ಬೀದರ: ಹೊಸ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಸಂಸದ ಭಗವಂತ ಖೂಬಾ ಸಂಬಂಧಿ ಸಿದ ಅಧಿಕಾರಿಗಳಿಗೆ ಸೂಚಿಸಿದರು.
ನೌಬಾದ್‌ನ ಸಹಾರ್ದ ತರಬೇತಿ ಸಂಸ್ಥೆಯಲ್ಲಿ ಮಂಗಳವಾರ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಕೇಂದ್ರ ಸರ್ಕಾರದ ಎಂಎಸ್‌ಎಂಇ ಯ ಪ್ರಮುಖ ಯೋಜನೆಗಳ ಬಗ್ಗೆ ಜಾಗೃತಿ ಶಿಬಿರ ಮತ್ತು ಕೈಗಾರಿಕಾ ಸ್ಥಾಪನೆ ಕುರಿತು ಜಿಲ್ಲೆಯಲ್ಲಿರುವ ಮೂಲಭೂತ ಸೌಕರ್ಯಗಳು ಕುರಿತ ಚರ್ಚಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೊಸ ಕೈಗಾರಿಕೋದ್ಯಮಿಗಳು ಜಿಲ್ಲೆಗೆ ಆಗಮಿಸಬೇಕು. ಈಗಾಗಲೇ ಬಂದಿರುವ ಉದ್ಯಮಿಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿ, ವ್ಯಾಪಕ ಪ್ರಚಾರ ನೀಡಬೇಕಿದೆ. ಕೆಲವರು ಹಂಚಿಕೆಯಾಗಿರುವ ನಿವೇಶನಗಳನ್ನು ಬಳಸದೇ ಇರುವುದರಿಂದ ಖಾಲಿ ಉಳಿದಿವೆ. ಅಂಥವರನ್ನು ಗುರುತಿಸಿ ಕೈಗಾರಿಕೆ ನಡೆಸುವಂತೆ ನೋಟಿಸ್ ನೀಡಬೇಕು. ಕೈಗಾರಿಕಾ ಪ್ರದೇಶದಲ್ಲಿರುವ ನಿವೇಶನಗಳನ್ನು ದುರ್ಬಳಕೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸುರೇಖಾ ಮನೋಳಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ.ಕಮತಗಿ, ಕೆಐಎಡಿಬಿ ಉಪ ಅಭಿವೃದ್ಧಿ ಅಧಿಕಾರಿ ಲಕ್ಷ್ಮೀಕಾಂತ ಮಿತ್ರಾ, ಎಂಎಸ್ ಎಂಇಡಿಐ ಕಲಬುರಗಿಯ ಸಹಾಯಕ ನಿರ್ದೇಶಕ ಎಸ್.ಜವಳಿ, ಬೀದರ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್, ಎಸ್‌ಸಿ-ಎಸ್ಟಿ ಕೈಗಾರಿಕೋದ್ಯಮ ಅಸೋಸಿಯೇಷನ್ ಅಧ್ಯಕ್ಷ ವಿಜಯಕುಮಾರ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಲಶೆಟ್ಟಿ, ವಿವಿಧ ಅಧಿಕಾರಿಗಳು, ಕೈಗಾರಿಕಾ ಕೇಂದ್ರಗಳ ಮುಖ್ಯಸ್ಥರು ಉಪಸ್ಥಿತರಿದ್ದರು.