Advertisement

ಟೆಂಡರ್‌ ಕರಾರು ಒಪ್ಪಂದ ರದ್ದುಪಡಿಸಿ

04:51 PM Nov 07, 2019 | Team Udayavani |

ಬೀದರ: ನಗರೋತ್ಥಾನ ಹಂತ-3, ನಗರೋತ್ಥಾನ (ವಿಶೇಷ) ಹಾಗೂ ನಗರೋತ್ಥಾನ ಶೇ.4 ಪ್ರೋತ್ಸಾಹಧನ ಕಾಮಗಾರಿಗಳ ಪ್ರಗತಿ ಪರಿಶೀಲಿಸಿ ಕ್ರಮ ಕೈಗೊಳ್ಳಲು ಸಭೆಯಲ್ಲಿದ್ದ ಅಧಿಕಾರಿಗಳು, ಅಭಿಯಂತರರು, ಗುತ್ತಿಗೆದಾರರು ಹಾಗೂ ಗುತ್ತಿಗೆದಾರರ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಡಾ| ಎಚ್‌. ಆರ್‌. ಮಹಾದೇವ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ, ಬಸವಕಲ್ಯಾಣ ನಗರಸಭೆ, ಹುಮನಾಬಾದ, ಚಿಟಗುಪ್ಪಾ, ಭಾಲ್ಕಿ, ಹಳ್ಳಿಖೇಡ್‌ (ಬಿ) ಪುರಸಭೆ, ಔರಾದ ಪಪಂ ಅಧಿಕಾರಿಗಳು ಮತ್ತು ಅಭಿಯಂತರು ಮತ್ತು ಶಾರದಾ ಕನ್ಸ್‌ಟ್ರಕ್ಷನ್ಸ್‌ ಕಂಪನಿ ಮತ್ತು ಕೊಟರಕಿ ಕನ್ಸಟ್ರಕ್ಷನ್ಸ್‌ ಏಜೆನ್ಸಿ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆ ಬೀದರ ವ್ಯಾಪ್ತಿಯಲ್ಲಿ ನಗರೋತ್ಥಾನ ಹಂತ-3, ನಗರೋತ್ಥಾನ (ವಿಶೇಷ) ಯೋಜನೆಗಳ ಕಾಮಗಾರಿ ಕೈಗೆತ್ತಿಕೊಳ್ಳಲು ಈಗಾಗಲೇ ಕಾಮಗಾರಿ ಆದೇಶ ನೀಡಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳು ಕಾಲಮಿತಿ ನಿಗದಿಪಡಿಸಲಾಗಿತ್ತು. ಇದುವರೆಗೆ 4 ಉಪ ಕಾಮಗಾರಿ ಮಾತ್ರ ಪೂರ್ಣಗೊಳಿಸಿದ್ದೀರಿ. ಗುತ್ತಿಗೆದಾರರು ಮುಂದಿನ 24 ಗಂಟೆಗಳಲ್ಲಿ ತಪ್ಪದೇ ಕೆಲಸದ ಪ್ರಗತಿ ಸಲ್ಲಿಸಬೇಕು. ತಪ್ಪಿದಲ್ಲಿ ಕರಾರು ಒಪ್ಪಂದ ರದ್ದುಪಡಿಸಿ ಮರು ಟೆಂಡರ್‌ ಆಹ್ವಾನಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಕೊಟರಕಿ ಕನ್ಸಟ್ರಕ್ಷನ್ಸ್‌ ಗುತ್ತಿಗೆದಾರರಿಗೆ ಸೂಚಿಸಿದರು.

ಗುತ್ತಿಗೆದಾರರಿಗೆ 4 ನೋಟಿಸ್‌ ನೀಡಲಾಗಿದೆ. ಆದರೆ, ಗುತ್ತಿಗೆದಾರರು ಕಾಮಗಾರಿ ಅನುಷ್ಠಾನದಲ್ಲಿ ಯಾವುದೇ ಪ್ರಗತಿ ಸಾಧಿಸಿರುವುದಿಲ್ಲ ಎಂದು ನಗರಾಭಿವೃದ್ಧಿ ಕೋಶದ ಇಇ ತಿಳಿಸಿದರು.

ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ: ನಗರೋತ್ಥಾನ ಹಂತ-3 ಯೋಜನೆಯಡಿ ಕಾಮಗಾರಿಗಳ ಪೈಕಿ ಕೆಲವು ಕಾಮಗಾರಿ ಪ್ರಾರಂಭಿಸಲು ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿವೆ ಎಂದು ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಭೆಗೆ ತಿಳಿಸಿದರು.

Advertisement

ಈಗಾಗಲೇ ಕಾಮಗಾರಿ ಆದೇಶ ನೀಡಲಾಗಿದೆ. ಸದರಿ ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳು ಕಾಲಮಿತಿ ನಿಗ ಪಡಿಸಲಾಗಿದ್ದು, 2020ರ ಮಾರ್ಚ್‌.10ಕ್ಕೆ ಮುಕ್ತಾಯವಾಗಲಿದೆ. ಬಾಕಿ ಉಳಿದ ಕಾಮಗಾರಿ ನಿಗದಿ ತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ನಗರಸಭೆ ಅನುದಾನ ಭರಿಸಲಿ: ನಗರದ ಹೊಸ ಪ್ರದೇಶಗಳಲ್ಲಿ ಕೆ.ಯು.ಐ.ಡಿ.ಎಫ್‌.ಸಿ.ಯಿಂದ ಒಳಚರಂಡಿ ಮ್ಯಾನುವಲ್‌ ಚೆಂಬರ್‌ ಮತ್ತು ಹೌಸ್‌ ಕನೆಕ್ಷನ್‌ ಚೆಂಬರ್‌ಗಳು ರಸ್ತೆ ಮಟ್ಟಕ್ಕಿಂತ ಕೆಳಗಿವೆ.

ಇವುಗಳನ್ನು ಈಗ ಕೈಗೊಳ್ಳುತ್ತಿರುವ ರಸ್ತೆಗಳ ಮಟ್ಟಕ್ಕೆ ಎತ್ತರಿಸಬೇಕಿದೆ. ಇದಕ್ಕೆ ಹೆಚ್ಚಿನ ಅನುದಾನ ಅವಶ್ಯಕತೆ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಇದಕ್ಕೆ ತಗಲುವ ವೆಚ್ಚ ಬೀದರ ನಗರಸಭೆಯವರು ಭರಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ನಗರದ ಹಳೆ ಪ್ರದೇಶಗಳಲ್ಲಿ ಸಿ.ಸಿ. ರಸ್ತೆ ಕಾಮಗಾರಿ ಕೈಗೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ, ಹಳೆ ರಸ್ತೆಗಳು ಅಗೆಯಬೇಕಾದ ಕಾರಣ ಅಂತಹ ರಸ್ತೆಗಳ ಸ್ಥಳ ಪರಿಶೀಲಿಸಿ ಮುಂದೆ ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ವಿವರ ನೀಡುವಂತೆ ನಗರಾಭಿವೃದ್ಧಿಕೋಶದ ಇಇ, ಎಇಇಗೆ ಡಿಸಿ ಸೂಚಿಸಿದರು.

ಕ್ರಿಯಾ ಯೋಜನೆ ಸಲ್ಲಿಸಲು ಸೂಚನೆ: ಔರಾದ ಪಪಂ ವ್ಯಾಪ್ತಿಯಲ್ಲಿ 129.29 ಲಕ್ಷ ರೂ.ಗಳಲ್ಲಿ 6 ಕಾಮಗಾರಿಗಳಿಗಾಗಿ ಟೆಂಡರ್‌ ಆಹ್ವಾನಿಸಿದ್ದು, ಅವುಗಳ ಪೈಕಿ ಈಗಾಗಲೇ 5 ಕಾಮಗಾರಿ ಪೂರ್ಣಗೊಂಡಿವೆ. 1 ಕಾಮಗಾರಿಯು ಬೇರೆ ಯೋಜನೆಯಡಿ ಪೂರ್ಣಗೊಳಿಸಿರುವುದರಿಂದ ಅದನ್ನು ಕೈಗೆತ್ತಿಕೊಂಡಿಲ್ಲ. ಇನ್ನು 1 ಕಾಮಗಾರಿ ಸ್ಥಳ ಸಮಸ್ಯೆಯಿಂದ ಪ್ರಾರಂಭಿಸಿರುವುದಿಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಬಾಕಿ 2 ಕಾಮಗಾರಿಗಳ ಬದಲಿಗೆ ಬೇರೆ ಕಾಮಗಾರಿ ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ಸಲ್ಲಿಸುವಂತೆ ಜಿಲ್ಲಾ ನಗರಾಭಿವೃದ್ಧಿಕೋಶದ ಇಇ ಮತ್ತು ಪಪಂ ಮುಖ್ಯಾಧಿಕಾರಿಗೆ ಸೂಚಿಸಲಾಯಿತು.

ಸಭೆಯಲ್ಲಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೊಟಪ್ಪಗೋಳ, ಪೌರಾಯುಕ್ತರಾದ ಬಸಪ್ಪ, ಸುರೇಶ ಬಬಲಾರ ಮತ್ತು ಪುರಸಭೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next