Advertisement

ಜಿಲ್ಲಾಡಳಿತ ಕಟ್ಟಡದಲ್ಲಿ ಬಿರುಕು

10:11 AM Aug 17, 2019 | Naveen |

ಬೀದರ: ಜಿಲ್ಲಾಧಿಕಾರಿ ಕಚೇರಿಯ ಕಟ್ಟಡ ಶಿಥಿಲಗೊಂಡಿದ್ದರಿಂದ ನಗರದಲ್ಲಿ ನಿರ್ಮಿಸಲಾದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಕಟ್ಟಡಕ್ಕೆ ಶೀಘದ್ರಲ್ಲಿಯೇ ತಾತ್ಕಾಲಿಕ ಸ್ಥಳಾಂತರಿಸಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ನೆಲಮಹಡಿ ಹಾಗೂ ಮೊದಲನೇ ಮಹಡಿಯ ಪಶ್ಚಿಮ ಭಾಗದಲ್ಲಿ, ಅಪರ ಜಿಲ್ಲಾಧಿಕಾರಿಗಳ ಕೊಠಡಿ ಸೇರಿದಂತೆ ಅಕ್ಕಪಕ್ಕದ ಭಾಗದಲ್ಲಿ ಹೆಚ್ಚು ಶಿಥಿಲತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಲೋಕೋಪಯೋಗಿ ಇಲಾಖೆ ಇಂಜಿನೀಯರ ಅವರಿಗೆ ಪತ್ರ ಬರೆದು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿತ್ತು. ಆ.8ರಂದು ಕಾರ್ಯನಿರ್ವಾಹಕ ಇಂಜಿನಿಯರ್‌ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನೀರ ಅವರು ಖುದ್ದು ಜಿಲ್ಲಾಡಳಿತ ಕಟ್ಟಡಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಕಟ್ಟಡದಲ್ಲಿನ ತಾಂತ್ರಿಕ ಸಮಸ್ಯೆ ಹಾಗೂ ಶಿಥಿಲಗೊಂಡಿರು ಕುರಿತು ವರದಿ ಕೂಡ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ ಕಟ್ಟಡದ ಕೆಲ ಭಾಗವನ್ನು ತೆರವುಗೊಳಿಸುವ ಸಂದರ್ಭದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದಲ್ಲಿ ಪೂರ್ಣ ಕಟ್ಟಡ ತರೆವುಗೊಳಿಸುವ ಸಾಧ್ಯತೆ ಕೂಡ ಇದೆ ಎಂಬುದು ಅಧಿಕಾರಿಗಳಿಂದ ತಿಳಿದುಬಂದಿದೆ. ಅಲ್ಲದೆ, ಜಿಲ್ಲಾಡಳಿತದ ವಿವಿಧ ಇಲಾಖೆಗಳ ದೈನಂದಿನ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ತೆರವುಗೊಳಿಸುವುದು ಸುರಕ್ಷತೆ ಹಿತದೃಷ್ಟಿಯಿಂದ ಸೂಕ್ತ ಎಂದು ಕೂಡ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.

ನೆಲಮಹಡಿಯ ಸಹಾಯಕ ಆಯುಕ್ತರ ಕೊಠಡಿಯಲ್ಲಿ ಬಿರುಕು ಬಿಟ್ಟಿರುವುದು ಕಂಡು ಬಂದಿದೆ. ಆ ಭಾಗವನ್ನು ಕೂಡ ತೆರವುಗೊಳಿಸುವುದು ಅನಿವಾರ್ಯ ಎಂದು ಕೂಡ ಪತ್ರದಲ್ಲಿ ವಿವರಿಸಲಾಗಿದೆ. ಅಲ್ಲದೆ, ಕಲಬುರಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿ ಸರ್ಕಾರದ ಮಾನ್ಯತೆ ಪಡೆದುಕೊಂಡು ತಾಂತ್ರಿಕ ಪರಿಶೀಲನೆಗೆ ಒಳಪಡಿಸಿ ವಿವರವಾದ ವರದಿ ಪಡೆಯಲು ಕೂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗಿರುವುದು ತಿಳಿದುಬಂದಿದೆ.

ಕಟ್ಟಡದಲ್ಲಿ ಶಿಥಿಲತೆ ಕಂಡು ಬಂದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಡಳಿತ ನಗರದ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಕಟ್ಟಡದಲ್ಲಿ ತಾತ್ಕಾಲಿಕ ಕಚೇರಿ ಕಾರ್ಯಗಳು ನಡೆಸಲು ಪರವಾನಗಿ ನೀಡಬೇಕೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸರ್ಕಾರದಿಂದ ಮಾನ್ಯತೆ ದೊರೆತ ನಂತರ ಜಿಲ್ಲಾಡಳಿತ ಕಚೇರಿಯಲ್ಲಿ ನಡೆಯುವ ವಿವಿಧ ಕಚೇರಿಗಳ ಕಾರ್ಯಗಳು ಆಸ್ಪತ್ರೆಯಲ್ಲಿ ನಡೆಯಲಿವೆ.

Advertisement

ಜಿಲ್ಲಾಧಿಕಾರಿಗಳ ಕಚೇರಿಯ ಪಶ್ಚಿಮ ಭಾಗದಲ್ಲಿ ಶಿಥಿಲತೆ ಕಂಡು ಬಂದಿದೆ. ಅಲ್ಲದೆ, ಕೆಲ ಭಾಗಗಳಲ್ಲಿ ಬಿರುಕು ಬಿಟ್ಟಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರಬರೆದು, ಕಟ್ಟಡ ಸ್ಥಿತಿ ಕುರಿತು ವರದಿ ನೀಡುವಂತೆ ತಿಳಿಸಲಾಗಿದೆ. ಅಧಿಕಾರಿಗಳು ಕಟ್ಟಡ ಪರಿಶೀಲನೆ ನಡೆಸಿದ್ದು, ಮೊದಲ ಹಾಗೂ ನೆಲ ಮಹಡಿಯಲ್ಲಿ ಸಮಸ್ಯೆ ಕಂಡುಬಂದಿದ್ದು, ತೆರವುಗೊಳಿಸುವುದು ಸೂಕ್ತ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ನಿರ್ಮಾಣಗೊಂಡ ಹೊಸ ಆಸ್ಪತ್ರೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡು ಕೆಲಸ ನಿರ್ವಹಿಸುವ ಹಿನ್ನೆಲೆಯಲ್ಲಿ ಕಟ್ಟಡ ನೀಡುವಂತೆ ಪತ್ರ ಬರೆಯಲಾಗಿದೆ. ಸರ್ಕಾರದ ಆದೇಶ ಬಂದ ನಂತರ ಮುಂದು ವರಿಯಲಾಗುವುದು. ಈ ಸ್ಥಳದಲ್ಲಿ ಮತ್ತೆ ಹೊಸ ಕಟ್ಟಡ ಕಟ್ಟುವುದು ಸೂಕ್ತ. ಅಲ್ಲದೆ ಮುಂದಿನ ಕೆಲ ದಿನಗಳಲ್ಲಿ ಜಿಲ್ಲಾಡಳಿತದ ಸಂಕೀರ್ಣ ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎಂಬುದರ ಕುರಿತು ಸಭೆ ನಡೆಸಿ ಅಂತಿನ ನಿರ್ಧಾರ ತೆಗೆದುಕೊಳ್ಳಲಾಗುವುದು.
ಡಾ| ಎಚ್.ಆರ್‌. ಮಹಾದೇವ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next