Advertisement
ಪ್ರತಿ ವರ್ಷ ಎಸ್‌ಸ್‌ಎಲ್‌ಸಿ ಫಲಿತಾಂಶದಲ್ಲಿ ಹಿಂದೇ ಉಳಿಯುತ್ತಿರುವ ಹೈ.ಕ. ಭಾಗದ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ಫಲಿತಾಂಶ ಪಡೆಯಬೇಕು. ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ‘ತೀವ್ರ ನಿಗಾ ಕಲಿಕಾ ಯೋಜನೆ’ ಅನುಷ್ಠಾನಗೊಳಿಸಿದೆ.
Related Articles
Advertisement
ಸರಳ ಭೋದನೆ: ವಿದ್ಯಾರ್ಥಿಗಳಿಗೆ ಕಠಿಣವಾದ ಪರಿಕಲ್ಪನೆಗಳನ್ನು ಆಯಾ ಶಿಕ್ಷಕರು ಗುರುತಿಸಿಕೊಂಡು ಸರಳವಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವಂತೆ ಬೋಧನೆ ಮಾಡಬೇಕಾದ ಮುಖ್ಯ ಅಂಶವನ್ನು ಈ ಯೋಜನೆ ಹೊಂದಿದೆ. ಪ್ರತಿ ಶಿಕ್ಷಕರು ತಮ್ಮ ವಿಷಯಗಳಲ್ಲಿ ಕಠಿಣವಾದ ಕಲ್ಪನೆಗಳನ್ನು ಗುರುತಿಸಿಕೊಂಡು ಶಾಲೆಯ ಮುಖ್ಯ ಶಿಕ್ಷಕರ ಗಮನಕ್ಕೆ ತಂದು ಅವರ ಅನುಮೋದನೆ ಪಡೆದು ನಿಗದಿಪಡೆಸಿರುವ ದಿನ ಹಾಗೂ ಸಮಯ ಅನುಸಾರ ಮಕ್ಕಳಿಗೆ ಬೋಧನೆ ಮಾಡಬೇಕಾಗಿದೆ.
ಮೇಲುಸ್ತುವಾರಿ: ಮುಖ್ಯ ಶಿಕ್ಷಕರು ಪ್ರತಿ ಶಿಕ್ಷಕರ ಕ್ರಿಯಾ ಯೋಜನೆಯಂತೆ ನಿರಂತರವಾಗಿ ಮಕ್ಕಳ ತೀವ್ರ ನಿಗಾ ತರಬೇತಿಗಳು ನಡೆಯುವಂತೆ ಮೇಲುಸ್ತುವಾರಿ ಮಾಡಬೇಕಿದೆ. ತರಬೇತಿಗಳ ಹಾಜರಾತಿಯನ್ನು ಪ್ರತಿದಿನ ಶಾಲೆಯ ಮುಖ್ಯ ಶಿಕ್ಷಕರು ದೃಢೀಕರಿಸುವಂತೆ ಸೂಚಿಸಲಾಗಿದ್ದು, ಆಯಾ ತಾಲೂಕುಗಳ ಬಿಇಒ ಹಾಗೂ ಬಿಆರ್‌ಸಿ, ಇಸಿಒಗಳು ಪರಿಶೀಲನೆ ನಡೆಸಿ ಸೂಕ್ತವಾಗಿ ತರಬೇತಿ ನಡೆಯುವಂತೆ ಮೇಲಸ್ತುವಾರಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕಲಿಕಾ ಉದ್ದೇಶಗಳು: ಸಂಪೂರ್ಣ ಪಠ್ಯಕ್ರಮವನ್ನು ಪುನಃ ಇನ್ನೊಂದು ಸಾರಿ ತೀವ್ರವಾಗಿ ಬೋಧನೆ ಮಾಡಿ ಮುಗಿಸಿ ಮಕ್ಕಳಿಗೆ ಪಾಠದ ಕುರಿತು ಸಂಪೂರ್ಣ ಅರಿವು ಮೂಡಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಪಠ್ಯದಲ್ಲಿರುವ ಕಠಿಣ ಅಂಶಗಳಿಗೆ ವಿಶೇಷ ಒತ್ತು ನೀಡಿ ಅವುಗಳಿಗೆ ಪರಿಹಾರ ನೀಡುವುದು. ಸಾಧ್ಯವಾದಲ್ಲಿ ಪರ್ಯಾಯ ಶಿಕ್ಷಕರು ಈ ಬೋಧನಾ ಕಾರ್ಯ ಕೈಗೊಳ್ಳುವಂತೆ ಪ್ರೋತ್ಸಾಹ ನೀಡುವುದು. ಮಕ್ಕಳ ಕಲಿಕೆಯ ಆಸಕ್ತಿ ಹೆಚಿಸಿ ಕಲಿಕಾ ದೃಢೀಕರಣಗೊಳಿಸುವುದು ಮತ್ತು ಕಲಿಕೆಯಲ್ಲಿ ಪರಿಪೂರ್ಣತೆ ಸಾಧಿ ಸುವಲ್ಲಿ ನೆರವಾಗುವ ಮೂಲಕ ಮಕ್ಕಳಲ್ಲಿರುವ ಕಲಿಕಾ ಭಯ ಮತ್ತು ಆಂತಕಗಳನ್ನು ದೂರ ಮಾಡುವ ಕೆಲಸವನ್ನು ಶಿಕ್ಷಕರು ಮಾಡಬೇಕಿದೆ.
ಅವಧಿ: ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಬೋಧನಾ ಕಾಲಾವ ಧಿ ನಿಗದಿ ಮಾಡಲಾಗಿದ್ದು, ಮಾರ್ಚ್ 21ರಿಂದ ಏ.4ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಆ ಸಂದರ್ಭದಲ್ಲಿ ಕೂಡ ಆಯಾ ಶಿಕ್ಷಕರು ನಿರಂತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕಾಗಿದೆ. ಮುಂಜಾನೆ 8:45 ರಿಂದ 9:45ರ ವರೆಗೆ ಹಾಗೂ ಸಂಜೆ 4:45ರಿಂದ 5:45ರ ವರೆಗೆ ತೀವ್ರ ಕಲಿಕಾ ತರಬೇತಿಗಳು ನಡೆಯಲಿವೆ.
ಪ್ರೋತ್ಸಾಹ ಧನ: ಶಾಲೆಯ ಮುಖ್ಯ ಶಿಕ್ಷಕರು ಹಾಗೂ 3 ವಿಷಯಗಳ ಶಿಕ್ಷಕರಿಗೆ ಪ್ರತಿ ತಿಂಗಳು ತಲಾ ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಫಲಿತಾಂಶ ಬಂದ ನಂತರ ರಾಜ್ಯದ ಸರಾಸರಿ ಫಲಿತಾಂಶಕ್ಕಿಂತ ಹೆಚ್ಚುವರಿ ಫಲಿತಾಂಶ ಪಡೆದ ಶಾಲೆಗಳಿಗೆ ತಲಾ ಶಿಕ್ಷಕರಿಗೆ ಎರಡು ಸಾವಿರ ರೂ. ಪಾರಿತೋಷಕ ಮೊತ್ತ ಹಾಗೂ ಪ್ರಶಂಸಾ ಪತ್ರದೊಂದಿಗೆ ಗೌರವಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಈ ವರ್ಷದ ಮಾಡಲಿದೆ.
ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾಗೊಳ್ಳಿಸಲಾಗುತ್ತಿದೆ. ಇದೀಗ ತೀವ್ರ ನಿಗಾ ಕಲಿಕಾ ಯೋಜನೆ ಅಡಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಹಾಗೂ ಫಲಿತಾಂಶ ಕಡಿಮೆ ಬಂದ ಶಾಲೆಗಳಲ್ಲಿ ವಿಶೇಷ ತರಬೇತಿಗಳನ್ನು ನಡೆಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನಿಡುವುದು, ಪರೀಕ್ಷೆ ಭಯ ದೂರ ಮಾಡುವ ನಿಟ್ಟಿನಲ್ಲಿ ಎಲ್ಲ ಶಾಲೆಗಳ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಕೆಲಸ ನಿರ್ವಹಿಸಲಿದ್ದಾರೆ. ಈ ಯೋಜನೆಯಿಂದ ಹೆಚ್ಚು ಫಲಿತಾಂಶ ಬರುವ ನಿರೀಕ್ಷೆ ಇದೆ.. ಶಿವರಾಚಪ್ಪ ವಾಲಿ, ಬಿಇಒ ದುರ್ಯೋಧನ ಹೂಗಾರ