ಬೀದರ: ಕರ್ನಾಟಕದ ಇತಿಹಾಸದಲ್ಲಿ ಸ್ವಂತ ಪ್ರತಿಭೆಯಿಂದ ಉನ್ನತ ಸ್ಥಾನಕ್ಕೆ ತಲುಪಿದ್ದ ಅರಸು ಅವರ ಜೀವನ ಎಲ್ಲರಿಗೂ ದಾರಿದೀಪವಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಗೀತಾ ಪಂಡಿತರಾವ್ ಚಿದ್ರಿ ಹೇಳಿದರು.
ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 104ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೋಷಿತರು ಮತ್ತು ಸಮಾಜದ ಅತ್ಯಂತ ಕೆಳಸ್ತರದ ಜನರಿಗೆ ಶಕ್ತಿ ನೀಡಲು ಯತ್ನಿಸಿದ್ದ ಡಿ.ದೇವರಾಜ ಅರಸು ಅವರು ಸಮಾನತೆಯ ಹರಿಕಾರರು. ಸಮಾಜದ ಏಳ್ಗೆಗೆ ತೊಡಕಾಗಿದ್ದ ಅಸಮಾನತೆ, ಜಾತಿ ವ್ಯವಸ್ಥೆ, ಮಲ ಹೊರುವ ಪದ್ಧತಿಯ ನಿರ್ಮೂಲನೆಗೆ ಅಮೋಘ ಪಾತ್ರ ವಹಿಸಿದ್ದರು. ಭೂ ಸುಧಾರಣೆ ಕಾಯ್ದೆಯಲ್ಲಿ ಬದಲಾವಣೆ ತಂದು ಬಡವರಿಗೂ ಭೂಮಿ ಸಿಗುವಂತೆ ಮಾಡಿದ್ದರು. ಅರೆ ಸರ್ಕಾರಿ ನೌಕರರಿಗೆ ಬ್ಯಾಂಕ್ ಮೂಲಕ ಸಂಬಳ ಸಿಗುವಂತೆ ಮಾಡಿದವರು. ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳನ್ನು ಸ್ಥಾಪಿಸುವ ಮೂಲಕ ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬಿದ ಮೇರು ವ್ಯಕ್ತಿಯಾಗಿದ್ದರು ಎಂದು ಹೇಳಿದರು. ಮೈಸೂರು ಎಂದು ಕರೆಯಲಾಗುತ್ತಿದ್ದ ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿರುವುದು, ಹಾವನೂರು ಆಯೋಗ ರಚನೆ, ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಮಾಡಿದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ್ ದೇವಮಾನೆ ಪ್ರಾಸ್ತಾವಿಕ ಮಾತನಾಡಿ, ಡಿ.ದೇವರಾಜ ಅರಸು ಅವರು ಸಕಲ ಜೀವಾತ್ಮರಿಗೆ ಲೇಸು ಬಯಸುವವನು ಶರಣ ಎಂಬ ಸಿದ್ಧಾಂತದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎಂಬ ಆಶಯದೊಂದಿಗೆ 1977ರಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಸ್ಥಾಪಿಸಿದ್ದರು ಎಂದು ಹೇಳಿದರು.
ಇಲಾಖೆಯಿಂದ ಹಿಂದುಳಿದ ವರ್ಗದವರಿಗೆ ಸಾಕಷ್ಟು ಅನುಕೂಲತೆಗಳು ಸಿಗುತ್ತಿವೆ. ವಿದ್ಯಾಭ್ಯಾಸಕ್ಕೆ ನೆರವಾಗಲು ಸಾಕಷ್ಟು ವಸತಿ ನಿಲಯಗಳನ್ನು ತೆರೆಯಲಾಗಿದೆ. ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ, ಶುಲ್ಕ ಮರುಪಾವತಿ, ವಸತಿನಿಲಯ ಸಿಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯ ಮೂಲಕ ಹಣಕಾಸು ನೆರವು, ವಿದೇಶ ವ್ಯಾಸಂಗಕ್ಕಾಗಿ ನೆರವು ಹೀಗೆ ಹಲವಾರು ಯೋಜನೆಗಳು ಚಾಲ್ತಿಯಲ್ಲಿವೆ. ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸಲು ನೆರವಾಗಲು ಜಿಲ್ಲೆಯಲ್ಲಿ ಎರಡು ಹೊಲಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.
ಕರ್ನಾಟಕ ಕಾಲೇಜು ನಿವೃತ್ತ ಪ್ರಾಂಶುಪಾಲ ಗಂಗು ವಿಜಯಕುಮಾರ ವಿಶೇಷ ಉಪನ್ಯಾಸ ನೀಡಿ, ಡಿ.ದೇವರಾಜ ಅರಸು ಅವರು 1915ರ ಆಗಸ್ಟ್ 20ರಂದು ಮೈಸೂರು ಜಿಲ್ಲೆಯಲ್ಲಿ ಜನಿಸಿದ್ದರು. ಲೆನಿನ್, ಡಾ|ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿಧೀಜಿ, ರಾಮ ಮನೋಹರ ಲೋಹಿಯಾ ಅವರಿಂದ ಪ್ರಭಾವಿತರಾಗಿದ್ದ ಇವರು ತಮ್ಮ ಅಧಿಕಾರದ ಅವಯಲ್ಲಿ ಶೋಷಣೆಗೆ ಒಳಗಾದವರು ಮತ್ತು ಸಮಾಜದಲ್ಲಿ ಕೆಳಸ್ತತರದಲ್ಲಿದ್ದ ಜನರನ್ನು ಮೇಲಕ್ಕೆ ತರಲು ಪ್ರಯತ್ನಿಸಿದ್ದರು ಎಂದು ಹೇಳಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಶೇಖರಬಾಬು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ನಾಗಮಣಿ, ತಾಲೂಕು ಅಧಿಕಾರಿ ಅಶೋಕ, ಗೋಕುಲ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಚೆನ್ನಬಸವ ಹೆಡೆ ನಿರೂಪಿಸಿದರು.