Advertisement

“ಭೀಮಾ ಪಲ್‌’ತೊಗರಿ ಮಾರಾಟ; ಸಾಕಾರಗೊಳ್ಳಲಿದೆ ಸರ್ಕಾರದ ನಿರ್ಧಾರ

06:20 PM Mar 09, 2022 | Team Udayavani |

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ 2022-23ನೇ ಸಾಲಿನ ಮುಂಗಡ ಪತ್ರದಲ್ಲಿ ವಿಶಿಷ್ಟವಾದ ಭೌಗೋಳಿಕ ಸೂಚ್ಯಂಕ (ಜಿಟ್ಯಾಗ್‌) ಹೊಂದಿರುವ ತೊಗರಿ ಬೇಳೆಯನ್ನು ಭೀಮಾ ಪಲ್ಸ್‌ ಬ್ರ್ಯಾಂಡ್‌ನ‌ಡಿ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂದು ಘೋಷಿಸಿರುವ ಕುರಿತು ಹಲವಾರು ನಿಟ್ಟಿನಲ್ಲಿ ಅವಲೋಕನ ನಡೆದಿದೆ.

Advertisement

ಬೇಳೆಗೆ ಬೇಕಾಗುವ ತೊಗರಿ ಯಾರ ಹತ್ತಿರ ಖರೀದಿ ಮಾಡಲಾಗುತ್ತದೆ? ಒಂದು ವೇಳೆ ಖರೀದಿಸಿದ್ದ ತೊಗರಿಯನ್ನು ಬೇಳೆಯನ್ನಾಗಿ ಯಾರ ಹತ್ತಿರ ಮಾಡಿಸಲಾಗುತ್ತದೆ? ಜತೆಗೆ ಬ್ರ್ಯಾಂಡ್‌ ಮಾಡುವುದಾದರೆ ಅದಕ್ಕೆ ಬೇಕಾಗುವ ಸಿದ್ಧತೆ ಸರ್ಕಾರದ ಬಳಿ ಈಗ ಇಲ್ಲ. ಒಂದು ವೇಳೆ ಬೇಳೆ ಮಾಡಲು ವ್ಯಾಪಾರಿಗಳಿಗೆ ಟೆಂಡರ್‌ ನೀಡಿದ್ದೇಯಾದಲ್ಲಿ ಗುಣಮಟ್ಟತೆ ಕಾಪಾಡಲು ಹೇಗೆ ಸಾಧ್ಯ? ಇದರ ನಡುವೆ ಒಳ ಒಪ್ಪಂದ ನಡೆದರೆ ಉದ್ದೇಶಕ್ಕೆ ಪೆಟ್ಟು ಬೀಳುವ ಸಾಧ್ಯತೆಗಳಿವೆ. ಒಟ್ಟಾರೆ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿ ಬೇಳೆಯನ್ನು ಬ್ರ್ಯಾಂಡ್ ನಡಿ ಮಾರಾಟ ಮಾಡಬೇಕೆಂಬ ಸರ್ಕಾರದ ನಿರ್ಧಾರ ಸಾಕಾರಗೊಳ್ಳಲಿ ಎನ್ನುತ್ತಿದ್ದಾರೆ ರೈತರು ಹಾಗೂ  ವ್ಯಾಪಾರಿಗಳು.

ಎರಡು ವರ್ಷದಿಂದ ಖರೀದಿ ಇಲ್ಲ: ಬೆಂಬಲ ಬೆಲೆಯಲ್ಲಿ ನೆಫೆಡ್‌ ಮೂಲಕ ಎರಡು ವರ್ಷದಿಂದ ತೊಗರಿ ಖರೀದಿ ಮಾಡಿಲ್ಲ. ಹೀಗಾಗಿ ಬೇಳೆ ಮಾಡಲು ಅದರಲ್ಲೂ ಜಿಟ್ಯಾಗ್‌ಗೆ ಒಳಪಟ್ಟ ಪ್ರದೇಶಗಳಲ್ಲೇ ಬೆಳೆದ ತೊಗರಿಯಿಂದ ಬೇಳೆ ಮಾಡಬೇಕು ಎಂಬುದಿದೆ. ಹೀಗಾಗಿ ಯಾವ ನಿಟ್ಟಿನಲ್ಲಿ ಹೇಗೆ ಬ್ರ್ಯಾಂಡ್‌ ಬೇಳೆ ತಯಾರು ಮಾಡಿ ಮಾರಾಟ ಮಾಡಲಾಗುತ್ತದೆ ಎಂಬುದೇ ತಿಳಿಯದಂತಿದೆ.

ಒಂದು ವೇಳೆ ರೈತ ಉತ್ಪಾದಕ ಕಂಪನಿ (ಎಫ್ ಪಿಒ) ಮೂಲಕವಾದರೂ ತೊಗರಿ ಖರೀದಿ ಮಾಡಬೇಕೆಂದರೆ ನಮ್ಮ ಬಳಿ ಇನ್ನೂ ಎಫ್ ಪಿ ಒ ಬಲಿಷ್ಠವಾಗಿ ರಚನೆಯಾಗಿಲ್ಲ. ಜತೆಗೆ ತೊಗರಿ  ದಾಸ್ತಾನು ಹಾಗೂ ಖರೀದಿ ಸೌಲಭ್ಯ ಹೊಂದಿಲ್ಲ. ಹೀಗಾಗಿ ಹೇಗೆ ತೊಗರಿ ಬೇಳೆ ಬ್ರ್ಯಾಂಡ್ ನೊಂದಿಗೆ ಮಾರುಕಟ್ಟೆಗೆ ಬರುತ್ತದೆ ಎಂಬುದು ನಿಗೂಢವಾಗಿದೆ.

ರೈತರ ಒಕ್ಕೂಟ ರಚನೆಯಾಗಲಿ: ಕಲಬುರಗಿ ತೊಗರಿ ದೇಶದಲ್ಲೇ ಸುಪ್ರಸಿದ್ದ. ಇದೇ ಕಾರಣಕ್ಕೆ ಜಿಟ್ಯಾಗ್‌ ದೊರೆತ್ತಿದೆ. ಹೀಗಾಗಿ ಕೆಎಂಎಫ್ ಮಾದರಿಯಲ್ಲಿ ತೊಗರಿ ಬೆಳೆದ ರೈತರನ್ನು ಒಳಗೊಂಡ ತೊಗರಿ ಉತ್ಪಾದಕರ ಸಹಕಾರ ಒಕ್ಕೂಟ ರಚನೆಯಾಗುವುದು ಹೆಚ್ಚು ಔಚಿತ್ಯವಾಗಿದೆ. ರೈತರ ಒಕ್ಕೂಟ ರಚನೆಯಾಗಿ ಷೇರು ಪಡೆದು ರೈತರನ್ನು ಸದಸ್ಯರನ್ನಾಗಿ ಮಾಡಿಕೊಂಡು ಅವರಿಂದ ತೊಗರಿ ಪಡೆದು ಬೇಳೆ ಉತ್ಪಾದಿಸಿ ಭೀಮಾ ತೊಗರಿ ಬೇಳೆ ಎಂಬ ಬ್ರ್ಯಾಂಡ್ ನೊಂದಿಗೆ ಮಾರುಕಟ್ಟೆಗೆ ಬಿಡಬಹುದಾಗಿದೆ. ರೈತರ ಒಕ್ಕೂಟ ರಚಿಸಿ ಒಕ್ಕೂಟದಡಿ ದಾಲ್‌ ಮಿಲ್‌ ಹಾಗೂ ಗೋದಾಮು ನಿರ್ಮಿಸಿದಲ್ಲಿ ಭೀಮಾ ತೊಗರಿ ಪಲ್ಸೆಸ್‌ ಬ್ರ್ಯಾಂಡ್‌ ದೇಶದಾದ್ಯಂತ ಮಾರಾಟಮಾಡಬಹುದಾಗಿದೆ. ಹೀಗೆ ಮಾಡಲು ಒಂದು ವರ್ಷ ಸಮಯ ತೆಗೆದುಕೊಂಡರೂ ಉತ್ತಮ ಅಡಿಪಾಯ ಹಾಕಿದಂತಾಗುತ್ತದೆ. ಈ ನಿಟ್ಟಿನಲ್ಲಿ ಚರ್ಚೆ ಹಾಗೂ ಮುಕ್ತ ಸಂವಾದ ನಡೆದಲ್ಲಿ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಒಟ್ಟಾರೆ ಮುಂದಿನ ದಿನಗಳನ್ನು ಕಾಯ್ದು ನೋಡಬೇಕಷ್ಟೇ.

Advertisement

ತೊಗರಿ ಮಂಡಳಿಗೆ ನೀಡಿಲ್ಲ ನಯಾಪೈಸೆ

ಜಾತಿಗೊಂದು ರೂಪಿಸಲಾದ ಅಭಿವೃದ್ಧಿ ನಿಗಮ ಮಂಡಳಿಗೆ ನೂರಾರು ಕೋಟಿ ರೂ. ನೀಡಲಾಗಿದೆ. ಆದರೆ ರೈತರಿಗೆ ಯಾವುದೇ ಜಾತಿ ಇಲ್ಲವೆಂದರೂ ಕೋಟ್ಯಂತರ ರೈತರ ಹಿತ ಕಾಯುವ ನಿಟ್ಟಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಮೊದಲಿನ ತೊಗರಿ ಅಭಿವೃದ್ಧಿ ಮಂಡಳಿ ಈಗಿನ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಗೆ ಬಜೆಟ್‌ ದಲ್ಲಿ ನಯಾಪೈಸೆ ಅನುದಾನ ನೀಡದಿರುವುದು ತೊಗರಿ ಬೆಳೆಗಾರರಿಗೆ ಎಸಗಿದ ಅನ್ಯಾಯವಾಗಿದೆ. ಒಂದು ವೇಳೆ ತೊಗರಿ ಮಂಡಳಿಗಾದರೂ ಕನಿಷ್ಟ 10 ಕೋಟಿ ರೂ. ಅನುದಾನ ನೀಡಿದ್ದರೆ ತೊಗರಿ ಮಂಡಳಿಯಿಂದಾದರೂ ದಾಲ್‌ ಮಿಲ್‌ ಹಾಕಬಹುದಿತ್ತು. ದಾಲ್‌ಮಿಲ್‌ ಬಳಹವೆಂದರೆ ಐದಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತದೆ. ರೇಷ್ಮೇ, ಭತ್ತ, ಕಾಫಿ, ಅಡಿಕೆಗೆ ಅನುದಾನ ನೀಡುವ ಸರ್ಕಾರ ತೊಗರಿ ರೈತರತ್ತ ಕಣ್ಣೆತ್ತಿ ನೋಡದಿರುವುದು ನಿಜಕ್ಕೂ ಅನ್ಯಾಯದ ಪರಮವಾವಧಿಯಾಗಿದೆ.

1, 2, 10 ಕೆ.ಜಿಯ ಭೀಮಾ ಬ್ರ್ಯಾಂಡ್‌ನ‌ ತೊಗರಿ ಬೇಳೆ ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಆದರೆ ಬೇಳೆ ಹೇಗೆ ಉತ್ಪಾದನೆ ಮಾಡಲಾಗುತ್ತದೆ ಎಂಬುದನ್ನೇ ಸ್ಪಷ್ಟಪಡಿಸಿಲ್ಲ. ಸರ್ಕಾರದ ಕೆ.ಎಂ.ಎಫ್. ನಂದಿನಿ ಉತ್ಪನ್ನಗಳು ಹೇಗೆ ಜನಮನ್ನಣೆ ಗಳಿಸಿದೆಯೋ ಅದೇ ಮಾದರಿಯಲ್ಲೂ ತೊಗರಿ ಬೇಳೆ ಬ್ರ್ಯಾಂಡ್‌ ಜನಮನ್ನಣೆ ಗಳಿಸಲು ಸರ್ಕಾರ ದೃಢ ಹೆಜ್ಜೆ ಇಡಬೇಕು. ಇದಕ್ಕೆಲ್ಲ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಚಾಶಕ್ತಿಯೇ ಮುಖ್ಯವಾಗಿದೆ.

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next