ದುರ್ಯೋಧನ ಹೂಗಾರ
ಬೀದರ: ರೈತರ ಹೊಲಗಳಲ್ಲಿನ ಬೆಳೆಗಳ ಮಾಹಿತಿ ಸಂಗ್ರಹಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಗಡಿ ಜಿಲ್ಲೆಯಲ್ಲಿ ಪೈಲೆಟ್ ಪ್ರೊಜೆಕ್ಟ್ ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ರಾಜಗೀರಾ ಗ್ರಾಮದ ಸುತ್ತಲಿನ ಪ್ರದೇಶದ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಡ್ರೋಣ್ ಮೂಲಕ ಬೆಳೆಗಳ ಸ್ಥಿತಿಗತಿಯ ಸರ್ವೇ ಕಾರ್ಯ ನಡೆಯಲಿದೆ.
ಅಂತಾರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆ (ಐಸಿಆರ್‌ಎಸ್‌ಎಟಿ) ಬೆಳೆ ಪರಿಶೀಲನೆ ನಡೆಸಲಿದೆ. ಈ ಸಂಸ್ಥೆ 45 ವರ್ಷಗಳಿಂದ ಬೆಳೆಗಳ ಕುರಿತು ಸಂಶೋಧನೆ ನಡೆಸುತ್ತಿದ್ದು, ಭಾರತ ಸೇರಿದಂತೆ ವಿದೇಶದಲ್ಲಿ ಇದರ ಅಂಗ ಸಂಸ್ಥೆಗಳಿವೆ. ಸದ್ಯ ನೇರೆ ರಾಜ್ಯ ತೆಲಂಗಾಣದ ಹೈದ್ರಾಬಾದನ ಸಂಸ್ಥೆ ಅಧಿಕಾರಿಗಳು ಜಿಲ್ಲೆಯ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಸಮೀಕ್ಷೆ, ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಮುಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡುವ ವಿವಿಧ ಬೆಳೆಗಳ ಸ್ಥಿತಿಗತಿಯನ್ನು 3ರಿಂದ 4 ನಾಲ್ಕು ಬಾರಿ ಡ್ರೋಣ್ ಮೂಲಕ ಪರಿಶೀಲನೆ ನಡೆಸಲಿದ್ದಾರೆ.
ಇದರಿಂದ ಏನು ಪ್ರಯೋಜನ?: ಡ್ರೋಣ್ ಮೂಲಕ ಬೆಳೆಗಳ ಪರಿಶೀಲನೆ ನಡೆಸುವುದರಿಂದ ಹೊಲದಲ್ಲಿನ ಬೆಳೆಗಳ ಬೆಳವಣಿಗೆ ಮತ್ತು ಕೃಷಿ ಕಾರ್ಯಾಚರಣೆಗಳ ನೈಜ ಸಮಯದ ಚಿತ್ರಣ, ಬೆಳೆಗಳ ಕೀಟನಾಶಕ, ಸಸ್ಯದ ಎತ್ತರ ಮತ್ತು ಹೂ ಬಿಡುವ ಸ್ಥಿತಿಗಳ ಲಕ್ಷಣಗಳನ್ನು ರೆಕಾರ್ಡ್ ಮಾಡಿ ನೈಜ ಸಮಯದ ನೈಜ ವರದಿಯನ್ನು ಕೃಷಿ ಇಲಾಖೆ ಪಡೆಯಬಹುದಾಗಿದೆ. ಹೊಲದಲ್ಲಿನ ಬೆಳೆಗಳ ಸ್ಥಿತಿ ನೋಡಿ ರೈತರಿಗೆ ಸೂಕ್ತ ಮಾರ್ಗದರ್ಶ ನೀಡುವ ಕಾರ್ಯ ಕೂಡ ಮಾಡಲಿದ್ದಾರೆ. ಅಲ್ಲದೆ, ಯಾವ ರೈತರ ಹೊಲದಲ್ಲಿ ಯಾವ ಬೆಳೆಯನ್ನು ಎಷ್ಟು ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ, ಎಷ್ಟು ಪ್ರಮಾಣದ ಬೆಳೆ ಬೆಳೆಯಲಾಗಿದೆ. ಒಟ್ಟಾರೆ ಕೃಷಿ ಭೂಮಿಯಲ್ಲಿ ಎಷ್ಟು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ನೈಜ ವರದಿಯನ್ನು ಸರ್ವೇ ಮಾಡುವ ಸಂಸ್ಥೆಯವರು ಕೃಷಿ ಇಲಾಖೆಗೆ ನೀಡಲಿದ್ದಾರೆ. ಅತಿವೃಷ್ಟಿ ಹಾಗೂ ಅನಾವೃಷ್ಟಿ, ಬರ ಹಾಗೂ ಬೆಳೆಗಳ ವಿಮೆ ಸಂದರ್ಭದಲ್ಲಿ ಕೂಡ ಡ್ರೋಣ್ ಸಹಾಯದ ಮೂಲಕ ಬೆಳೆ ಪರಿಶೀಲನೆ ನಡೆಸಿ ವರದಿ ತಯಾರಿಸಿ ವಿಮಾ ಕಂಪನಿಗಳಿಗೆ ಕಳುಹಿಸಲು ಕೂಡ ಇದು ಸಹಕಾರಿಯಾಗಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.
ಬೆಳೆದ ಬೆಳೆಗೆ ಮಾತ್ರ ವಿಮೆ: ಪ್ರಸಕ್ತ ಸಾಲಿನಲ್ಲಿ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳಿಗೆ ಮಾತ್ರ ವಿಮೆ ಮಾಡಿಸಬೇಕು ಎಂಬ ಸಂದೇಶವನ್ನು ಕೃಷಿ ಇಲಾಖೆ ಈಗಾಗಲೇ ರೈತರಿಗೆ ನೀಡುತ್ತಿದೆ. ಎಷ್ಟು ಎಕರೆ ಪ್ರದೇಶದಲ್ಲಿ ಯಾವ ಬೆಳೆ ಬಿತ್ತನೆ ನಡೆಯುತ್ತದೆಯೋ ಅದಕ್ಕೆ ಮಾತ್ರ ಬೆಳೆವಿಮೆ ಮಾಡಿಸುವಂತೆ ಸೂಚಿಸಿದ್ದಾರೆ. ಕಾರಣ ಡ್ರೋಣ್ ಮೂಲಕ ಈ ಬಾರಿ ಸರ್ವೇ ಕಾರ್ಯ ನಡೆಯಲಿದ್ದು, ರೈತರಿಗೆ ಯಾವುದೇ ಸಮಸ್ಯೆ ಉಂಟಾಗಬಾರದು ಎಂಬ ಉದ್ದೇಶ ಇಲಾಖೆ ಹೊಂದಿದೆ.
ಪ್ರಸಕ್ತ ಸಾಲಿನಲ್ಲಿ ಡ್ರೋಣ್ ಮೂಲಕ ಬೆಳೆ ಸರ್ವೇ ಕಾರ್ಯಕ್ಕೆ ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ ಪೈಲೆಟ್ ಪ್ರೊಜೆಕ್ಟ್ ಆಗಿ ಜಿಲ್ಲೆಯ ರಾಜಗೀರಾ ವಲಯದ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಐಸಿಆರ್‌ಎಸ್‌ಎಟಿ ಸಂಸ್ಥೆಯವರು ಸರ್ವೇ ಕಾರ್ಯ ನಡೆಸಲಿದ್ದಾರೆ. ಮುಂಗಾರು ಬೆಳೆಗಳ ಕುರಿತು ಎಲ್ಲಾ ಹಂತದ ಚಿತ್ರಣವನ್ನು ಡ್ರೋಣ್ ಮೂಲಕ ಸೆರೆ ಹಿಡಿದು ಡಾಟಾ ಸಂಗ್ರಹಿಸಲಾಗುತ್ತದೆ. ಡ್ರೋಣ್ ಹಾರಿಸುವ ಕುರಿತು ಜಿಲ್ಲಾಧಿಕಾರಿ, ಎಸ್‌ಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅನುಮತಿ ದೊರೆತ ನಂತರ ಮುಂದಿನ ಕಾರ್ಯಗಳು ನಡೆಯಲಿವೆ. •
ಸಿ.ವಿದ್ಯಾನಂದ,
ಕೃಷಿ ಇಲಾಖೆಯ ಜಂಟಿ ನಿರ್ದೇಶಕ