ಬೀದರ: ರಾಜ್ಯದಲ್ಲಿರುವ ಮೈತ್ರಿ ಸರ್ಕಾರವು ಬಹುಮತ ಇಲ್ಲದೆ ಅಲ್ಪಮತಕ್ಕೆ ಕುಸಿದು ಹೋಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೈತಿಕ ಹೊಣೆ ಹೊತ್ತು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮಂಗಳವಾರ ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಡಾ|ಅಂಬೇಡ್ಕರ್ ಹಾಗೂ ಭಗತ್‌ಸಿಂಗ್ ವೃತ್ತದಿಂದ ಪ್ರತಿಭಟನಾ ರ್ಯಾಲಿ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಕಳೆದ ವರ್ಷ ಅಧಿಕಾರಕ್ಕೆ ಬಂದ ಮೈತ್ರಿ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಬದಲಾಗಿ ನಿತ್ಯ ಶಾಸಕರು ಹಾಗೂ ಸಚಿವರು ಪದೇ ಪದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಮುಖ್ಯಮಂತ್ರಿಗೆ ಬೇದರಿಕೆ ಒಡ್ಡುತ್ತ ಬರುತ್ತಿದ್ದಾರೆ. ಇದರಿಂದ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ರೈತರು ಬರದಿಂದ ಕಂಗಾಲಾಗಿದ್ದು, ದಾರಿ ತಿಳಿಯದಂತಾಗಿದೆ. ರಾಜ್ಯದ ಎಲ್ಲೆಡೆ ನೀರಿನ ಹಾಹಾಕಾರ ಎದುರಾಗಿದೆ. ಸಾರ್ವಜನಿಕರು ಮತ್ತು ಜಾನುವಾರುಗಳು ನೀರಿನ ಸಮಸ್ಯೆ ಎದುರಿಸುವಂತಾಗಿದೆ. ಆದರೆ ಮುಖ್ಯಮಂತ್ರಿಗಳು ಮಾತ್ರ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಶಾಸಕರು ಹಾಗೂ ಸಚಿವರು ರೇಸಾರ್ಟ್‌ನಲ್ಲಿ ಜನರ ದುಡ್ಡಿನಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತ ಪಡಿಸಿದರು.
ಮೈತ್ರಿ ಸರ್ಕಾರದ 13 ಶಾಸಕರು ಈಗಾಗಲೇ ಸಭಾಪತಿಗೆ ರಾಜಿನಾಮೆ ನೀಡಿದ್ದಾರೆ. ಅದರಂತೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕೂಡ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರಿಂದ ಸರ್ಕಾರ ಬಹುಮತ ಕಳೆದುಕೊಂಡಿದೆ. ಹೀಗಾಗಿ ಕೂಡಲೇ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.
ಸೋಮನಾಥ ಪಾಟೀಲ, ಬಾಬುರಾವ್ ಕಾರಭಾರಿ, ಈಶ್ವರ್‌ಸಿಂಗ್ ಠಾಕೂರ್, ಜಯಕುಮಾರ ಕಾಂಗೆ, ಗುರುನಾಥ ಜಾಂತಿಕರ್, ವಿಜಯಕುಮಾರ ಪಾಟೀಲ, ಹಣಮಂತ ಬುಳ್ಳಾ, ಮಲ್ಲಿಕಾರ್ಜುನ ಪಾಟೀಲ, ಜಗನ್ನಾಥ ವಿ. ಪಾಟೀಲ, ಜಗನ್ನಾಥ ಪಾಟೀಲ, ರಾಜಕುಮಾರ ಚಿದ್ರಿ, ವಿಜಯಕುಮಾರ ಪಾಟೀಲ, ಚಂದ್ರಶೇಖರ ಪಾಟೀಲ, ಹಣಮಂತರಾವ್ ಬುಳ್ಳಾ, ಘಾಳೆಪ್ಪಾ ಚಟ್ನಳ್ಳಿ, ಮಹೇಶ್ವರ ಸ್ವಾಮಿ, ಚಂದ್ರಯ್ನಾ ಸ್ವಾಮಿ, ಲುಂಬುಣಿ ಗೌತಮ್, ಉಪೇಂದ್ರ ದೇಶಪಾಂಡೆ, ಶಿವಪುತ್ರಪ್ಪಾ, ರಾಜು ವಡ್ಡಿ ಸೇರಿದಂತೆ ಕಾರ್ಯಕರ್ತರು ಇದ್ದರು.