್ಧ ದೇವಸ್ಥಾನ ಮತ್ತು ಉದ್ಯಾನವನ, ವಿಹಾರಧಾಮಕ್ಕೆ ಹೋಗಿ ಊಟ ಮಾಡಿ ಹಬ್ಬ ಆಚರಿಸಿದರು. ಇಂಥ ಹಬ್ಬಗಳು ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next