Advertisement

ಖಾಸಗಿ ವೈದ್ಯರಿಗೂ ಕೊರೊನಾ ಭೀತಿ 

03:31 PM Apr 07, 2020 | Naveen |

ಬೀದರ: ದೇಶದಲ್ಲಿ ತಲ್ಲಣ ಸೃಷ್ಟಿಸಿರುವ ಕೊರೊನಾ ಸೋಂಕು ಈಗ ವೈದ್ಯರ ಸೇವೆ ಮೇಲೂ ಪರಿಣಾಮ ಬೀರುತ್ತಿದೆ. ವೈರಸ್‌ ಭೀತಿಗೆ ಜಿಲ್ಲೆಯಾದ್ಯಂತ
ಬಹುತೇಕ ಖಾಸಗಿ ಆಸ್ಪತ್ರೆಗಳು ಬಂದ್‌ ಆಗಿದ್ದು, ರೋಗಿಗಳು ಪರದಾಡುವಂತಾಗಿದೆ. ಕ್ಲಿನಿಕ್‌ಗಳನ್ನು ತೆರೆಯದಿದ್ದರೆ ಪರವಾನಗಿ ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿಗಳು ಎಚ್ಚರಿಸಿದರೂ ವೈದ್ಯರು ಕ್ಯಾರೆ ಎನ್ನುತ್ತಿಲ್ಲ.

Advertisement

ಮಹಾಮಾರಿ ಸೋಂಕು ಹರಡುವ ಭೀತಿ ಮತ್ತು ಲಾಕ್‌ಡೌನ್‌ ಹೇರಿಕೆ ಹಿನ್ನೆಲೆಯಲ್ಲಿ ಬಹುತೇಕ ಖಾಸಗಿ ಕ್ಲಿನಿಕ್‌ಗಳು ಬಂದ್‌ ಆಗಿವೆ. ಕೆಲವೆಡೆ ನರ್ಸಿಂಗ್‌
ಹೋಮ್‌ಗಳು ಮಾತ್ರ ತರೆದಿವೆ. ತುರ್ತು ಚಿಕಿತ್ಸೆ ನೀಡುತ್ತೇವೆ ಎಂದೆನ್ನುವ ವೈದ್ಯರು ವಾಸ್ತವವಾಗಿ ಗೇಟಿಗೆ ಬೀಗ ಹಾಕಿದ್ದಾರೆ. ಇದರಿಂದ ಜನ ಸಾಮಾನ್ಯರು ಆರೋಗ್ಯ ಸೇವೆ ಸಿಗದೆ ಕಂಗಾಲಾಗಿದ್ದಾರೆ. ಸದ್ಯ ಬೇಸಿಗೆ ದಿನಗಳಿದ್ದು, ದಿನ ಕಳೆದಂತೆ ತಾಪಮಾನ ಏರಿಕೆಯಾಗುತ್ತಿದೆ. ಉಷ್ಣಾಂಶದಿಂದ ಮಕ್ಕಳಲ್ಲಿ ಜ್ವರ, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿವೆ. ವಯಸ್ಕರು ರಕ್ತದೊತ್ತಡ, ಮಧುಮೇಹ, ಕಣ್ಣಿನ ಸಮಸ್ಯೆ, ಸ್ನಾಯು ನೋವು ಸೇರಿದಂತೆ ಸಾಮಾನ್ಯ ರೋಗಗಳಿಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದು, ಚಿಕಿತ್ಸೆಗಾಗಿ ಹೋದರೆ ಬಾಗಿಲು ಹಾಕಿದ್ದನ್ನು ನೋಡಿ ವಾಪಸ್ಸು ಬರುವಂತಾಗಿದೆ. ಇನ್ನು ಕೆಲವರು ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ಚಿಕಿತ್ಸೆಯ ಸೇವೆಯಲ್ಲಿ ಸರ್ಕಾರಿ ವೈದ್ಯರು ತಮ್ಮನ್ನು ತೊಡಗಿಸಿಕೊಂಡಿದ್ದರಿಂದ ಆರೋಗ್ಯ ಸೇವೆ
ಪಡೆಯುವವರು ಗಂಟೆಗಟ್ಟಲೇ ಕಾಯುವಂತಾಗಿದೆ.

ಹೆಚ್ಚಿದ ಆತಂಕ: ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಕಾರಣ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಿಂಜರಿಯುತ್ತಿದ್ದಾರೆ. ಆಸ್ಪತ್ರೆಗೆ ಕೆಲವೊಮ್ಮೆ ಕುಟುಂಬದ ಮೂರ್‍ನಾಲ್ಕು ಜನರು ಬರುತ್ತಾರೆ. ಮುಂಜಾಗ್ರತಾ ಕ್ರಮ ಅನುಸರಿಸುವುದಿಲ್ಲ. ಅವರಲ್ಲಿ ಕೊರೊನಾ ಸೋಂಕಿತರು ಯಾರು ಎಂದು ಹೇಳಲು
ಸಾಧ್ಯವಿಲ್ಲ. ಈಚೆಗೆ ಕಲಬುರ್ಗಿಯಲ್ಲಿ ಮೃತಪಟ್ಟ ವೃದ್ಧನಿಗೆ ಚಿಕಿತ್ಸೆ ನೀಡಿದ್ದ ವೈದ್ಯನಿಗೂ ಸೋಂಕು ತಗುಲಿದ ಪ್ರಕರಣ ಬಳಿಕ ವೈದ್ಯರಲ್ಲಿ ಆತಂಕ ಹೆಚ್ಚಿಸಿದೆ. ಅಷ್ಟೇ ಅಲ್ಲ, ಜನರೂ ಲಾಕ್‌ಡೌನ್‌ ಕಾರಣ ಬರುತ್ತಿಲ್ಲ. ಜತೆಗೆ ಆಸ್ಪತ್ರೆಗಳ ಸಿಬ್ಬಂದಿಯೂ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬೀದರ ನಗರದಲ್ಲಿ ಸುಮಾರು 50 ಮತ್ತು ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಿವೆ. ಕೊರೊನಾ ಸೋಂಕು ಹರಡುವ ಭೀತಿಯಿಂದಾಗಿ
ಬೆರಳಣಿಕೆಯಷ್ಟು ಆಸ್ಪತ್ರೆಗಳು ಮಾತ್ರ ತೆಗೆದಿವೆ. ಕೆಲವೆಡೆ ಒಪಿಡಿ ಮಾತ್ರ ಬಂದ್‌ ಮಾಡಿದ್ದರೆ, ಇನ್ನು ಕೆಲ ಕ್ಲಿನಿಕ್‌ಗಳನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ.
ಹೀಗಾಗಿ ಸಾಮಾನ್ಯ ರೋಗದಿಂದ ಬಳಲುತ್ತಿರುವವರು ಮೆಡಿಕಲ್‌ ಅಂಗಡಿಗಳಲ್ಲಿ ನೇರವಾಗಿ ಮಾತ್ರೆ ಪಡೆದು ತಾತ್ಕಾಲಿಕ ರಿಲೀಫ್‌ ಪಡೆಯುತ್ತಿದ್ದಾರೆ.

ಆಸ್ಪತ್ರೆಗಳನ್ನು ಬಂದ್‌ ಮಾಡಬೇಕೆಂದು ಐಎಂಎ ಸೂಚನೆ ನೀಡಿಲ್ಲ. ನಗರದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಲಭ್ಯವಿದೆ. ಆದರೆ, ದಿನದಲ್ಲಿ ಮೂರ್‍ನಾಲ್ಕು
ರೋಗಿಗಳೂ ಸಹ ಕ್ಲಿನಿಕ್‌ಗೆ ಬರುತ್ತಿಲ್ಲ. ಸಿಬ್ಬಂದಿಯೂ ಕೆಲಸಕ್ಕೆ ಆಗಮಿಸುತ್ತಿಲ್ಲ. ಹೀಗಾಗಿ ಕೆಲವೆಡೆ ಮಾತ್ರ ಒಪಿಡಿ ಆರಂಭಿಸಲಾಗಿದೆ. ಸೋಂಕಿತರು ಚಿಕಿತ್ಸೆಗೆ ಬರಬಹುದೆಂಬ ಆತಂಕವೂ ಇದೆ.
ಡಾ| ವಿ.ವಿ. ನಾಗರಾಜ, ಅಧ್ಯಕ್ಷರು, ಇಂಡಿಯನ್‌
ಮೆಡಿಕಲ್‌ ಅಸೋಸಿಯೇಷನ್‌, ಬೀದರ

ಶಶಿಕಾಂತ ಬಂಬುಳಗೆ

Advertisement
Advertisement

Udayavani is now on Telegram. Click here to join our channel and stay updated with the latest news.

Next