Advertisement

ನಿರೀಕ್ಷಿತ ಗುಂಪು ಬೇಸಾಯ ಯೋಜನೆಗೆ ಸಿಗುತ್ತಾ ಆದ್ಯತೆ?

10:28 AM Jun 27, 2019 | Team Udayavani |

ದುರ್ಯೋಧನ ಹೂಗಾರ
ಬೀದರ:
ರೈತರ ಸಾಲಮನ್ನಾ ಯೋಜನೆಗೆ ಪ್ರೇರಣೆ ನೀಡಿದ ಬೀದರ ಜಿಲ್ಲೆಗೆ ಎರಡನೇ ಬಾರಿಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಹು ನಿರೀಕ್ಷಿತ ರೈತರ ಗುಂಪು ಬೇಸಾಯ ಯೋಜನೆ ಕುರಿತು ರೈತರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

Advertisement

ರಾಜ್ಯದಲ್ಲಿ ರೈತರ ಗುಂಪು ಬೇಸಾಯ ಯೋಜನೆ ಅನುಷ್ಠಾನ ಮಾಡುವುದಾಗಿ ಕಳೆದ ನವೆಂಬರ್‌ನಲ್ಲಿ ನಗರದಲ್ಲಿ ನಡೆದ ರೈತ ಸ್ಪಂದನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಇದೀಗ ಗ್ರಾಮೀಣ ಪ್ರದೇಶಗಳ ಕಡೆಗೆ ಮುಖ ಮಾಡಿರುವ ಮುಖ್ಯಮಂತ್ರಿಗಳು ರೈತರ ಗುಂಪು ಬೇಸಾಯಕ್ಕೆ ಮಹತ್ವ ನೀಡಿ ರೈತರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ 75 ಲಕ್ಷ ರೈತರ ಸರಿ ಸುಮಾರು 10 ಲಕ್ಷ ಗುಂಪು ರಚನೆ ಮಾಡುವ ಗುರಿ ಇದ್ದು, ಆ ಎಲ್ಲ ಗುಂಪುಗಳ ಸದಸ್ಯರಿಗೆ ಸರ್ಕಾರದಿಂದ‌ ವಿವಿಧ ಸೌಲಭ್ಯ ನೀಡುವುದಾಗಿ ಅಂದು ಸಿಎಂ ಭರವಸೆ ನೀಡಿದ್ದರು.

ಆಯಾ ಗ್ರಾಮಗಳಲ್ಲಿ ಅಲ್ಲಿನ ರೈತರು ಸಭೆ ನಡೆಸಬೇಕು. ಸರ್ಕಾರದ ಮಾರ್ಗಸೂಚಿಯಂತೆ ರೈತರು ಕೆಲಸ ಮಾಡಬೇಕು. ಬೆಳೆ ಸಾಲಕ್ಕಾಗಿ ಬ್ಯಾಂಕ್‌ಗೆ ಹೊಗುವುದು ಬೇಡ. ಸರ್ಕಾರವೇ ಹಣ ನೀಡುತ್ತದೆ. ಸ್ವ ಸಹಾಯ ಸಂಘಗಳಂತೆ ರೈತರ ಗುಂಪುಗಳಿಗೆ ಸರ್ಕಾರವೇ ಹಣ ಒದಗಿಸುವ ಯೋಜನೆ ಇದೆ. ಆದರೆ, ರೈತರು ಸಂಘಟಿತರಾಗ¸ಬೇಕು. ಹಳೇ ಪದ್ಧತಿಯಾದ ಗುಂಪು ಕೃಷಿ ಮುಂದಿನ ದಿನಗಳಲ್ಲಿ ಜಾರಿಯಾಗಬೇಕಾಗಿದೆ ಎಂದು ಅಂದು ಮುಖ್ಯಮಂತ್ರಿಗಳು ರೈತರಿಗೆ ಮನವರಿಕೆ ಮಾಡಿದ್ದರು. ಇದೀಗ ಗ್ರಾಮೀಣ ಪ್ರದೇಶದಲ್ಲಿ ವಾಸ್ತವ್ಯ ನಡೆಸುತ್ತಿರುವ ಮುಖ್ಯಮಂತ್ರಿಗಳು ರೈತರ ಹಿತ ದೃಷ್ಟಿಯಿಂದ ಹೊಸ ಯೋಜನೆಗೆ ಬುನಾದಿ ಹಾಕುವ ಸಾಧ್ಯತೆ ಇದೆ.

ಈಡೇರದ ಸಿಎಂ ಭರವಸೆಗಳು: ಕಳೆದ ವರ್ಷ ನವೆಂಬರ್‌ಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಏರ್ಪಡಿಸಲಾಗಿದ್ದ ರೈತ ಸ್ಪಂದನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜಿಲ್ಲೆಗ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ನೀಡಿದ ಭರವಸೆಗಳು ಇಂದಿಗೂ ಈಡೇರಿಲ್ಲ. ಕಳೆದ ವರ್ಷ ನವೆಂಬರ್‌ 15ರಂದು ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ನಡೆದ ರೈತ ಸ್ಪಂದನಾ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರೈತ ಅನೀಲಕುಮಾರ, ಬಸವಕಲ್ಯಾಣ ತಾಲೂಕಿನಲ್ಲಿ ಸೋಯಾ ಬೆಳೆ ಹೆಚ್ಚಿಗೆ ಬೆಳೆಯಲಾಗುತ್ತಿದೆ. ಬಸವಕಲ್ಯಾಣದಲ್ಲಿ ಸೋಯಾ ಬೆಳೆ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು. ಈ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಕುರಿತು ಅಧಿಕಾರಿಗಳು ಪರಿಶೀಲಿಸಿ ಮಾಹಿತಿ ಪಡೆದುಕೊಂಡು ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಬಸವಕಲ್ಯಾಣ ತಾಲೂಕಿನಲ್ಲಿ ಸೋಯಾ ಬೆಳೆ ಸಂಶೋಧನಾ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ಈ ವರೆಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರಂಭವಾಗಿಲ್ಲ ಕೃಷಿ ಕಾಲೇಜು: ರೈತ ಸಂವಾದ ಕಾರ್ಯಕ್ರಮದಲ್ಲಿ ಪ್ರಗತಿ ಪರ ರೈತ ಕಾಶಿಲಿಂಗ ಅಗ್ರಹಾರ ಮಾತನಾಡಿ, ಜಿಲ್ಲೆಯಲ್ಲಿ ಒಣ ಬೇಸಾಯ ಮಾಡುವ ರೈತರ ಸಂಖ್ಯೆ ಹೆಚ್ಚಿದೆ. ಕೃಷಿ ಕ್ಷೇತ್ರದ ಕುರಿತು ವಿದ್ಯಾಭ್ಯಾಸ ಮಾಡಲು ಬೀದರ ತಾಲೂಕಿನಲ್ಲಿ ಕೃಷಿ ಕಾಲೇಜು ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿಗಳಗೆ ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು ಕೃಷಿ ಕಾಲೇಜು ಸ್ಥಾಪನೆ ಕುರಿತು ಸರ್ಕಾರದ ಗಮನಕ್ಕೆ ಬಂದಿದೆ. ಮುಂದಿನ ವರ್ಷದಿಂದ ಕೃಷಿ ಕಾಲೇಜು ಪ್ರಾರಂಭಿಸುವ ಕುರಿತು ಭರವಸೆ ನೀಡಿದ್ದರು. ಆದರೆ, ಈ ವರೆಗೆ ಕೃಷಿ ಕಾಲೇಜು ಸ್ಥಾಪನೆ ಬಗ್ಗೆ ಯಾವ ಒಬ್ಬ ಅಧಿಕಾರಿಗಳು ಮಾತನಾಡುತ್ತಿಲ್ಲ. ಎಲ್ಲಿ ಕಾಲೇಜು ಸ್ಥಾಪನೆ ಮಾಡುತ್ತಾರೆ. ಯಾವ ವರ್ಷದಿಂದ ಕಾಲೇಜು ಶುರುವಾಗುತ್ತೆ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next