ಬೀದರ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕಲ್ಯಾಣ ನಾಡಿನ ಅಣ್ಣ ಬಸವಣ್ಣನವರ ಹೆಸರು ಪ್ರಸ್ತಾಪಿಸಿ ಮಾತನಾಡಿರುವುದು ಗಡಿ ಜಿಲ್ಲೆಯ ಬಸವ ಭಕ್ತರಲ್ಲಿ ಸಂತಸ ಮೂಡಿಸಿದೆ.
ಕೌಶಲ್ಯಾಭಿವೃದ್ಧಿ ಯೋಜನೆಯ ವಿವರ ನೀಡುವ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಸಿತಾರಾಮನ್ ಮಹಾತ್ಮ ಬಸವೇಶ್ವರರ ಆಶಯದಂತೆ ಕೇಂದ್ರ ಸರ್ಕಾರ ಕೆಲಸ ನಿರ್ವಹಿಸುತ್ತಿದೆ ಎಂದು, ‘ಕಾಯಕವೇ ಕೈಲಾಸ’ ಎಂಬ ಸಂದೇಶ ಪ್ರತಿಪಾದಿಸಿ ಮಾತನಾಡಿರುವುದು ಭಸವ ಭಕ್ತರಲ್ಲಿ ಹರ್ಷ ಮೂಡಿಸಿದೆ. ಬಸವಣ್ಣನವರ ಹೆಸರು, ಅವರ ಸಾಹಿತ್ಯ ವಿಶ್ವದ ಎಲ್ಲ ಕಡೆಗಳಲ್ಲಿ ಪಸರಿಸುವಂತೆ ಕೇಂದ್ರ ಸರ್ಕಾರ ಮಾಡಬೇಕು ಎಂಬ ಆಸೆ ಈ ಭಾಗದ ಜನರದಾಗಿದೆ.
ಮಹಿಳೆಯರ ಸ್ವಸಹಾಯ ಸಂಘಗಳಿಗೆ ವಿಶೇಷ ಧನಸಹಾಯ, ಜನಧನ ಖಾತೆದಾರರಿಗೆ ಸೌಲಭ್ಯ ಕಲ್ಪಿಸುವುದರ ಮೂಲಕ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡಿರುವುದು ಮಹಿಳೆಯರಲ್ಲಿ ಹೊಸ ಕನಸು ಹುಟ್ಟುವಂತೆ ಮಾಡಿದೆ. ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ನಿಟ್ಟಿನ ಮೊದಲ ಹೆಜ್ಜೆಯಾಗಿ ಮುಂಗಾರು ಹಂಗಾಮಿನ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡುವ ಭರವಸೆ ರೈತರಲ್ಲಿ ಹೊಸ ಸಂಚಲನ ಮೂಡಿಸುವಂತೆ ಮಾಡಿದೆ. ಅಲ್ಲದೆ, 60 ವಯಸ್ಸು ದಾಟಿದ ಪ್ರತಿಯೊಬ್ಬ ಕಾರ್ಮಿಕರಿಗೆ ಹಾಗೂ ಚಿಲ್ಲರೆ ಅಂಗಡಿ ವ್ಯಾಪಾರಿಗಳಿಗೆ ಕರ್ಮಯೋಗಿ ಮಾನ್ ಸಮ್ಮಾನ್ ಯೋಜನೆಯಡಿ ಮಾಸಿಕ 3,000 ರೂ. ಪಿಂಚಣಿ ಘೋಷಣೆ ಮಾಡಿರುವುದು ಮಹತ್ವ ನಿರ್ಧಾರ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ದೇಶದಲ್ಲಿನ ಬಡತನ ನಿರ್ಮೂಲನೆಗೆ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಹಾಕಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಬಜೆಟ್‌ನಲ್ಲಿ ನಿರುದ್ಯೋಗಿ ಯುವಕರ ಬಗ್ಗೆ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕಿತ್ತು ಎಂದು ಯುವಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ದೇಶದ ಪ್ರತಿಯೊಂದು ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡುವ ಮೂಲಕ ಆಯಾ ಭಾಗದ ಯುವಕರಿಗೆ ಉದ್ಯೋಗ ಕಲ್ಪಿಸುವ ಯೋಜನೆ ನೀಡಬೇಕಿತ್ತು ಎಂಬ ಅಭಿಪ್ರಾಯಗಳು ಕೇಳಿ ಬಂದವು.