ಬೀದರ: “ಸ್ವಚ್ಛ ಮತ್ತು ಸುಂದರ’ ಬೀದರ ನಗರಕ್ಕಾಗಿ ಪಣ ತೊಟ್ಟಿರುವ ನಗರಸಭೆ ಇಲ್ಲಿನ ರಸ್ತೆಬದಿಗಳಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ಕಸ ಹಾಕುವ ಸ್ಥಳವನ್ನು ಸ್ವಚ್ಛಗೊಳಿಸಿ, ಅಲ್ಲಿ ರಂಗೋಲಿ ಬಿಡಿಸುವ ಮೂಲಕ ಜಾಗೃತಿಗೆ ಮುಂದಾಗಿದೆ.
Advertisement
ದಿನ ನಿತ್ಯ ರಸ್ತೆಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ತೊಡಗುವ ಪೌರ ಕಾರ್ಮಿಕರು ಗುರುವಾರದಿಂದ ಬಣ್ಣ ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸುತ್ತಿದ್ದಾರೆ. ಇದಕ್ಕೆ ಮಹಿಳಾ ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ. ದಿನಕ್ಕೊಂದು ವಾರ್ಡ್‌ನಲ್ಲಿ ಈ ಜಾಗೃತಿ ಕಾರ್ಯ ನಡೆಸುತ್ತಿದ್ದಾರೆ. ತ್ಯಾಜ್ಯ ಎಸೆಯೋ ಮುನ್ನ ಒಮ್ಮೆ ಈ ರಂಗೋಲಿನಾದ್ರು ನೋಡ್ರಪ್ಪಾ, ನಿಮಗೆ ಕಸ ಬಿಸಾಡುವ ಮನಸ್ಸು ಆಗುವುದಿಲ್ಲ ಎಂದು ಹೇಳುತ್ತಾ ನಿತ್ಯ ತ್ಯಾಜ್ಯ ಎಸೆಯುವ ಜಾಗದಲ್ಲಿ ರಂಗೋಲಿ ಬಿಡಿಸಿ ಅರಿವು ಮೂಡಿಸುತ್ತಿದ್ದಾರೆ.
Related Articles
Advertisement
ಸ್ವಚ್ಛ ಬೀದರಗೆ ಅಪಖ್ಯಾತಿಪ್ರವಾಸೋದ್ಯಮ ನಗರಿ ಬೀದರ ಈ ಹಿಂದೆ ಭಾರತದ 22ನೇ ಸ್ವಚ್ಛ ನಗರ ಮತ್ತು ಕರ್ನಾಟಕ ರಾಜ್ಯದ 5ನೇ ಸ್ವಚ್ಛ ನಗರ ಎಂಬ ಹೆಗ್ಗಳಿಕೆ ಪಡೆದಿತ್ತು. ಆದರೆ, ನಂತರದ ದಿನಗಳಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ತ್ಯಾಜ್ಯ, ಅದರ ನಿರ್ವಹಣೆ ಕೊರತೆಯಿಂದಾಗಿ ಬೀದರ ಈಗ ಅಸ್ವಚ್ಚತೆ ನಗರ ಎಂಬ ಅಪಖ್ಯಾತಿಗೆ ಒಳಗಾಗಿದೆ. ಮುಖ್ಯ ರಸ್ತೆ ಮತ್ತು ಜನನಿಬಿಡ ರಸ್ತೆಗಳ ಬದಿಗಳಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿನ ಕಸ ತಂದು ಎಲ್ಲೆಂದರಲ್ಲಿ ಬಿಸಾಡುತ್ತಾರೆ. ನಗರಸಭೆಯಿಂದ ಕಸ ಸಂಗ್ರಹಿಸಲು ವಾಹನಗಳ ಮನೆ ಬಾಗಿಲಿಗೆ ಬಂದರೂ ಜನ ಮಾತ್ರ ಕಸವನ್ನು ಬೀದಿಗೆ ಚಲ್ಲುತ್ತಾರೆ. ಇದರಿಂದ ಕಸದ ರಾಶಿಗಳು ತುಂಬಿ ದುರ್ವಾಸನೆ ಬೀರುತ್ತಿದೆ. ಹಾಗಾಗಿ ಇದೀಗ ನಗರಸಭೆ ಕಸಮುಕ್ತ ಬೀದರರನ್ನಾಗಿ ಮಾಡಲು ಗುರುವಾರದಿಂದ ರಸ್ತೆ ಬದಿಗಳಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದೆ. ರಸ್ತೆ ಬದಿಗಳಲ್ಲಿ ತಾಜ್ಯ ಹಾಕುವ ಜಾಗಗಳನ್ನು ಗುರುತಿಸಿ ಅಲ್ಲಿನ ಕಸವನ್ನು ಸ್ವಚ್ಛ ಮಾಡಿ, ಸಾರ್ವಜನಿಕರು ಮತ್ತೆ ಕಸ ಸುರಿಯದಂತೆ ಜಾಗೃತಿ ಮೂಡಿಸಲು ಆ ಸ್ಥಳದಲ್ಲಿ ನಗರಸಭೆಯ ಪೌರಕಾರ್ಮಿಕರಿಂದಲೇ ರಂಗೋಲಿ ಹಾಕಿಸಿ ರಸ್ತೆಯನ್ನು ಸುಂದರಗೊಳಿಸಿ ಗಮನ ಸೆಳೆಯಲಾಗುತ್ತಿದೆ. ತಾಜ್ಯ ನಿರ್ವಹಣೆ ನೀಗಿಸಲು ರಂಗೊಲಿ ಒಂದು ಹೊಸ ಅಸ್ತ್ರವಾಗಿದೆ. ಕಸದ ರಾಶಿಯನ್ನು ಪೌರ ಕಾರ್ಮಿಕರು ಎಷ್ಟೇ ಬಾರಿ ತೆರವು ಮಾಡಿದರೂ ಜನ ಮತ್ತೆ ಅಲ್ಲಿ ಕಸ ಹಾಕುತ್ತಾರೆ. ಆದರೆ, ಅದೇ ಜಾಗದಲ್ಲಿ ರಂಗೋಲಿ ಇದ್ದರೆ, ದೈವಿಕ ಭಾವನೆಯಿಂದಾದರೂ ಕಸ ಹಾಕಲು ಯಾರಿಗೂ ಮನಸ್ಸು ಬರುವುದಿಲ್ಲ. ಈ ಪ್ರಯತ್ನ ಕೆಲವು ದಿನ ಮುಂದುವರೆದರೆ ರಸ್ತೆ ಬದಿಗಳಲ್ಲಿ ಕಸದ ರಾಶಿ ಉಂಟಾಗುವುದು ತಪ್ಪಬಹುದು ಎಂಬುದು ನಗರಸಭೆ ಉದ್ದೇಶ.
ಬಿ. ಬಸಪ್ಪ,
ನಗರಸಭೆ ಆಯುಕ್ತ, ಬೀದರ