Advertisement

ಬ್ರಿಮ್ಸ್‌ ವೈದ್ಯರ ಖಾಸಗಿ ದರ್ಬಾರ್‌ಗೆ ಆಕ್ರೋಶ

11:38 AM Oct 26, 2019 | Naveen |

ಬೀದರ: ಬ್ರಿಮ್ಸ್‌ ಆಸ್ಪತ್ರೆಯ ವೈದ್ಯರು ಹಾಜರಾತಿ ಹಾಕಿ ತಮ್ಮ ಖಾಸಗಿ ಆಸ್ಪತ್ರೆಗಳಲ್ಲಿ ದರ್ಬಾರ್‌ ನಡೆಸುತ್ತಿದ್ದಾರೆ. ಅಂಥ ವೈದ್ಯರಿಗೆ ನೋಟಿಸ್‌ ಜಾರಿ ಮಾಡುವುದರ ಜತೆಗೆ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ಇತರೆ ಕೆಲ ಅಧಿಕಾರಿಗಳು ಒಳಗೊಂಡು ಪ್ರತಿದಿನ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ ಅವರಿಗೆ ಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ವೈದ್ಯಾಧಿಕಾರಿಗಳ ಕಾರ್ಯವೈಖರಿ, ಅಶುಚಿತ್ವ ಸೇರಿದಂತೆ ಬ್ರಿಮ್ಸ್‌ ಆಸ್ಪತ್ರೆಯ ಸ್ಥಿತಿಗತಿ ಬಗ್ಗೆ ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಸಿದರು.

ವೈದ್ಯರು, ಸಿಬ್ಬಂದಿಗಳ ಕೊರತೆ ಸೇರಿದಂತೆ ಬ್ರಿಮ್ಸ್‌ನಲ್ಲಿನ ಕುಂದು ಕೊರತೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ. ಅಲ್ಲಿನ ನ್ಯೂನತೆಗಳನ್ನು ಸರಿಪಡಿಸಿ ಜನರಿಗೆ ಅಗತ್ಯ ಆರೋಗ್ಯ ಸೇವೆ ಕಲ್ಪಿಸಬೇಕು ಎಂದು ವೈದ್ಯಕೀಯ ಅಧೀಕ್ಷಕರಿಗೆ ಎಚ್ಚರಿಕೆ ನೀಡಿದರು.

ಒಬ್ಬ ವೈದ್ಯರೂ ಇರಲಿಲ್ಲ: ಆಸ್ಪತ್ರೆಗಳಲ್ಲಿ ವೈದ್ಯರು ಹಾಜರಾತಿ ಹಾಕಿ ಹೋಗುತ್ತಿರುವ ಹಲವು ದೂರುಗಳ ಹಿನ್ನೆಲೆಯಲ್ಲಿ ಇತ್ತಿಚೆಗೆ ತಾವು ಖುದ್ದು ಆಸ್ಪತ್ರೆಗೆ ಭೇಟಿ ನೀಡಿದಾಗ ಒಬ್ಬರೂ ವೈದ್ಯರು ಇರಲಿಲ್ಲ. ತರಬೇತಿ ನಿರತ ವೈದ್ಯರೊಬ್ಬರು ಮಾತ್ರ ಲಭ್ಯವಿದ್ದರು.

ಆಸ್ಪತ್ರೆಯಲ್ಲಿ ಸಕಾಲಕ್ಕೆ ರಕ್ತ ಕೂಡ ಸಿಗುತ್ತಿಲ್ಲ. ಹೀಗಾದರೆ ರೋಗಿಗಳ ಗತಿ ಏನು ಎಂದು ಶಾಸಕ ರಹೀಂ ಖಾನ್‌ ಅವರು ಸಭೆಯಲ್ಲಿ ಎತ್ತಿದ ಪ್ರಶ್ನೆಯ ಮೇಲೆ ಹಲವು ವಿಷಯಗಳು ಚರ್ಚೆಯಾದವು.

Advertisement

ಜಿಲ್ಲಾ ಆಸ್ಪತ್ರೆ, ಬ್ರಿಮ್ಸ್‌ ಮತ್ತು ಜಿಲ್ಲೆಯ ಎಲ್ಲಾ ಕಡೆಗಳಲ್ಲಿನ ಆಸ್ಪತ್ರೆಗಳಲ್ಲಿ ಶುಚಿತ್ವಕ್ಕೆ ಒತ್ತು ಕೊಡಲಾಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಸ್ವಚ್ಛತೆ ಇರದಿದ್ದರೆ
ಡೆಂಘೀಯಂಥ ರೋಗಗಳ ನಿಯಂತ್ರಣ ಹೇಗೆ ಸಾಧ್ಯ ಎಂದು ಖಾರವಾಗಿ ಪ್ರಶ್ನಿಸಿದ ಸಚಿವರು, ಅಶುಚಿತ್ವದಿಂದ ರೋಗಗಳು ಮತ್ತಷ್ಟು ಉಲ್ಬಣಗೊಳ್ಳುತ್ತಿವೆ.

ಜನತೆ ಗುಟುಕಾ ಜಗಿದು ಉಗುಳುದಂತೆ ನೋಡಿಕೊಂಡು ಸ್ವಚ್ಛತೆ ಕಾಪಾಡಬೇಕು ಎಂದು ಸೂಚಿಸಿದರು.

ರೋಗಿಗಳಿಗೆ ವೈದ್ಯರು ಸ್ಪಂದಿಸಲಿ: ಜಿಲ್ಲೆಯ ರೋಗಿಗಳನ್ನು ಸೊಲ್ಲಾಪುರ, ಹೈದ್ರಾಬಾದ್‌ಗೆ ಕಳುಹಿಸದೇ ಇಲ್ಲಿಯೇ ಅಗತ್ಯ ಚಿಕಿತ್ಸೆ ನೀಡಬೇಕು. ಬೇರೆಡೆಗೆ ಕಳುಹಿಸುವ ಹಾಗಿದ್ದರೆ ಇಲ್ಲಿಯ ವೈದ್ಯರು ಏನು ಕೆಲಸ ಮಾಡುತ್ತಿದ್ದಾರೆ? ರೋಗಿಗಳಿಗೆ ಸ್ಪಂದಿಸಬೇಕು. ಅವರ ಸುಖ ದುಃಖ ಕೇಳಬೇಕು. ವೈದ್ಯರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಇದು ಸರಿಯಲ್ಲ ಎಂದು ಹೇಳಿದ ಸಚಿವರು, ಜಿಲ್ಲಾ ಆಸ್ಪತ್ರೆಯಲ್ಲಿ ಎಂಆರ್‌ಐ ಯಂತ್ರ ಕಾರ್ಯಾರಂಭಿಸಲು ತಾಂತ್ರಿಕ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಿಕೊಳ್ಳಬೇಕು ಎಂದರು.

ಆಂಬ್ಯೂಲೆನ್ಸ್‌ ಕೊರತೆ, ಹಾವು ಕಡಿತ ಔಷಧ ಲಭ್ಯತೆ ಸೇರಿದಂತೆ ನಾನಾ ವಿಷಯಗಳ ಮೇಲೆ ಚರ್ಚೆ ನಡೆಯಿತು. ಈ ವೇಳೆ ಸಚಿವ ಪ್ರಭು ಚವ್ಹಾಣ ಅವರು, ನೀವು ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಭೇಟಿ ಕೊಡ್ತೀರಾ? ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಇದೆಯಾ? ಎಂದು ಡಿಎಚ್‌ಒ ಅವರನ್ನು ಪ್ರಶ್ನಿಸಿದರು. ತಾವು, ಈಗಾಗಲೇ ಜಿಲ್ಲೆಯ ಭಾಲ್ಕಿ, ಬಸವಕಲ್ಯಾಣ ಮತ್ತು ಇನ್ನಿತರ ಆಸ್ಪತ್ರೆಗಳಿಗೆ ಭೇಟಿ ನೀಡಿ ತಿಳಿಸಿದ್ದರೂ ಅಲ್ಲಿ ಶುಚಿತ್ವಕ್ಕೆ ಒತ್ತು ಕೊಟ್ಟಿಲ್ಲ. ಇದು ಸರಿಯಲ್ಲ. ತಾವು ಎಲ್ಲಾ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ಕೊಡಬೇಕು. ಗೈರು ಹಾಜರಾಗುವ ವೈದ್ಯಾ ಧಿಕಾರಿಗಳಿಗೆ ನೊಟೀಸ್‌ ನೀಡಬೇಕು ಎಂದು ನಿರ್ದೇಶನ ನೀಡಿದರು.

ಹೊಸ ಆಸ್ಪತ್ರೆಯ ಸುತ್ತಲೂ ಸೇಪ್ಟಿ ಟ್ಯಾಂಕ್‌ನಿಂದ ಕಲುಷಿತ ನೀರು ಹೊರ ಬರುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಸಭೆಯ ಗಮನ ಸೆಳೆದರು. ಜತೆಗೆ ಹಳೆ ಬೀದರನಲ್ಲಿ ಸ್ಥಾಪಿಸಿರುವ ನೂತನ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಸಭೆಯಲ್ಲಿ ಶಾಸಕರಾದ ಬಿ. ನಾರಾಯಣ, ರಘುನಾಥ ಮಲ್ಕಾಪೂರೆ, ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷಣ ಬುಳ್ಳಾ, ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ, ಸಿಇಒ ಜ್ಞಾನೇಂದ್ರಕುಮಾರ ಗಂಗವಾರ್‌, ಎಸ್‌ಪಿ ಟಿ. ಶ್ರೀಧರ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next