ಹೊಸನಗರ: ತಾಲೂಕಿನ ಬಿದನೂರು ನಗರದ ಶ್ರೀಧರಪುರದಲ್ಲಿರುವ ಐತಿಹಾಸಿಕ ಕೆಳದಿ ಅರಸರ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸ ಗೊಳಿಸಿರುವುದು ಬೆಳಕಿಗೆ ಬಂದಿದೆ. ನಿಧಿಯಾಸೆಯಾಗಿ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಶ್ರೀಧರಪುರದಲ್ಲಿ ಬಿದನೂರಿನಿಂದ ಆಳ್ವಿಕೆ ನಡೆಸಿದ ಕೆಳದಿ ಅರಸರ 10ಕ್ಕೂ ಹೆಚ್ಚು ಸಮಾಧಿಗಳು ಇದ್ದು ಕಿಡಿಗೇಡಿಗಳ ಕೃತ್ಯಕ್ಕೆ ನಿರಂತರವಾಗಿ ಬಲಿಯಾಗುತ್ತಲೇ ಇದೆ. ಈಗಾಗಲೇ ಒಂದು ಸಮಾಧಿ ಧ್ವಂಸಗೊಂಡಿದ್ದು, ಇದೀಗ ಮತ್ತೂಂದನ್ನು ಧ್ವಂಸಗೊಳಿಸಲಾಗಿದೆ. ಅಲ್ಲದೆ ಪಕ್ಕದ ಸಮಾಧಿಯ ಕಲ್ಲಿಗೂ ಕುಂಕುಮ ಹಚ್ಚಿರುವುದು ಕಂಡುಬಂದಿದೆ.
ಕಳೆದ ಮೂರು ವರ್ಷದ ಹಿಂದೆ ಒಂದು ಸಮಾಧಿಯನ್ನು ಅಗೆದು ಧ್ವಂಸಗೊಳಿಸಲಾಗಿತ್ತು. ಈಗ ಮತ್ತೆ ಅದೇ ದುಷ್ಕೃತ್ಯ ನಡೆದಿದ್ದು ಸಮಾಧಿಯ ಮೇಲಿದ್ದ ಬರಗಳುಳ್ಳ ಕಲ್ಲನ್ನು ಕಿತ್ತುಹಾಕಲಾಗಿದೆ. ಅಲ್ಲದೆ ಸಮಾಧಿ ಜಾಗದಲ್ಲೇ ಗುಂಡಿ ತೋಡಲಾಗಿದೆ. ಸುತ್ತಲೂ ನಿಂಬೆಹಣ್ಣುಗಳು ಕೂಡ ಕಂಡು ಬಂದಿದ್ದು ನಿಧಿಯಾಸೆಗಾಗಿಯೇ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಪಾಳುಬಿದ್ದ ಸಮಾಧಿ: 90ರ ದಶಕದಲ್ಲಿ ಇತಿಹಾಸ ಸಂಶೋಧಕ ದಿ| ಶಂಕರನಾರಾಯಣರಾವ್ ಬಿದನೂರಿನ ಶ್ರೀಧರಪುರದಲ್ಲಿ ಕೆಳದಿ ಅರಸರ ಸಮಾಧಿ ಇರುವ ಬಗ್ಗೆ ಬೆಳಕು ಚೆಲ್ಲಿದ್ದರು. ಪಾಳು ಬಿದ್ದ ಸಮಾಧಿ ಸ್ಥಳದ ಸುತ್ತ ಪುರಾತತ್ವ ಇಲಾಖೆಯಿಂದ ಕಬ್ಬಿಣದ ಬೇಲಿ ನಿರ್ಮಿಸಲಾಗಿತ್ತು. ಆದರೆ ಕಬ್ಬಿಣದ ಗೇಟ್‌ಗಳು ಲೂಟಿಕೋರರ ಪಾಲಾಗಿದ್ದು ಸಮಾಧಿಗೆ ಯಾವುದೇ ಭದ್ರತೆಯೇ ಇಲ್ಲದಂತಾಗಿದೆ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಸಮಾಧಿ ಸಂರಕ್ಷಣೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರಾದ ಚಕ್ಕಾರು ವಿನಾಯಕ ಆರೋಪಿಸಿದ್ದಾರೆ.
ಸಮಾಧಿ ನಶಿಸಲಿದೆ: ಬಿದನೂರಿನ ಅರಸರ ಸಮಾಧಿ ಸೇರಿದಂತೆ ಗಳಿಗೆ ಬಟ್ಟಲು, ಬರೇಕಲ್ಲಿನ ಬತೇರಿ, ಶೂಲದಗುಡ್ಡ, ದರಗಲಗುಡ್ಡ ಭಾಗದಲ್ಲಿ ಈ ಹಿಂದೆ ಪಳೆಯುಳಿಕೆಗಳನ್ನು ಧ್ವಂಸ ಮಾಡಿ ಹಾಳು ಮಾಡಲಾಗಿತ್ತು. ನಿರಂತರವಾಗಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಇತಿಹಾಸ ಪ್ರಿಯರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪುರಾತತ್ವ ಇಲಾಖೆ ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.